ಮಹಾತ್ಮನನ್ನು ಮೆರೆಸಿದ ನೆಲದಲ್ಲಿ ಮರೆಸುವ ವ್ಯವಸ್ಥಿತ ಸಂಚು :: ಜಿ.ಕುಮಾರ ನಾಯಕ ಲೋಕಸಭಾ ಸಂಸದರು ರಾಯಚೂರು

ಮಹಾತ್ಮನನ್ನು ಮೆರೆಸಿದ ನೆಲದಲ್ಲಿ ಮರೆಸುವ ವ್ಯವಸ್ಥಿತ ಸಂಚು……

 ಲೇಖನ : ಜಿ.ಕುಮಾರ ನಾಯಕ,ಲೋಕಸಭಾ ಸಂಸದರು, ರಾಯಚೂರು.

ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಇಂದು ಆಗಾಗ್ಗೆ ಉಲ್ಲೇಖಿಸಲಾಗುತ್ತಿದೆ; ಆದರೆ ಅವರ ಆದರ್ಶಗಳು ಮೂಲೆಗುಂಪಾಗಿವೆ. ಭಾರತೀಯ ಜನತಾ ಪಕ್ಷದ ಅಡಳಿತದ ಕರಿನೆರಳಿನಡಿ ಗಾಂಧೀಜಿ ಅವರನ್ನು ಒಂದು ‘ಶೋ ಪೀಸ್’ ಆಗಿ ಬಳಸಲಾಗುತ್ತಿದೆ. ಆದರೆ ಅವರ ಆಲೋಚನೆಗಳು ನಗಣ್ಯವಾಗಿವೆ. ಈಗ ಉಳಿದಿರುವುದು ಗಾಂಧೀಜಿ ಅವರ ಪ್ರತಿಮೆ ಮಾತ್ರ; ನಿಧಾನವಾಗಿ ಕೈಬಿಟ್ಟಿರುವುದು ಅವರ ಅಲೊಚನೆ, ಸಿದ್ಧಾಂತ.

ಇದು ಗಾಂಧೀಜಿ ಅವರ ನೇರ ತಿರಸ್ಕಾರವಲ್ಲ ಬದಲಾಗಿ, ಅವರ ಆಲೋಚನೆಗಳ ಉಪಸ್ಥಿತಿಯನ್ನು ಬದಿಗೊತ್ತುವ ಪ್ರಯತ್ನ.

ಈ ಖಾಲಿತನವು ಸಂಸ್ಥೆಗಳಲ್ಲೂ ಸಾರ್ವಜನಿಕ ವಲಯಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹೆಸರು ಬದಲಿಸುವ ಯತ್ನ ಮೊದಲ ಉದಾಹರಣೆಯಲ್ಲ.

ಸಂಸತ್ ಭವನ ಸಂಕೀರ್ಣದಲ್ಲಿದ್ದ ಗಾಂಧಿ‌ ಪ್ರತಿಮೆಯನ್ನು ಪ್ರಮುಖ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರವೆಂದು ಹೇಳಲಾಗಿದ್ದರೂ, ಈ ಕ್ರಮವನ್ನು ಗಣರಾಜ್ಯದ ರಾಜಕೀಯ ಕಲ್ಪನೆಯಲ್ಲಿ ಗಾಂಧೀಜಿ ಅವರ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ಕುಗ್ಗಿಸುವ ಸಂಕೇತವಾಗಿ ಅನೇಕರು ಅರ್ಥಮಾಡಿಕೊಂಡಿದ್ದಾರೆ.

ಜನರ ಸ್ಮೃತಿಯಲ್ಲೂ ಇದೇ ಮಾದರಿ ಕಾಣುತ್ತದೆ. ಗುಜರಾತ್‌ನ ದಂಡಿ ಕುಟೀರ ಗಾಂಧೀಜಿ ಅವರಿಗೆ ಸಮರ್ಪಿತವಾದ ಭಾರತದ ಅತಿದೊಡ್ಡ ಮ್ಯೂಸಿಯಂ. ಅವರ ಜೀವನವನ್ನು ಆಧುನಿಕ ತಂತ್ರಜ್ಞಾನದಿಂದ ನಿರೂಪಿಸುತ್ತದೆ. ಆದರೆ ಹತ್ಯೆಯ ಕ್ಷಣಕ್ಕೆ ಬಂದಾಗ, ಕೊಲೆಗಾರನನ್ನು ಕೇವಲ “ಒಬ್ಬ ವ್ಯಕ್ತಿ” ಎಂದು ಮಾತ್ರ ಉಲ್ಲೇಖಿಸುತ್ತದೆ.

ನಾಥೂರಾಂ ಗೋಡ್ಸೆ ಎಂಬ ಹೆಸರು ಅಥವಾ ಆ ಅಪರಾಧಕ್ಕೆ ಪೋಷಕವಾದ ಸಿದ್ಧಾಂತದ ಯಾವುದೇ ಉಲ್ಲೇಖವಿಲ್ಲ—ಅವನ ದೋಷಾರೋಪಣೆ ಮತ್ತು ಗಲ್ಲುಶಿಕ್ಷೆ ಇತಿಹಾಸದ ನಿರ್ವಿವಾದ ಸತ್ಯಗಳಾಗಿದ್ದರೂ. ವ್ಯವಸ್ಥಿತ‌‌ ನಿರೂಪಣೆ ಶಾಲಾ ಶಿಕ್ಷಣದಲ್ಲಿಯೂ ಮುಂದುವರಿದಿದೆ. ರಾಷ್ಟ್ರೀಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿ (NCERT) ಪುಸ್ತಕಗಳಲ್ಲಿ ಗಾಂಧಿ ಹತ್ಯೆಯಲ್ಲಿ ದ್ವೇಶವನ್ನು ಪ್ರತಿನಿಧಿಸುವ ಅತಿರೇಕಿಗಳ ಪಾತ್ರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಿಷೇಧಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಿದೆ.

ಗಾಂಧಿಯ ಪರಂಪರೆಗೆ ಆಗಿರುವ ಅತಿ ಗಂಭೀರ ಹಾನಿ ರಾಷ್ಟ್ರವಾದದ ಸ್ವರೂಪಾಂತರದಲ್ಲಿದೆ. ಗಾಂಧಿಗೆ ರಾಷ್ಟ್ರವು ನೈತಿಕ ಯೋಜನೆ—ನ್ಯಾಯ, ವಿನಯ ಮತ್ತು ದುರ್ಬಲರ ರಕ್ಷಣೆಯಿಂದ ಬೇರ್ಪಡಲಾಗದ ಮೌಲ್ಯ. ಆದರೆ ಇಂದು ಅಧಿಕಾರವನ್ನು ಪ್ರಶ್ನಿಸುವುದೇ ದ್ರೋಹವೆಂದು ಬಿಂಬಿಸಲಾಗುತ್ತಿದೆ; ಸಹಾನುಭೂತಿ ದುರ್ಬಲತೆಯಂತೆ ತಿರಸ್ಕೃತವಾಗುತ್ತಿದೆ. ರಾಷ್ಟ್ರವಾದವು ಇನ್ನು ನೈತಿಕವಾಗಿಲ್ಲ, ಆತ್ಮಪರಿಶೀಲನೆಯೂ ಇಲ್ಲ; ಅದು ಆಕ್ರಮಣಕಾರಿ, ಅನುಸರಣಾಶೀಲ ಮತ್ತು ಭಿನ್ನಾಭಿಪ್ರಾಯಕ್ಕೆ ಅಸಹಿಷ್ಣು.

ಈ ಬದಲಾವಣೆ ಬಿಜೆಪಿಯ ಆಡಳಿತದಡಿ ಸಮಕಾಲೀನ ಭಾರತೀಯ ರಾಜ್ಯದ ಸ್ವಭಾವದಲ್ಲಿಯೂ ಪ್ರತಿಬಿಂಬಿಸುತ್ತದೆ—ನೈತಿಕ ಪ್ರೇರಣೆಯಿಗಿಂತ ಬಲವಂತದ ಅಧಿಕಾರಕ್ಕೆ ಹೆಚ್ಚು ಒತ್ತು. ಭಿನ್ನಮತದ ಧ್ವನಿಗಳನ್ನು ಮೌನಗೊಳಿಸಲು ದೇಶದ್ರೋಹ ಮತ್ತು ಭಯೋತ್ಪಾದನೆ ವಿರೋಧಿ ಕಾನೂನುಗಳ ರೂಢಿಯಾದ ಬಳಕೆ, ಹಿಂಸಾಚಾರದ ಸಾಮಾನ್ಯೀಕರಣ, ಪ್ರತಿಭಟನೆಯ ಪರಂಪರೆ ಕ್ರಮೇಣ ಕುಗ್ಗುತ್ತಿರುವುದು—ಇವೆಲ್ಲವೂ ಒಪ್ಪಿಗೆಯ ಬದಲು ನಿಯಂತ್ರಣದ ಮೂಲಕ ಅಧಿಕಾರವನ್ನು ಜಾರಿಗೊಳಿಸುವ ಪ್ರವೃತ್ತಿಯನ್ನು ತೋರಿಸುತ್ತವೆ. ಮಣಿಪುರದಲ್ಲಿ ದೀರ್ಘಕಾಲದ ಹಿಂಸಾಚಾರಕ್ಕೆ ಸಮಗ್ರ, ಪ್ರಾಮಾಣಿಕ ಸಂಸತ್ತಿನ ಪರಿಶೀಲನೆಗೆ ಬದಲು ತಪ್ಪಿಸಿಕೊಳ್ಳುವ ನಿಲುವು ಕಾಣಿಸಿಕೊಂಡಿರುವುದು ಈ ವಿಫಲತೆಯ ಕಟು ಉದಾಹರಣೆ.

ಅಹಿಂಸೆ ರಾಜ್ಯದಿಂದಲೇ ಅತ್ಯಂತ ಸಂಯಮವನ್ನು ಬೇಡಿತು. ಆದರೆ ಇಂದು ಆ ಮೂಲಭೂತ ಬೇಡಿಕೆಯನ್ನು ಮೌನವಾಗಿ ಕೈಬಿಟ್ಟಂತಾಗಿದೆ. ಗಾಂಧಿಯ ಪ್ರತಿಮೆ ಕಲ್ಲಿನಲ್ಲಿ, ಘೋಷಣೆಗಳಲ್ಲಿ, ವೈಭವದಲ್ಲಿ ಉಳಿದಿದೆ; ಆದರೆ ಅಧಿಕಾರವು ನೈತಿಕತೆಗೆ ಉತ್ತರಿಸಬೇಕು ಎಂಬ ಅವರ ಅಲೊಚನೆಗೆ ಬದಿಗೊತ್ತಲಾಗಿದೆ. ಉಳಿದಿರುವುದು—ಗಾಂಧಿಯನ್ನು ಉಲ್ಲೇಖಿಸುತ್ತಲೇ ಅವರು ನಿಂತಿದ್ದ ಎಲ್ಲದರ ವಿರುದ್ಧ ಕ್ರಮೇಣ ದೂರ ಸಾಗುತ್ತಿರುವ ರಾಷ್ಟ್ರ…..