ಶಹಾಪುರ,
ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ನಂತರ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಕೊಡಬೇಕು.ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ಜಾಗದಲ್ಲಿ ಆಡಳಿತ ಸೌಧ ಕಟ್ಟುವುದು ನ್ಯಾಯ ಸಮ್ಮತವಲ್ಲ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕಾಲೇಜುಗಳನ್ನು ವಸತಿ ನಿಲಯಗಳನ್ನು ನಿರ್ಮಾಣ ಮಾಡಿ ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ.ಅದು ಬಿಟ್ಟು ಬೇರೆ ಇಲಾಖೆಗಳ ಕಟ್ಟಡ ಕಟ್ಟಲು ನಮ್ಮ ವಿರೋಧವಿದೆ. ಹೋರಾಟಗಾರರು ನಡೆಸುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ವಿರೋಧಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾಲೇಜು ಜಾಗ 88 ಎಕರೆ ಇದೆ. ನಾನು ಶಾಸಕನಾಗಿರುವ ಸಂದರ್ಭದಲ್ಲಿ ಜಾಗ ಒತ್ತುವರಿಯಾಗಿತ್ತು. ಅದನ್ನು ತಹಸಿಲ್ದಾರ್ ಮತ್ತು ಪೊಲೀಸರೊಂದಿಗೆ ತೆರವುಗೊಳಿಸಿ ಕಾಂಪೌಂಡ್ ಗೋಡೆ ನಿರ್ಮಾಣವಾಗಿದೆ. ಆದರ್ಶ ವಿದ್ಯಾಲಯಕ್ಕೆ ಜಾಗ ಕೊಟ್ಟು ಶಿಕ್ಷಣಕ್ಕೆ ಉತ್ತೇಜನ ನೀಡಿದ್ದೇನೆ. ಈ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಯಿತು. ಜಾಗ ಹುಡುಕಾಟ ನಡೆದಾಗ ನಾನು ನಮ್ಮ ಶಹಪುರದಲ್ಲಿ ಸ್ಥಳಾವಕಾಶವಿದೆ ಈ ಕಾಲೇಜಿಗೆ ಬೇಕಾದ 30 ಎಕರೆ ಜಮೀನು ನೀಡುವುದಾಗಿ ಮನವಿ ಮಾಡಿದ್ದೆ. ಆದರೆ ಮೆಡಿಕಲ್ ಕಾಲೇಜ್ ಜಿಲ್ಲಾಮಟ್ಟದಲ್ಲಿ ಇರಬೇಕು ಎಂದರು.

ನನ್ನ ಅಧಿಕಾರ ಅವಧಿಯಲ್ಲಿ ಹಳೆ ತಹಸೀಲ್ ಕಚೇರಿ ಕೆಡವಿ ಹೊಸ ಕಟ್ಟಡ ನಿರ್ಮಿಸಲು 3 ಕೋಟಿ ಹಣ ಬಿಡುಗಡೆ ಮಾಡಿದ್ದೆ. ಕೆಲಸನೂ ಪ್ರಾರಂಭವಾಯಿತು. ಕೆಲವೇ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ನಾನು ಪರಾಭವಗೊಂಡೆ ಆ ಕೆಲಸ ಅಲ್ಲಿಗೆ ನಿಂತು ಹೋಯ್ತು. ಅಲ್ಲಿ 4 ಎಕರೆ ಜಮೀನಿರುವುದರಿಂದ ಆ ಜಾಗದಲ್ಲಿ ಪ್ರಜಾಸೌಧ ಕಟ್ಟಿದರೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಶಾಸಕರಾದವರು ಮಂತ್ರಿಯಾದವರು ಸ್ವ ಇಚ್ಚೆಯಂತೆ ನಡೆದುಕೊಳ್ಳದೆ ಜನರ ಆಶೋತ್ತರಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಈ ಕ್ಷೇತ್ರ ಪ್ರತಿನಿಧಿಸಿದ ಮಂತ್ರಿಗಳು ಏಕ ಪಕ್ಷಿಯ ನಿರ್ಧಾರ ತೆಗೆದುಕೊಳ್ಳದೆ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಅಹಿಂಧ ಅಧ್ಯಕ್ಷ ಶೇಖರ್ ದೊರೆ ಅವರು, ಶಿಕ್ಷಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ಕಟ್ಟಲೇಬೇಕಾದ ಅನಿವಾರ್ಯತೆ ಏನಿದೆ? ಎಂದು ಪ್ರಶ್ನಿಸಿದರು. ಜೆಡಿಎಸ್ ತಾಲೂಕ ಅಧ್ಯಕ್ಷ ವಿಠ್ಠಲ್ ವಗ್ಗಿ ಅವರು ಮಾತನಾಡಿ, ಸರಕಾರ ಅವರದೇ ಇರುವುದರಿಂದ ಹೋರಾಟಗಾರರ ಮೇಲೆ ಒತ್ತಡ, ದಬ್ಬಾಳಿಕೆ, ಬಂಧನ ಅಸ್ತ್ರ ಉಪಯೋಗಿಸಬಹುದು. ಹೋರಾಟಗಾರರು ಧೈರ್ಯವಾಗಿ ಹೆದರದೆ ಹೋರಾಟ ಮುಂದುವರಿಸಿ. ಕ್ಷೇತ್ರದ ಜನತೆ ನಿಮ್ಮ ಬೆಂಬಲ ಇದೆ ಎಂದರು.

ವಾಲ್ಮೀಕಿ ನಾಯಕರ ಸಂಘದ ತಾಲೂಕ ಅಧ್ಯಕ್ಷ ಮರೆಪ್ಪ ಪ್ಯಾಟಿಯವರು, ನಗರ ಹಾಗೂ ತಾಲೂಕಿನಾದ್ಯಂತ ಜನತೆಗೆ ಹಳೆಯ ತಹಸೀಲ್ ಕಚೇರಿ ಜಾಗ ಅತ್ಯಂತ ಸೂಕ್ತ ಸ್ಥಳ. ಸಾಮಾನ್ಯ ಜನರು ಸಹ ಈ ಕಚೇರಿಗೆ ನಡೆದುಕೊಂಡು ಹೋಗಬಹುದು. ಆದರೆ ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಿಸಿದರೆ ಆ ಕಚೇರಿಗೆ ಮುಟ್ಟಲು ರೂ.100 ಖರ್ಚಾಗುತ್ತದೆ. ಹಳೆಯ ತಹಸೀಲ್ ಕಚೇರಿಯಲ್ಲಿ ಪ್ರಜಾಸೌಧ ನಿರ್ಮಾಣವಾಗಲಿ. ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಯಾವುದೇ ಕಾರಣಕ್ಕೂ ಪ್ರಜಾಸೌಧ ಕಟ್ಟಲು ಬಿಡುವುದಿಲ್ಲ ಎಂದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕರಾದ ಮಲ್ಲಣ್ಣ ಪರಿವಾರ ಮಾತನಾಡಿ,ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಅಕ್ಷರವಂತರು ಹೋರಾಟ ಮಾಡಬೇಕು. ಅವರು ಮಾಡದೆ ಇದ್ದಾಗ ರೈತರು ಶಿಕ್ಷಣ ಜಾಗ ಉಳಿಸಲು ಹೋರಾಟ ನಡೆಸಿದ್ದೇವೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಮಹೇಶ್ ಗೌಡ ಸುಬೇದಾರ್ ಅವರು, ನಮ್ಮ ಹೋರಾಟವೇನಿದ್ದರೂ ಶಿಕ್ಷಣದ ಜಾಗದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸಲು ಬಿಡುವುದಿಲ್ಲ. ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ ಎಂದರು. ಹೋರಾಟಕ್ಕೆ ಬೆಂಬಲಿಸಿದ ಶಿಕ್ಷಣ ಪ್ರೇಮಿಗಳಿಗೂ, ಜನಪ್ರತಿನಿಧಿಗಳಿಗೂ ಹಾಗೂ ಪ್ರಗತಿಪರ ಚಿಂತಕರಿಗೆ ಅಭಿನಂದನೆ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಈ ಪ್ರತಿಭಟನೆ ವೇಳೆ, ಕನ್ನಡಪರ ಸಂಘಟನೆಯ ರಾಜ್ಯದ್ಯಕ್ಷ ಅಂಬರೀಶ್ ಬಿಲ್ಲವ, ಭೀಮಶಂಕರ್ ಕಟ್ಟಿಮನಿ, ಅಕ್ಷಯ್ ಗೌಡ ಕಟ್ಟಿಮನಿ, ನಗರ ಸಭೆ ಸದಸ್ಯ ಅಶೋಕ್ ನಾಯಕ್, ಮರಿಯಪ್ಪ ಹೈಯಾಳ್ಕರ್, ಮರಿಯಪ್ಪ ದೊಡ್ಡಮನಿ, ಮುರಳಿ ಕುಲಕರ್ಣಿ, ವಿಕಾರ್ ಕುರೇಶಿ, ರವಿ ಬೊಮ್ಮನಹಳ್ಳಿ, ಹನುಮಂತ ಪೂಜಾರಿ, ಶ್ರೀನಿವಾಸ್ ನಾಯಕ ವನದುರ್ಗ, ರೈತ ಮುಖಂಡರಾದ ಪ್ರಕಾಶ್ ರೆಡ್ಡಿ ರಸ್ತಾಪುರ್, ಚಂದನ್ ಗೌಡ ಹಬ್ಬಳ್ಳಿ, ಶರಬಣ್ಣ ಕೋಳೂರು, ದಲಿತ ಹಾಗೂ ಮೈನಾರಿಟಿ ಸೇನೆಯ ಜಿಲ್ಲಾ ಮುಖಂಡ ಮೊಹಮ್ಮದ್ ಇಸ್ಮಾಯಿಲ್ ತಿಮ್ಮಾಪುರಿ, ಲಾಲ ಹಮ್ಮದ್ ಚಾಂದ್, ಶಬಣ್ಣ ರಸ್ತಾಪುರ್, ಆನಂದ್ ರಸ್ತಾಪುರ್, ಸಾಯಿಬಣ್ಣ ಮಕಾಶಿ ಸೇರಿದಂತೆ ರೈತ ಮುಖಂಡರು ಶಿಕ್ಷಣ ಪ್ರೇಮಿಗಳು ಯುವ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿದ್ದರು.