ಬಿಹಾರಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಮುಕ್ಕಣ್ಣ ಕರಿಗಾರ ಸಂವಾದ

ಬೀದರ್ : ಡಿಸೆಂಬರ್ 19 ನೆಯ ದಿನವಾದ ಇಂದು ಬೀದರ ಜಿಲ್ಲಾ ಪಂಚಾಯತಿಗೆ ಬಿಹಾರ ರಾಜ್ಯದಿಂದ 40 ಜನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನೊಳಗೊಂಡ ನಿಯೋಗವು ಆಗಮಿಸಿತ್ತು.ಹೈದರಾಬಾದಿನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ( National Institute of Rural Development — Hyderabad )ಗೆ ಬಿಹಾರ ರಾಜ್ಯದಿಂದ ತರಬೇತಿಗೆ ನಿಯೋಜಿಸಲ್ಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡವು ಬೀದರಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಮತ್ತು ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಇಂದು ಜಿಲ್ಲೆಗೆ ಆಗಮಿಸಿದ್ದರು.ಈ ನಿಯೋಗದಲ್ಲಿ ಬಿಹಾರ ರಾಜ್ಯದ ವಿವಿಧ ಜಿಲ್ಲೆಗಳ ತಾಲೂಕಾ ಪಂಚಾಯತಿಗಳ ಅಧ್ಯಕ್ಷರುಗಳು ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳಿದ್ದರು.

ಮಧ್ಯಾಹ್ನ 12.00 ಘಂಟೆಗೆ ಬೀದರ ಜಿಲ್ಲಾ ಪಂಚಾಯತಿಗೆ ಆಗಮಿಸಿದ ಪ್ರಶಿಕ್ಷಣಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರುಗಳೊಂದಿಗೆ ಒಂದು ತಾಸು ಸಂವಾದಿಸಲಾಯಿತು.ಬಿಹಾರರಾಜ್ಯದ ಪ್ರಶಿಕ್ಷಣಾರ್ಥಿಗಳ ತಂಡಕ್ಕೆ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆ,ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಜವಾಬ್ದಾರಿಗಳು,ಸ್ಥಳೀಯ ಸರ್ಕಾರಗಳಾಗಿ ರಾಜ್ಯದ ಗ್ರಾಮ ಪಂಚಾಯತಿಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯ ಮಾಹಿತಿ ನೀಡಿದೆ.ನಿಯೋಗದಲ್ಲಿದ್ದ ಸದಸ್ಯರುಗಳು ಕೇಳಿದ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತ ಪ್ರಶ್ನೆಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಉತ್ತರಿಸಿದರು.ಅವರೊಂದಿಗೆ ಇದ್ದ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ಡೋಣಿಯವರು ರಾಜ್ಯದ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಾಹಿತಿ ನೀಡಿದರು.ಔರಾದ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲರು ರಾಜ್ಯದಲ್ಲಿ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾದ ಜಯಪ್ರಕಾಶ ಚೌಹಾಣ ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಯೋಜನೆಗಳ ತಯಾರಿಕೆ ಮತ್ತು ಕಾಮಗಾರಿಗಳ ಅನುಷ್ಠಾನದ ಮಾಹಿತಿ ನೀಡಿದರು.ಆಡಳಿತ ವಿಭಾಗದ ಸಹಾಯಕ ಕಾರ್ಯದರ್ಶಿ ರಮೇಶ ನಾಥೆಯವರು ನಿಯೋಗದೊಂದಿಗಿನ ಸಂವಾದ ಕಾರ್ಯಕ್ರಮ ಆಯೋಜಿಸಿದ್ದರು.ಎನ್ ಐ ಆರ್ ಡಿಯ ವ್ಯವಸ್ಥಾಪಕರು ಮತ್ತು ಕಲ್ಬುರ್ಗಿ ಎಸ್ ಐ ಆರ್ ಡಿಯ ಶಿವಪುತ್ರ ಮತ್ತು ರಾಜು ಅವರಿಬ್ಬರು ಫೆಸಿಲಿಟೇಟರ್ ಗಳಾಗಿ ಪಾಲ್ಗೊಂಡಿದ್ದರು.ಪ್ರವೀಣಸ್ವಾಮಿಯವರು ನಿಯೋಗವನ್ನು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರ್ವಹಿಸಿದ್ದಲ್ಲದೆ ಇಂಗ್ಲಿಷಿನಲ್ಲಿ ನೀಡುತ್ತಿದ್ದ ವಿವರಣೆಯನ್ನು ನಿಯೋಗದ ಸದಸ್ಯರುಗಳಿಗೆ ಹಿಂದಿಯಲ್ಲಿ ವಿವರಿಸುವ ದುಭಾಷಿಯಾಗಿಯೂ ಕಾರ್ಯನಿರ್ವಹಿಸಿದರು.