ಪೊಳ್ಳುಗಟ್ಟಿದ ಸಜ್ಜೆ ತೆನೆ | ಕಳಪೆ ಬೀಜ ವಿತರಣೆ ರೈತರ ಆರೋಪ

ಶಹಾಪುರ,,

ತಾಲೂಕಿನ ದರಿಯಾಪುರ ಗ್ರಾಮದಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಸಜ್ಜೆ ಕಾಳು ಕಟ್ಟುವ ಹಂತದಲ್ಲಿ ಪೊಳ್ಳಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಖಾಸಗಿ ಕಂಪನಿಯಿಂದ ತೆಗೆದುಕೊಂಡು ಬಂದಿದ್ದ ಸಜ್ಜೆ ಬೀಜಗಳು ನಕಲಿಯಾಗಿವೆ. ಪ್ರತಿ ಪಾಕೇಟಿಗೆ 800 ರೂ. ಖರೀದಿಸಿ ಬಿತ್ತನೆ ಮಾಡಿದ್ದೇವೆ. ರಸಗೊಬ್ಬರ, ಕೂಲಿ ಸೇರಿದಂತೆ ಕನಿಷ್ಠ ಎಂದರೂ ಪ್ರತಿ ಎಕರೆಗೆ 10,000ಯಂತೆ ಖರ್ಚು ಮಾಡಿದ್ದೇವೆ. ಇನ್ನೇನು ಬೆಳೆ ಕಾಳು ಕಟ್ಟುವ ಹಂತದಲ್ಲಿಯೇ ಸುಂಕ ಕಟ್ಟಿ ಜೋಳ್ಳಾಗಿವೆ. ದರಿಯಾಪುರ ಸೇರಿದಂತೆ ಸುತ್ತಲಿನ ಸುಮಾರು 50 ಎಕರೆಗೂ ಹೆಚ್ಚು ಜಮೀನಿನಲ್ಲಿ 30ಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದು, ಈಗ ನಷ್ಟ ಅನುಭವಿಸಿದ್ದೇವೆ ಎಂದು ರೈತ ಯಂಕಣ್ಣ ಅಳಲು ತೋಡಿಕೊಂಡರು.
ಕೃಷಿ ಅಧಿಕಾರಿ ಭೇಟಿ ಪರಿಶೀಲನೆ.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ಭೇಟಿ ನೀಡಿ ಸಜ್ಜೆ ಬೆಳೆ ಪರಿಶೀಲಿಸಿದರು. ಸಜ್ಜೆಯ ಕಾಳು ಸೆಟ್ಟಿಂಗ್ ಸರಿಯಾಗಿ ಆಗಿಲ್ಲ. ಸಜ್ಜೆಯ ತೆನೆಯ ಶೇ. 50ರಷ್ಟು ಪೊಳ್ಳಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗುವುದು. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ರೈತರು ತಾವು ತೆಗೆದುಕೊಂಡ ರಸೀದಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ರೈತರು ಪದೇಪದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ  ಹತ್ತಿ ಬೆಳೆ ಕೈ ಕೊಟ್ಟಿದೆ. ಪ್ರಸ್ತುತ ಸಜ್ಜೆ ಬೆಳೆದ ರೈತರು ಬೆಳೆಯು ಕಾಳು ಕಟ್ಟುವ ಮುನ್ನವೇ ಪೊಳ್ಳಾಗಿದ್ದು, ಖಾಸಗಿ ಕಂಪನಿಯ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ದರಿಯಾಪುರ ಗ್ರಾಮದ ರೈತ ಭೀಮನಗೌಡ ಪಾಟೀಲ್ ಸರಕಾರಕ್ಕೆ ಆಗ್ರಹಿಸಿದರು.

Leave a Reply

Your email address will not be published. Required fields are marked *