ಕನಕ ವಿಚಾರ ಮಂಥನ…
ಅಧ್ಯಾತ್ಮಿಕ ಸಾಧನೆಯ ಬಲದಿಂದ ಕನಕದಾಸರ ಅಂತರ್ ಚಕ್ಷು ತೆರೆದಿತ್ತು.ತಮ್ಮ ಒಳಗಣ್ಣಿನ ಬಲದಿಂದ ಜಗತ್ತಿನ ವಸ್ತು,ವ್ಯಕ್ತಿ,ಪ್ರಪಂಚ,ದೈವಗಳ ಒಳ ಹೊರಗುಗಳನ್ನು ಅರಿಯಬಲ್ಲ ಅಪರೋಕ್ಷಜ್ಞಾನಿಗಳಾಗಿದ್ದರು ಕನಕದಾಸರು. ಸಂತರಾಗಿ ನಾಡು- ದೇಶದಾದ್ಯಂತ ಸಂಚರಿಸುವ ಸಮಯದಲ್ಲಿ ಅಲ್ಲಲ್ಲಿ ಜನರು ಕ್ಷುದ್ರದೈವಗಳಿಗೆ ಗುಡಿ- ಗುಂಡಾರಗಳನ್ನು ಕಟ್ಟಿಸಿ,ಪೂಜೆ ಸೇವೆ ಗೈಯುತ್ತಿರುವುದನ್ನು ಕಂಡರು.ಜನಸಾಮಾನ್ಯರು ಅಜ್ಞಾನವಶರಾಗಿ ಹತ್ತು ಹಲವು ವ್ಯರ್ಥದೇವರುಗಳನ್ನು ಪೂಜಿಸಿ ಹಾಳಾಗುತ್ತಿರುವುದನ್ನು ಕಂಡು ಮರುಗಿದರು.ಜನಸಾಮಾನ್ಯರ ಧಾರ್ಮಿಕ ಅಜ್ಞಾನವನ್ನು ಕಂಡ ಕನಕದಾಸರು ತಮ್ಮ ‘ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವ’ ಎನ್ನುವ ಕೀರ್ತನೆಯ ಕೊನೆಯಲ್ಲಿ ನೀಡುವ ಸಂದೇಶ ಮಹತ್ವದ್ದು,ವಿಚಾರಪ್ರದವಾದುದು,ಬೋಧಪ್ರದವಾದುದು.
ಉರಗಾದ್ರಿ ವಾಸ ನಾರಾಯಣಾದಿಕೇಶವನ
ಚರಣಕಮಲವನು ಸೇರಿಕೊಳ್ಳದೆ
ವರ– ಶಾಪವಿಲ್ಲದ ಬಣಗು ದೈವಗಳಿಗೆ
ಶರಣೆಂದರೇನು ಶರಣೆನದಿದ್ದರೇನು ?
ಎಂದು ಪ್ರಶ್ನಿಸಿದ್ದಾರೆ.ಬಹುಶಃ ಈ ಕೀರ್ತನೆಯನ್ನು ಅವರು ತಿರುಪತಿಯಲ್ಲಿ ರಚಿಸಿರಬೇಕು.’ಉರಗಾದ್ರಿವಾಸ’ ಎಂದರೆ ಶೇಷಾಚಲವಾಸನಾದ ತಿಮ್ಮಪ್ಪನೆಂದರ್ಥ.ಉರಗ ಎಂದರೆ ಹಾವು ಎಂದರ್ಥ.ಅದ್ರಿ ಎಂದರೆ ಪರ್ವತ.ಉರಗಾದ್ರಿ ಎಂದರೆ ಹಾವಿನಬೆಟ್ಟ,ಸಂಸ್ಕೃತದ ಶೇಷಾಚಲವನ್ನು ಉರಗಾದ್ರಿ ಎಂದು ಕನ್ನಡೀಕರಿಸಿದ್ದಾರೆ ಕನಕದಾಸರು.
ಶೈವರು ಶಿವನನ್ನು ಮುಕ್ತಿದಾತ ಎಂದು ನಂಬಿರುವಂತೆ ವೈಷ್ಣವರು ವಿಷ್ಣುವನ್ನು ಮುಕ್ತಿಪ್ರದಾತ ಎಂದು ನಂಬಿದ್ದಾರೆ. ಬದುಕಿನ ಸರ್ವಶ್ರೇಷ್ಠ ಗುರಿ ಭಗವಂತನ ಸಾಕ್ಷಾತ್ಕಾರ.ಭಕ್ತರಾದವರು ಭಗವಂತನನ್ನು ಕಾಣುವ ಹಂಬಲದಿಂದ ಪೂಜಿಸಬೇಕು.ಪರಮಾತ್ಮನ ದರ್ಶನವೇ ಜೀವನದ ಗುರಿ ಆಗಬೇಕು. ಆದರೆ ಧರ್ಮದ ನಿಜಸ್ವರೂಪವನ್ನರಿಯದ ಅಜ್ಞಾನಿ ಭಕ್ತರುಗಳು ಕಂಡಕಂಡ ಕುನ್ನಿದೈವಗಳನ್ನು ದೇವರು ಎಂದು ಭಜಿಸಿ ಹಾಳಾಗುತ್ತಿದ್ದಾರೆ.ಕ್ಷುದ್ರ ದೈವಗಳಲ್ಲಿ ಶರಣುಹೋಗಿ ಜೀವನವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಕನಕದಾಸರು’ ವರ-ಶಾಪವಿಲ್ಲದ ಬಣಗು ದೈವಗಳಿಗೆ ಶರಣೆಂದರೇನು ಶರಣೆನದಿದ್ದರೇನು?’ ಎಂದು ಪ್ರಶ್ನಿಸಿದ್ದಾರೆ. ಹಾದಿ ಬೀದಿಯ ಕಲ್ಲು ಕಟ್ಟಿಗೆಯ ದೈವಗಳು ದೇವರಲ್ಲ,ಕ್ಷುದ್ರದೈವಗಳ ಪೂಜೆ- ಸೇವೆಗಳಿಂದ ಫಲವಿಲ್ಲ ಎನ್ನುವ ಭಾವ ಇಲ್ಲಿದೆ.
ಭಕ್ತರುಗಳು ತಮ್ಮ ಇಷ್ಟದೈವಕ್ಕಾಗಿ ದೇವಸ್ಥಾನ,ಮಂದಿರಗಳನ್ನು ಕಟ್ಟಿ ಇಷ್ಟದೈವದ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾರೆ.ಅಂತಹ ದೇವರುಗಳಿಗೆ ಒಂದು ಪೂಜಾಪರಂಪರೆಯು ಏರ್ಪಡುತ್ತದೆ.ಕ್ಷುದ್ರದೈವದ ಪೂಜೆಗೊಳ್ವ ಕೀಳು ಬಯಕೆ ಮತ್ತು ಆ ದೇವರ ಹೆಸರಿನಲ್ಲಿ ಹೊಟ್ಟೆಹೊರೆಯುವವರ ಚಾಣಾಕ್ಷತನದಿಂದ ಹುಟ್ಟುವ ದೇವರುಗಳು ಭಕ್ತರನ್ನು ಉದ್ಧರಿಸಬಲ್ಲವೆ ಎನ್ನುವುದು ವಿಚಾರಿಸಬೇಕಾದ ಸಂಗತಿ.ಯೋಗಸಾಧನೆಯ ಬಲದಿಂದ ಧಾರ್ಮಿಕಸೂಕ್ಷ್ಮ ಸಂಗತಿಗಳನ್ನು ಅರಿಯಬಲ್ಲವರಾಗಿದ್ದ ಕನಕದಾಸರು ಭಕ್ತರು ಪ್ರತಿಷ್ಠಾಪಿಸಿದ್ದ ಮೂರ್ತಿಗಳಲ್ಲಿ ದೈವಕಳೆ ಹೊಳೆಯುತ್ತಿದ್ದರೆ,ದೇವರ ಚೈತನ್ಯ ಜಾಗೃತವಾಗಿದ್ದರೆ ಮಾತ್ರ ಅಂತಹ ದೇವರುಗಳನ್ನು ಪೂಜಿಸಬಹುದು ಎನ್ನುತ್ತಾರೆ.ಕಳೆಯೇರದ ಕಲ್ಲು ಕಟ್ಟಿಗೆಯ ಮೂರ್ತಿಗಳನ್ನು ಪೂಜಿಸಿದರೆ ಯಾವ ಪ್ರಯೋಜನವೂ ಇಲ್ಲ ಎನ್ನುವ ಕನಕದಾಸರು ಅಂತಹ ದೈವಗಳಿಗೆ ನಮಸ್ಕರಿಸಿದರೇನು,ನಮಸ್ಕರಿಸದಿದ್ದರೇನು ಎನ್ನುತ್ತಾರೆ.
ಪರಮಾತ್ಮನು ನಿಗ್ರಹಾನುಗ್ರಹ ಸಮರ್ಥನಿರುವನು.ತನ್ನಲ್ಲಿ ಶರಣುಬಂದವರನ್ನು ಅನುಗ್ರಹಿಸಬಲ್ಲ,ತನಗೆ ಅಪಚಾರವೆಸಗಿದವರನ್ನು ನಿಗ್ರಹಿಸಿ,ಶಿಕ್ಷಿಸಬಲ್ಲ ಸರ್ವಶಕ್ತಿಯುಳ್ಳವನಾದ್ದರಿಂದ ಅವನು ಪರಮಾತ್ಮನು.ಪರಮಾತ್ಮನಿಗೆ ಶರಣು ಎಂದರೆ ಫಲ ಉಂಟು.ತನ್ನಲ್ಲಿ ಶರಣು ಬಂದವರನ್ನು ಉದ್ಧರಿಸಬಲ್ಲ ಕರುಣಾಮಯಿಯು ಪರಮಾತ್ಮನು.ಹಾಗೆಯೇ ತನಗೆ ಎರಡೆಣಿಸುವ,ಸಮಾಜಕಟಂಕರನ್ನು ಪರಮಾತ್ಮನು ಶಿಕ್ಷಿಸದೆ ಬಿಡನು.ಪರಮಾತ್ಮನೊಬ್ಬನೇ ಭೋಗ ಮೋಕ್ಷಗಳನ್ನು ಅನುಗ್ರಹಿಸಲು ಶಕ್ತನಿರುವವನು.ತಮ್ಮ ಒಡಲು ಹೊರೆಯುವಾಸೆಯಲ್ಲಿ ಭಕ್ತರನ್ನು ಕಾಡಿ,ಬೇಡುವ ಕ್ಷುದ್ರದೈವಗಳು ಭಕ್ತರಿಗೆ ಏನನ್ನೂ ಕೊಡಲರಿಯವು.ದೇವರು ಎಂದರೆ ನಂಬಿದ ಭಕ್ತರನ್ನು ಉದ್ಧರಿಸುವ ಸಾಮರ್ಥ್ಯ,ಶಕ್ತಿವಿಶೇಷವನ್ನು ಹೊಂದಿರಬೇಕು.ಶರಣು ಎಂದು ನಮಸ್ಕರಿಸುವ ಭಕ್ತರನ್ನು ಉದ್ಧರಿಸುವ,ಶರಣು ಎಂದು ನಮಸ್ಕರಿಸದೆ ಎದೆಯುಬ್ಬಿಸಿ ನಡೆಯುವ ಉನ್ಮತ್ತರನ್ನು ಶಿಕ್ಷಿಸುವ ಶಕ್ತಿ ದೇವರಲ್ಲಿ ಇರಬೇಕು.ಇದೇ ವರಕೊಡುವ,ಶಾಪನೀಡುವ ಶಾಪಾನುಗ್ರಹ ಸಾಮರ್ಥ್ಯ.ಶರಣು ಎಂದು ನಮಸ್ಕರಿಸುವವರಿಗೆ ವರವಿತ್ತು ಉದ್ಧರಿಸದ,ತಮ್ಮೆದುರೇ ಉದ್ಧಟತನದಿಂದ ವರ್ತಿಸುವವರಿಗೆ ಶಾಪನೀಡಿ ನಿಗ್ರಹಿಸಲಾರದ ದೈವಗಳ ಪೂಜೆ ಸೇವೆ ವ್ಯರ್ಥ ಎನ್ನುತ್ತಾರೆ ಕನಕದಾಸರು.
ಆ ದೇವರು,ಈ ದೇವರು ಎಂಬ ಭಾವಭ್ರಮೆಗೊಳಗಾಗಿ ಕಂಡಕಂಡ ಹಾದಿಬೀದಿಯ ದೈವಗಳಿಗೆರಗಿ ಹಾಳಾಗುವ ಭಕ್ತಮಹಾಶಯರು ಕನಕದಾಸರ ಈ ಉಪದೇಶೋಕ್ತಿಯನ್ನು ಅರ್ಥ ಮಾಡಿಕೊಂಡು ಉದ್ಧಾರವಾಗಬೇಕು.ಕ್ಷುದ್ರದೈವಗಳು ದೇವರಲ್ಲ ಎನ್ನುವ ಪಾರಮಾರ್ಥಿಕ ಸತ್ಯವನ್ನು ಮನಗಾಣಬೇಕು.ಕ್ಷುದ್ರ ದೈವಗಳಿಗೆ ಕುರಿ ಕೋಳಿ ಕೋಣಗಳನ್ನು ಬಲಿಗೊಟ್ಟು ಜೀವಹತ್ಯೆಯ ಮಹಾಪಾಪಕ್ಕೆ ಗುರಿಯಾಗಿ ನರಕ ಸೇರುವ ಬದಲು ಭಕ್ತರಿಂದ ಏನನ್ನೂ ನಿರೀಕ್ಷಿಸದೆ ತನ್ನಲ್ಲಿ ಶರಣು ಬರುವವರ ಬೇಡಿಕೆಗಳೆಲ್ಲವನ್ನು ಪೂರೈಸಿ ಉದ್ಧರಿಸುವ ಜಗನ್ನಿಯಾಮಕನಾದ ಪರಮಾತ್ಮನನ್ನು ಪೂಜಿಸಿ ಸೇವಿಸಿ ಉದ್ಧಾರವಾಗಬೇಕು ಎನ್ನುವ ಧರ್ಮಸೂಕ್ಷ್ಮವನ್ನಿಲ್ಲಿ ಉಪದೇಶಿಸಿದ್ದಾರೆ ಲೋಕಗುರು ಕನಕದಾಸರು.
೦೮.೦೩.೨೦೨೬