ಬಸವರಾಜ ಕರೇಗಾರ
ಕವಿಡೆಸ್ಕ.
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದಾರೆ. ಸುಧೀರ್ಘ ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದ್ದು, ನನಗೆ ನನ್ನಿಂದ, ಸಚಿವರು ಮತ್ತು ಶಾಸಕರಿಂದ ಪೋಸ್ ಕೊಡುವವರು ಬೇಡ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷ ಸಂಘಟಿಸುವಲ್ಲಿ ನಿರತರಾಗಿರುವವರು ಬೇಕು ಎಂದು ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರೇಟರ್ ಬೆಂಗಳೂರು ಚುನಾವಣೆಗಳು ಹತ್ತಿರ ಬರುತ್ತಿದ್ದು, ಇವೆಲ್ಲವುಗಳನ್ನು ಕಾಂಗ್ರೆಸ್ ಗೆಲ್ಲಬೇಕಿದೆ.ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಿ ಗೆಲುವು ತಂದುಕೊಡಬೇಕು ಎಂದರು.
ಶಾಸಕರ,ಸಚಿವರಿಂದ ಪೋಸ್ ಕೊಡುವವರ ಸಂಖ್ಯೆ ಹೆಚ್ಚಳ !
ಕ್ಷೇತ್ರಗಳಲ್ಲಿ ಕಾರ್ಯಕರ್ತರು ಶಾಸಕರು ಮತ್ತು ಸಚಿವರಿಂದ ಓಡಾಡಿಕೊಂಡಿದ್ದಾರೆ. ಶಾಸಕರ ಹಿಂದೆ ಇದ್ದರೆ ಸಾಕು ಏನೆಲ್ಲಾ ಕೆಲಸವಾಗುತ್ತವೆ.ಚುನಾವಣೆಯಲ್ಲಿ ಶಾಸಕರಾಗುವವರು ಓಡಾಡಿ ಗೆಲ್ಲುತ್ತಾರೆ ಎನ್ನುವ ಮನೋಭಾವನೆ ಉಳ್ಳವರು ಎಲ್ಲಾ ಪಕ್ಷದಲ್ಲಿದ್ದಾರೆ. ಸಾಮಾಜಿಕ ಜಾಲತಾಣವಾದಾಗಿನಿಂದ ಗುಪ್ತವಾಗಿ ಮುಖ್ಯಮಂತ್ರಿ, ಸಚಿವರ, ಶಾಸಕರ ಹಿಂದೆ ನಿಂತು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದರಾಯಿತು ಕೆಲಸ ಆದ ಹಾಗೆ ಅಂತವರೇ ಹೆಚ್ಚಾಗಿದ್ದಾರೆ. ಸಚಿವರು ಮತ್ತು ಶಾಸಕರ ಕಾರ್ಯಗಳನ್ನು ವ್ಯಾಟ್ಸಪ್, ಗ್ರೂಪ್ಗಳಲ್ಲಿ,ಸ್ಟೇಟಸ್, ಫೇಸ್ಬುಕ್ ಹರಿಬಿಡುವುದರಿಂದ ಸಚಿವರು ಶಾಸಕರು ಮತ್ತು ಜನರು ನೋಡುತ್ತಾರೆ. ನಾನು ಸಚಿವರ ಹಿಂದೆ ಇರುವೆ. ಶಾಸಕರು ಮತ್ತು ಸಚಿವರು ಹೇಳಿದರೆ ಸಾಕು ನಮ್ಮ ಕೆಲಸವಾಗುತ್ತದೆ ಎನ್ನುವ ಭಾವನೆ ಶೇ 80ರಷ್ಟು ಪಕ್ಷದ ಕಾರ್ಯಕರ್ತರಿಗಿದೆ.ಇದನ್ನೆಲ್ಲಾ ಕಂಡರೂ ಕೂಡ ಅಧಿಕಾರದಲ್ಲಿರುವವರು ಮೌನ ವಹಿಸಿರುವುದು ದುರಾದೃಷ್ಟ.
ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರ ಗತಿ ಏನು?
ಚುನಾವಣೆಗಳಲ್ಲಿ ಯಾರನ್ನು ಲೆಕ್ಕಿಸದೆ ಪಕ್ಷ ಕೊಟ್ಟಿರುವ ಟಾಸ್ಕ ಇಟ್ಟುಕೊಂಡು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ಕಾರಣರಾದ ಸಾವಿರಾರು ಕಾರ್ಯಕರ್ತರ ಗತಿ ಏನು? ಗೆದ್ದ ಶಾಸಕರು ಇಂಥವರನ್ನು ಗುರುತಿಸುವುದೇ ಇಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜ್ಯನಾಯಕರು ಇವರನ್ನು ನೆನಪಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಎನ್ನುತ್ತಾರೆ. ಇದೆಂತಹ ದುರದೃಷ್ಟ ನೋಡಿ ಗೆದ್ದ ನಂತರ ಶಾಸಕರ ಹಿಂದೆ ಓಡಾಡುವವರೇ ಬೇರೆ.ಹಗಲಿರುಳೆನ್ನದೆ ಪಕ್ಷದ ಕಾರ್ಯ ಮಾಡಿ ಗೆಲುವು ತಂದು ಕೊಟ್ಟ ಕಾರ್ಯಕರ್ತರು ಮಾಯವಾಗಿಬಿಡುತ್ತಾರೆ.
ಖಡಕ್ ನಾಯಕ ಹರಿಪ್ರಸಾದ್ ಗೆ ಕೆಪಿಸಿಸಿ ಪಟ್ಟ.
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಬಿಕೆ ಹರಿಪ್ರಸಾದ್ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಹರಿಪ್ರಸಾದ್. ಪಕ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದೆ. ಚಾಚು ತಪ್ಪದೇ ಹೈಕಮಾಂಡ್ ನಿರ್ಧಾರವನ್ನು ತಲೆ ಮೇಲೆ ಹೊತ್ತುಕೊಂಡು ಕಾರ್ಯ ಮಾಡುವ ಬಿ.ಕೆ.ಹರಿಪ್ರಸಾದ್ 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಲಾದರೂ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡು ಬುರುಡೆ ಕಾರ್ಯಕರ್ತರನ್ನು ನಂಬಿ ಕೆಡುವುದಕ್ಕಿಂತ ನಿಷ್ಠಾವಂತ ಕಾರ್ಯಕರ್ತರ ಕಡೆ ಗಮನ ಹರಿಸಬೇಕಿದೆ….