ಕೊನೆ ಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯ

ವಡಗೇರಾ:

ನಾರಾಯಣಪುರ ಜಲಾಶಯದಿಂದ ತಾಲೂಕಿನ ಕೊನೆ ಭಾಗದ  ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮರಿಲಿಂಗಪ್ಪ ಸಾಹು ಕುಮನೂರ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸುಮಾರು ವರ್ಷಗಳಿಂದ ತಾಲೂಕಿನ ಕೊನೆಯ ಭಾಗದ ಕುರಕುಂದಿ, ಗೊಂದೆನೂರು, ಕೊಂಕಲ್, ಕುರಿಹಾಳ ,ಬೀರನಕಲ್, ವಡಗೇರಾ ,ಹೊರಟೂರು ಹಾಲಗೇರಾ, ಸೇರಿದಂತೆ ಕೊನೆ ಭಾಗದ ಇನ್ನಿತರ ಗ್ರಾಮಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಮುಟ್ಟುತ್ತಿಲ್ಲ. ಕಾಲುವೆಯ ನೀರಿಲ್ಲದೆ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಜೋಳ, ಶೇಂಗಾ, ಸಜ್ಜೆ, ಇನ್ನಿತರ ಬೆಳೆಗಳು ಒಣಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು  ಆರೂಪಿಸಿದ್ದಾರೆ.ಈ ಭಾಗದಲ್ಲಿ ಕಾಲುವೆಗಳು ನೆಪ ಮಾತ್ರಕ್ಕೆ ಇವೆ. ಸರಿಯಾಗಿ ನೀರು ಹರಿಸದಿದ್ದ ಮೇಲೆ ಕಾಲುವೆಗಳೇಕೆ ಎಂದು ಪ್ರಶ್ನಿಸಿದರು.
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಕಾಲುವೆ ನೀರು ನಂಬಿ ಅದೆಷ್ಟೊ ರೈತರು ಬೆಳೆಗಳನ್ನು ಬಿತ್ತಿದ್ದಾರೆ. ಸರಿಯಾಗಿ ನೀರು ಬರದಿದ್ದ ಕಾರಣ ಬೆಳೆಗಳು ಒಣಗಿವೆ. ರೈತರು ಸಾಲಮಾಡಿ ಹಿಂಗಾರು ಬೆಳೆಗಳ ಬಿತ್ತನೆ ಮಾಡಿಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬೆಳೆಗಳು ಕೈಗೆ ಬರುವ ಹಂತದಲ್ಲಿದ್ದು, ನೀರಿಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಸರ್ಕಾರ, ಅಧಿಕಾರಿಗಳು ಮಾತ್ರ ಕಾಲುವೆಗಳಿಗೆ ನೀರು ಹರಿಸುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ.ರೈತರು ಈಗಾಗಲೇ ಆತಂಕದಲ್ಲಿದ್ದಾರೆ. ಪ್ರತಿ ವರ್ಷವು ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ.ಆದ್ದರಿಂದ  ತಾಲೂಕಿನ ಕೊನೆ ಭಾಗದ ಗ್ರಾಮಗಳಿಗೆ ಏ.15 ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು   ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *