ಕನಕ ಕಾವ್ಯ / ಲೋಕಗುರು ಕನಕದಾಸರು
ಮುಕ್ಕಣ್ಣ ಕರಿಗಾರ
ಹುಟ್ಟು ‘ ಕೆಟ್ಟ’ ವರಿಗಲ್ಲದನ್ಯರಿಗೆ ಅರ್ಥವಾಗದು
ಬೆಟ್ಟದೆತ್ತರಕ್ಕೆ ಬೆಳೆದು ನಿಂತ ಕನಕದಾಸರ
ಗಟ್ಟಿತನ,ಶ್ರೇಷ್ಠ ವ್ಯಕ್ತಿತ್ವ. ಪರಮಾತ್ಮನ
ಗುಟ್ಟುಗೂಢವರಿತು ಬೋಧಿಸಿದ
ಕನಕದಾಸರು ಲೋಕಗುರು
ಅವತರಿಸಲಿಲ್ಲ ಕನಕದಾಸರು
ಇಲ್ಲಿಯೇ ಹುಟ್ಟಿ’ ಬೆಳೆದರು’
ಮರ್ತ್ಯದಲ್ಲೇ ಅಮರ್ತ್ಯಕ್ಕೆ ಹಾದಿಕೊರೆದರು
ಜೀವನು ದೇವರಾಗಬಲ್ಲ ಎತ್ತರಕ್ಕೆ ಬೆಳೆದು
ಜೀವೋತ್ತಮರಾದರು,ದೇವಪ್ರಿಯರಾದರು.
ಕಂಡುದುದನ್ನು ಕಂಡಂತೆ ಆಡಿದ
ಲೋಕನಿಷ್ಠುರಿ.ಸಿರಿವಂತರ ಮದ ಸೊಕ್ಕುಗಳ ಧಿಕ್ಕರಿಸಿ
ಕನಿಕರಿಸಿ ಬಡವರ ಬದುಕು ಬವಣೆಗಳ ಭಾಗವಾದವರು
ದುರ್ಬಲರ ಭಾಗ್ಯವಿಧಾತರಾದವರು.
ಎಲ್ಲೆಲ್ಲೂ ಕಂಡರು ಹರಿಯನ್ನು
ಎಲ್ಲರಲ್ಲೂ ಕಂಡರು ಹರಿಯನ್ನು
ಹರಿಮಯವಾದ ಜಗತ್ತಿನಲ್ಲಿ ಉಡುಪಿಯ ಕೃಷ್ಣನು
ಸರಿದು ತಮ್ಮತ್ತ ನೋಡುವಂತೆ ಮಾಡಿದ್ದು
ಕನಕದಾಸರ ಯೋಗಸಿದ್ಧಿ
ಸಾಧಿಸಿದ ಪೂರ್ಣತ್ವದ ಕುರುಹು
ಕುರುಬನೆಂದರೆ ‘ ಪರಮಾತ್ಮನ ಕುರುಹ
ತೋರಬಂದಿಹ ಗುರು’ ಎನ್ನುವುದನ್ನು ಸಾರಿತೋರಿದ ಧೀರರು
ಕುಲವಲ್ಲ,ಜೀವಾನುಕಂಪೆಯ ಒಲವೇ ಪರಮಾತ್ಮನ
ಒಲಿಸುವ ಸಾಧನ ಎಂದು ಸಾಧಿಸಿತೋರಿದ
ಲೋಕಸಮಸ್ತರ ಗುರು
ಲೋಕಗುರು ಕನಕದಾಸರು.