ಶಹಾಪುರ,
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಹಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಪಾಟೀಲ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಹಸಿರು ಪರಿಸರವೇ ಆರೋಗ್ಯಕರ ಬದುಕಿನ ಮೂಲಾಧಾರವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯಗಳು ಮಾನವನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಸಸಿ ನೆಟ್ಟು ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು. ಕೇವಲ ವಿಶ್ವ ಪರಿಸರ ದಿನದಂದು ಮಾತ್ರವಲ್ಲದೆ ವರ್ಷಪೂರ್ತಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಆಸ್ಪತ್ರೆಯ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಮರಗಳು ಶುದ್ಧ ಗಾಳಿ, ನೆರಳು ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ ಮಂಜುನಾಥ,ಜ್ಯೋತಿ-ನರ್ಸಿಂಗ ಮೇಲ್ವಿಚಾರಕಿ, ಅಸಿ ಅಧಿಕಾರಿಗಳಾದ ವಿಜಯಕುಮಾರಿ, ಜಯರಾಂ ಹಾಗೂ ರಾಚಯ್ಯ ಭದ್ರತಾ ರಕ್ಷಕ, ಮಂಜುನಾಥ ಪ್ರಕಾಶ, ಶಿವಣ್ಣ ಸೇರಿದಂತೆ ಇತರರು ಇದ್ದರು.