ಹಳೆ ತಹಸೀಲ್ ಸಂಕೀರ್ಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹ

ಶಹಾಪುರ,

ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ನಗರದ ಹೃದಯ ಭಾಗದಲ್ಲಿರುವ ಹಳೆ ತಹಶೀಲ್ದಾರ್ ಸಂಕೀರ್ಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ ಕಟ್ಟಿಮನಿ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೋರನಹಳ್ಳಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಇಂದು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನಾರರು ಕಳೆದ ಹತ್ತು ವರ್ಷಗಳಿಂದ ಹಳೆ ತಹಸೀಲ್ ಕಚೇರಿಯ ಸ್ಥಳವು ಖಾಲಿ ಇದ್ದು ಇದರಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಭೀಮರಾಯನ ಗುಡಿಯಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗುತ್ತದೆ.ಸುಮಾರು ನಾಲ್ಕೈದು ಕಿಲೋಮೀಟರ್ ದೂರವಿರುವ ಈ ಸ್ಥಳಕ್ಕೆ ಗ್ರಾಮೀಣ ಪ್ರದೇಶದ ಜನರು ಬರುವುದಕ್ಕೆ ಅನಾನುಕೂಲವಾಗುತ್ತದೆ. ಹಳೆಯ ತಹಸಿಲ್ ಕಚೇರಿಯು ಹೊಸ ಬಸ್ ನಿಲ್ದಾಣ, ಕೃಷಿ ಮಾರುಕಟ್ಟೆ, ಬಸವೇಶ್ವರ ವೃತ್ತ, ಹಳೆಯ ಬಸ್ ನಿಲ್ದಾಣಗಳು ಸಮೀಪವಿದ್ದು ಈ ಸ್ಥಳವು ಯಾರಗಿರಿ ಮುಖ್ಯ ರಸ್ತೆಗೆ ಅಂಟಿಕೊಂಡಿರುವುದರಿಂದ ಈ ಸ್ಥಳದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷರಾದ ಹನುಮಂತ ರಾಯಗೌಡ, ಯುವ ಘಟಕದ ಅಧ್ಯಕ್ಷ ಬಸ್ಸು ನಾಯ್ಕೋಡಿ, ಸಂಘಟನಾ ಕಾರ್ಯದರ್ಶಿ ರಾಘು ಗಂಗನಾಳ, ಸಹ ಕಾರ್ಯದರ್ಶಿ ಪವನ್ ಎಡ್ರಾಮಿಕರ್, ನಗರ ಘಟಕ ಅಧ್ಯಕ್ಷ ಭೀಮರಾಯ ಹೈಯ್ಯಳ್ಕರ, ರೈತ ಘಟಕ ಅಧ್ಯಕ್ಷ ಭೀಮಣ್ಣ ಮಾಲಿಪಾಟೀಲ್, ಸುರೇಶ ಉಮಾರದೊಡ್ಡಿ, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರದೀಪ್ ಅಣಬಿ, ಹೊನ್ನಪ್ಪ ನಾಟೇಕರ, ಶಂಕರ ಮದ್ರಿಕಿ,ಯಲ್ಲಪ್ಪ ಸಗರ, ದೇವು ಮಕ್ತಾಪುರ, ಪರಶುರಾಮ ಶಿಕಾರಿ ಸೇರಿದಂತೆ ಇನ್ನಿತರರು ಇದ್ದರು.