ಬೀದರ : ಫೆ.೦೫ : ಸಾಹಿತ್ಯದ ಜನಪ್ರಿಯ ಪ್ರಕಾರಗಳಾದ ಕಥೆ,ಕಾವ್ಯ,ಕಾದಂಬರಿಗಳಂತೆ ವ್ಯಕ್ತಿತ್ವ ವಿಕಸನ ಸಾಹಿತ್ಯ ಪ್ರಸ್ತುತ ದಿನಮಾನಗಳ ಅಗತ್ಯವಾಗಿದೆ.ಟಿ,ವಿ,ಮೊಬೈಲ್ ಗಳ ಹಾವಳಿಯಿಂದ ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ದಿನಗಳಲ್ಲಿ ಸರಕಾರಿ ನೌಕರರು ಸೇರಿದಂತೆ ಬಹಳಷ್ಟು ಜನ ಒತ್ತಡದ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಅಂಥವರ ಮನಸ್ಸುಗಳನ್ನು ಸ್ಫೂರ್ತಿಗೊಳಿಸಲು,ಜೀವನಶೈಲಿಯ ಮತ್ತು ಪರಿಸರದಿಂದುಂಟಾಗುವ ಒತ್ತಡದಿಂದ ಮುಕ್ತರಾಗಲು ವ್ಯಕ್ತಿತ್ವ ವಿಕಸನ ಸಾಹಿತ್ಯ ರಚನೆ ಇಂದಿನ ತುರ್ತು ಅಗತ್ಯವಾಗಿದೆ.ಈ ದಿಸೆಯಲ್ಲಿ ನಮ್ಮ ಉಪಕಾರ್ಯದರ್ಶಿಯವರಾದ ಮುಕ್ಕಣ್ಣ ಕರಿಗಾರ ಅವರ ಪ್ರಯತ್ನ ಶ್ಲಾಘನೀಯ ಮಾತ್ರವಲ್ಲ, ಕಾಲಮಾನದ ಅವಶ್ಯಕತೆಯನ್ನು ಪೂರೈಸುವ ಪ್ರಯತ್ನವಾಗಿದೆ” ಎಂದು ಅಭಿಪ್ರಾಯ ಪಟ್ಟರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.. ಗಿರೀಶ ದಿಲೀಪ್ ಬದೋಲೆಯವರು. ಅವರಿಂದು ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ‘ ಸ್ಫೂರ್ತಿದಾಯಕ ಪ್ರಸಂಗಗಳು’ ಮತ್ತು ‘ಮಾತೆಂಬ ಜ್ಯೋತಿಯ ಪಥ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ” ಮುಕ್ಕಣ್ಣ ಕರಿಗಾರ ಅವರ ಇತರ ಪುಸ್ತಕಗಳಿಗಿಂತ ಇಂದು ಲೋಕಾರ್ಪಣೆಗೊಂಡ ‘ ಸ್ಫೂರ್ತಿದಾಯಕ ಪ್ರಸಂಗಗಳು’ ಮತ್ತು ‘ ಮಾತೆಂಬ ಜ್ಯೋತಿಯ ಪಥ’ ಎನ್ನುವ ಈ ಎರಡು ಕೃತಿಗಳು ವಿಶಿಷ್ಟ ಮಹತ್ವದ ಕೃತಿಗಳಾಗಿವೆ.ಇವು ಓದುಗರನ್ನು ಒತ್ತಡ ಮುಕ್ತರನ್ನಾಗಿಸುವ ಕೃತಿಗಳಾಗಿವೆಯಲ್ಲದೆ ಸ್ಪರ್ಧಾ ಪರೀಕ್ಷೆಗಳನ್ನು ಬರೆಯುವವರು,ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಹೊಂದಿದವರಿಗೆ ಬಹಳ ಉಪಯುಕ್ತವಾದ ಕೃತಿಗಳಾಗಿವೆ.ಮಹಾಪುರುಷರ ಬದುಕು ಮತ್ತು ಮಾತುಗಳನ್ನು ಆಧರಿಸಿದ ಈ ಕೃತಿಗಳು ನೆಮ್ಮದಿ,ಆನಂದನೀಡುವ ಕೃತಿಗಳಾಗಿದ್ದು ಇಂತಹ ಹೆಚ್ಚಿನ ಕೃತಿಗಳು ಮುಕ್ಕಣ್ಣ ಕರಿಗಾರ ಅವರಿಂದ ಬರಲಿ” ಎಂದು ಹಾರೈಸಿದರು.
ಬೀದರ ಜಿಲ್ಲೆಯ ಪಶುಪಾಲನೆ ಇಲಾಖೆಯ ಉಪನಿರ್ದೇಶಕರಾದ ಡಾಕ್ಟರ್ ನರಸಪ್ಪನವರು ‘ ಮಾತೆಂಬ ಜ್ಯೋತಿಯ ಪಥ’ ಮತ್ತು ‘ ಸ್ಫೂರ್ತಿದಾಯಕ ಪ್ರಸಂಗಗಳು’ ಕೃತಿಗಳನ್ನು ಪರಿಚಯಿಸುತ್ತ ‘ ಮುಕ್ಕಣ್ಣ ಕರಿಗಾರ ಅವರ ಈ ಎರಡು ಕೃತಿಗಳು ಆಧುನಿಕ ಕಾಲದ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳಾಗಿದ್ದು ಇವು ಮನಸ್ಸುಗಳನ್ನು ಅರಳಿಸುವ,ದೇಹವನ್ನು ಕಾಡುವ ಭಾವೋದ್ವೇಗ ಮುಕ್ತರನ್ನಾಗಿಸುವ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೃತಿಗಳಾಗಿವೆ.ಅತ್ಯಂತ ಸರಳ ಭಾಷೆಯಲ್ಲಿ ಜನಸಾಮಾನ್ಯರು ಓದಿ,ಅರ್ಥೈಸಿಕೊಳ್ಳಬೇಕಾದ ಈ ಪುಸ್ತಕಗಳನ್ನು ಒತ್ತಡದ ಜೀವನಕ್ಕೆ ಸಿಲುಕಿರುವ ಎಲ್ಲ ಸರಕಾರಿ ನೌಕರರು ತಪ್ಪದೆ ಓದಬೇಕು.ಮಹಾಪುರುಷರ ಜೀವನ,ಸಾಧನೆ ಸಂದೇಶಗಳನ್ನು ಆಧರಿಸಿ ಬರೆದ ಈ ಎರಡು ಕೃತಿಗಳು ನಮ್ಮ ಬದುಕಿನ ಪಥ ತೋರುವ ಕೃತಿಗಳಾಗಿವೆ” ಎಂದರು.
ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆಯವರು ಮಾತನಾಡಿ ‘ ನಮ್ಮೆಲ್ಲರ ಆದರಣೀಯ ಉಪಕಾರ್ಯದರ್ಶಿಳಾದ ಮುಕ್ಕಣ್ಣ ಕರಿಗಾರ ಸರ್ ಅವರು ಇಷ್ಟೊಂದು ಬ್ಯುಸಿಯಾಗಿದ್ದುಕೊಂಡೂ ನಿರಂತರ ಸಾಹಿತ್ಯ ರಚನೆ ಮಾಡುತ್ತಿರುವುದು ನಮಗೆಲ್ಲರಿಗೂ ಅದ್ಭುತ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ. ಆರೋಗ್ಯಯುತ ಜೀವನಶೈಲಿಯೊಂದಿಗೆ ಬದುಕುತ್ತ ಆರೋಗ್ಯಕರ ವಿಚಾರಗಳನ್ನು ತಮ್ಮ ಬದುಕು ಬರಹಗಳ ಮೂಲಕ ಬಿತ್ತರಿಸುತ್ತಿರುವ ಮುಕ್ಕಣ್ಣ ಕರಿಗಾರ ಅವರ ಜೀವನಶೈಲಿಯನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕಿದೆ.ನಮಗೆ ಬಿಡುವು ಇರದೆ ಇದ್ದರೂ ಬಿಡುವು ಮಾಡಿಕೊಂಡು ಈ ಕೃತಿಗಳನ್ನು ಓದಬೇಕು’ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಲೇಖಕರೂ ಮತ್ತು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ,ಮುಖ್ಯಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ, ಯೋಜನಾನಿರ್ದೇಶಕ ಜಗನ್ನಾಥಮೂರ್ತಿ,ಪಂಚಾಯತ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾಜಿ ಡೋಣಿ,ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ರಮೇಶ ನಾಥೆ,ಬೀರೇಂದ್ರಸಿಂಗ್, ಜಯಪ್ರಕಾಶ ಚೌಹಾಣ ಮತ್ತು ಎಲ್ಲಾ ತಾಲೂಕಾ ಪಂಚಾಯತಿಗಳ ಎಡಿಗಳು,ಜಿಲ್ಲೆಯ ಪಿಡಿಒಗಳು ಪಾಲ್ಗೊಂಡಿದ್ದರು. ಪಿಡಿಒ ಶ್ರೀಮತಿ ಸವಿತಾ ಹಿರೇಮಠ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಅಭಿವೃದ್ಧಿ ವಿಭಾಗದ ಅಧೀಕ್ಷಕ ಮಹ್ಮದ್ ಬಶೀರ್ ಅವರು ಸ್ವಾಗತಿಸಿದರೆ ಪ್ರವೀಣಸ್ವಾಮಿಯವರು ಕಾರ್ಯಕ್ರಮ ನಿರೂಪಿಸಿದರು.