ಮೂರನೇ ಕಣ್ಣು
ಬಸವಣ್ಣನವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ ಅವರು ಆಡಿದ ಲಘುಮಾತು ಖಂಡನಾರ್ಹ
ಮುಕ್ಕಣ್ಣ ಕರಿಗಾರ
ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಬಸವಣ್ಣನವರ ಮೇರು ವ್ಯಕ್ತಿತ್ವದ ಬಗ್ಗೆ ಲಘುವಾದ ಮಾತುಗಳನ್ನು ಆಡಿದ್ದಾರೆ.ತಮ್ಮೊಂದಿಗೆ ಬಾರದ ತಮ್ಮ ಪಕ್ಷದ ಕಾರ್ಯಕರ್ತರುಗಳುನ್ನುದ್ದೇಶಿಸಿ ಬಸವಣ್ಣನಂತೆ ‘ಹೊಳೆಗೆ ಹಾರಿಸಾಯಿರಿ’ ಎಂದು ಹೇಳುವ ಮೂಲಕ ಬಸನಗೌಡಪಾಟೀಲ್ ಯತ್ನಾಳ ಅವರು ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವಕ್ಕೆ ಅಪಚಾರ ಎಸಗಿದ್ದಾರೆ.ಬಸವಣ್ಣನವರು ಹೊಳೆಗೆ ಹಾರಿದರೆ? ಅಥವಾ ಅವರ ಸಾವು ಹೇಗಾಯಿತು ಎನ್ನುವುದನ್ನು ಯತ್ನಾಳ ಅವರು ಬಲ್ಲರೆ? ಒಂದು ವೇಳೆ ಬಸವಣ್ಣನವರು ಹೊಳೆಗೆ ಹಾರಿದ್ದರೆ ಅದು ಹೇಡಿತನವಲ್ಲ,ಬಸವಣ್ಣನವರಿಗೆ ಸಾವಿನ ಭಯ ಇರಲಿಲ್ಲ ಎನ್ನುವುದನ್ನು ಯತ್ನಾಳ ಅವರು ಅರ್ಥಮಾಡಿಕೊಳ್ಳಬೇಕು.
ಜಗತ್ತಿನ ಸಮಾಜೋಧಾರ್ಮಿಕ ಇತಿಹಾಸದಲ್ಲಿ ಬಸವಣ್ಣನವರಿಗೆ ಸರಿಸಮಾನಾದ ವ್ಯಕ್ತಿಗಳಿಲ್ಲ .ಅಂಥಹ ವಿಶ್ವದ ಅನನ್ಯ ಮಹಾನ್ ಚೇತನವನ್ನು ಕುರಿತು ಬಸನಗೌಡ ಪಾಟೀಲ್ ಯತ್ನಾಳ ಅವರು ಲಘುವಾದ ಭಾಷೆಯಲ್ಲಿ ಮಾತನಾಡಬಾರದು.ಬಸವಣ್ಣನವರನ್ನು ಟೀಕಿಸಿದ ಮಾತ್ರಕ್ಕೆ ಯತ್ನಾಳ ಅವರು ಬಸವಣ್ಣನವರಿಗಿಂತ ದೊಡ್ಡವರು ಆಗಲಾರರು.ಯತ್ನಾಳ ಅವರು ಬಸವಣ್ಣನವರ ಹೆಸರನ್ನಿಟ್ಟುಕೊಂಡೇ ದೊಡ್ಡವರಾಗಿದ್ದಾರೆ ಎನ್ನುವುದನ್ನು ಮರೆತಿದ್ದಾರೆ.ಯತ್ನಾಳ ಅವರ ಹೆಸರೇ ಬಸನಗೌಡ,ಅದು ಅವರ ತಾತ ಮುತ್ತಾತ ಯಾರ ನೆನಪಿನಲ್ಲಾದರೂ ಅವರ ತಂದೆಯವರು ಇಟ್ಟ ಹೆಸರಾಗಿರಬಹುದಾದರೂ ಆ ಹೆಸರಿನ ಹಿಂದೆ ಬಸವಣ್ಣನವರೇ ಇದ್ದಾರೆ! ಬಸವನಗೌಡ ಎನ್ನುವುದು ಗ್ರಾಮ್ಯ ಭಾಷೆಯಲ್ಲಿ ಬಸನಗೌಡ ಆಗಿ ಉಚ್ಛರಿಸಲ್ಪಡುತ್ತಿದೆಯಷ್ಟೆ.ಬಸನಗೌಡನೇ ಆಗಿರಲಿ,ಬಸವನಗೌಡನೇ ಆಗಿರಲಿ ಅದು ಬಸವಣ್ಣನವರನ್ನು ಸ್ಮರಿಸುವ ಹೆಸರು.ಇಂದಿಗೂ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗಗಳಲ್ಲಿ ವೀರಶೈವ ಲಿಂಗಾಯತ ಮತಾನುಯಾಯಿಗಳ ಮನೆತನಗಳಲ್ಲಿ ಶಿವ ಮತ್ತು ಬಸವಣ್ಣನವರ ಹೆಸರುಗಳನ್ನು ಮಕ್ಕಳಿಗೆ ಇಡುತ್ತಾರೆ.ಹಾಗೆಯೇ ಯತ್ನಾಳ ಅವರ ಹೆಸರು ಕೂಡ ಬಸವಸ್ಮರಣೆಯ ಹೆಸರು.
ಕವಿ ಸರ್ವಜ್ಞ ಬಸವಣ್ಣನವರ ವಿಭೂತಿ ವ್ಯಕ್ತಿತ್ವವನ್ನು ‘ ಬಸವನೆಂದರೆ ಪಾಪ ದೆಸೆದೆಸೆಗೆ ಎದ್ದೋಡಿತು’ ಎಂದಿದ್ದಾನೆ.ಶಿವನನ್ನು ಮಾತ್ರ ‘ಅಘಹರ’,’ಪಾಪನಾಶಕ’ ಎನ್ನುತ್ತಾರೆ.ಶಿವನ ನಾಮಸ್ಮರಣೆಯಿಂದ ಬೆಟ್ಟದಷ್ಟಿದ್ದರೂ ಪಾಪ ಸುಟ್ಟುಹೋಗುತ್ತದೆ ಎಂದು ಬಸವಣ್ಣನವರು ಕೂಡ ತಮ್ಮ ವಚನಗಳಲ್ಲಿ ಶಿವಪಾರಮ್ಯವನ್ನು ಎತ್ತಿಹಿಡಿದಿದ್ದಾರೆ.ಬಸವಣ್ಣನವರ ಸಮಕಾಲೀನ ವಚನಕಾರರು ಮತ್ತು ಸರ್ವಜ್ಞ ಬಸವಣ್ಣನವರಿಗೆ ಶಿವನ ಸಮಾನ ‘ ಪಾಪನಾಶಕ ವ್ಯಕ್ತಿತ್ವ’ ದ ‘ ಅಘಹರ’ ಸ್ಥಾನಮಾನ ನೀಡಬೇಕಾದರೆ ಅದೆಷ್ಟು ಪರಿಶುದ್ಧವಾಗಿರಬೇಕು ಬಸವಣ್ಣನವರ ವ್ಯಕ್ತಿತ್ವ? ಯತ್ನಾಳ ಅವರು ಬಸವಣ್ಣನವರ ಹೈಮಾಚಲಸದೃಶ ವ್ಯಕ್ತಿತ್ವದ ಪೂರ್ಣ ಪರಿಚಯ ಮಾಡಿಕೊಂಡಂತಿಲ್ಲ.
‘ನಾಳೆ ಬಪ್ಪುದು ಇಂದೇ ಬರಲಿ’ , ‘ ಮರಣವೇ ಮಹಾನವಮಿ’ ಎಂದ ಬಸವಣ್ಣನವರು ಎಂದಾದರೂ ಸಾವಿಗೆ ಹೆದರುವ ಹೇಡಿಯಾಗಿದ್ದರೆ? ಅಂತಹ ಮಹಾನ್ ಚೇತನ ಬಸವಣ್ಣನವರು ‘ ಹೊಳೆಗೆಹಾರಿಸತ್ತ ಸಾಮಾನ್ಯ ಮನುಷ್ಯ’ ಎಂಬಂತೆ ಬಗೆದ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಖಂಡನಾರ್ಹವಾದುದು.ಬಸನಗೌಡ ಯತ್ನಾಳ ಅವರು ತಮ್ಮ ಈ ಅನುಚಿತ ಹೇಳಿಕೆಗಾಗಿ ಬಸವಣ್ಣನವರಲ್ಲಿ ಕ್ಷಮೆ ಕೇಳಬೇಕು.ಕಲ್ಯಾಣಕ್ರಾಂತಿಯ ಬಳಿಕ ಎಲ್ಲ ಶರಣರುಗಳುಗಳು ಸುರಕ್ಷಿತ ಸ್ಥಳಗಳನ್ನರಸಿ ಹೋಗುತ್ತಾರೆ.ಹಾಗೆಯೇ ಬಸವಣ್ಣನವರು ಅಶ್ವಾರೂಢರಾಗಿ ಸುರಕ್ಷಿತಸ್ಥಳವನ್ನು ಹುಡುಕಿ ಹೊರಟಾಗ ಬಸವಣ್ಣನವರ ಬೆನ್ನುಹತ್ತಿದ ಶತ್ರುಸೈನ್ಯ ಮಲಪ್ರಭಾ ನದಿತೀರದಲ್ಲಿ ಬಸವಣ್ಣನವರ ಕೊಲೆ ಮಾಡುತ್ತಾರೆ.ಇದು ವಾಸ್ತವ.ಆದರೆ ಬಸವಣ್ಣನವರ ಮಹಾನ್ ವ್ಯಕ್ತಿತ್ವಕ್ಕೆ ಕೊಲೆಯಾದುದು ಸೂತಕ ಎಂದು ಭಾವಿಸಿದ ಬಸವಾಭಿಮಾನಿಗಳು,ಬಸವ ಭಕ್ತರು ಅವರು ಶತ್ರುಸೈನ್ಯಕ್ಕೆ ಸಿಗದೆ ಮಲಪ್ರಭಾ ನದಿಯಲ್ಲಿ ಹಾರಿಪ್ರಾಣಾರ್ಪಣೆ ಮಾಡಿಕೊಂಡರು ಎಂದು ಬರೆದರು.ಹಿಂದೆ ‘ ಜಲಸಮಾಧಿ’ ಯು ಕೂಡ ಸಾಯುವ ಒಂದು ವಿಧಾನವಾಗಿತ್ತು ಮತ್ತು ಅದು ಸಾಮಾಜಿಕ ಮನ್ನಣೆಯನ್ನು ಪಡೆದಿತ್ತು.ಹಾಗಾಗಿ ಬಸವಣ್ಣನವರ ಬಗ್ಗೆ ಕಥೆ- ಪುರಾಣಗಳನ್ನು ಬರೆದ ಭಾವುಕಭಕ್ತರುಗಳು ಬಸವಣ್ಣನವರ ಮೇಲಿನ ಗೌರವದಿಂದ ಅವರು ‘ಹೊಳೆಗೆ ಹಾರಿ ಸತ್ತರು’ ಎಂದು ಬಿಂಬಿಸಿದರು.ಬಸವಣ್ಣನವರು ಹೇಗೆ ಸತ್ತರು ಎನ್ನುವುದು ಮುಖ್ಯವಲ್ಲ,ಅವರು ಸಾಧಿಸಿದ ಸಾಧನೆ ಮಹತ್ವದ್ದು.ಬಸವಣ್ಣನವರು ಸಾಧಿಸಿದ ಮಹಾನ್ ಕಾರ್ಯವನ್ನು ಬಸನಗೌಡ ಪಾಟೀಲ್ ಯತ್ನಾಳ ಅವರು ಸಾಧಿಸಬಲ್ಲರೆ? ಅಥವಾ ಬಸನಗೌಡ ಯತ್ನಾಳರು ಮಹಾನ್ ವ್ಯಕ್ತಿಗಳು ಎಂದು ತಿಳಿದವರಿಂದ ಬಸವಣ್ಣನವರು ಸಾಧಿಸಿದ ಸಮಾಜೋಧಾರ್ಮಿಕ ಸುಧಾರಣೆ ನಿರೀಕ್ಷಿಸಬಹುದೆ ? ಬಸವಣ್ಣನವರ ಹೆಸರನ್ನು ವಿನಾಕಾರಣ ತೆಗೆದುಕೊಂಡು ಲಘುವಾಗಿ ಮಾತನಾಡುವ ಬಸನಗೌಡ ಪಾಟೀಲ ಅವರ ನಡೆನುಡಿಗಳು ಅವರಿಗೇ ಶೋಭೆತರುವ ಸಂಗತಿಯಲ್ಲ.ಯತ್ನಾಳ ಅವರು ಯಾವುದೇ ರಾಜಕೀಯ ಪಕ್ಷದ ನಾಯಕರು ಆಗಿರಬಹುದು ಆದರೆ ಬಸವಣ್ಣನವರು ಎಲ್ಲ ರಾಜಕೀಯ ಪಕ್ಷಗಳ ನಾಯಕರುಗಳಿಗೂ ಪೂಜ್ಯರಾದ ಪೂಜನೀಯ ವ್ಯಕ್ತಿತ್ವದ ವಿಭೂತಿಗಳು, ‘ ಸಾರ್ವಜನಿಕಸೇವಕರುಗಳಿಗೆಲ್ಲ ಪರಮಾದರ್ಶ ಬಸವಣ್ಣನವರು ಎನ್ನುವುದನ್ನು ಯತ್ನಾಳ ಅವರು ಅರ್ಥಮಾಡಿಕೊಳ್ಳಬೇಕು.
ಪ್ರಬುದ್ಧ ಸಂವಿಧಾನವನ್ನು ಹೊಂದಿರುವ ಇಪ್ಪತ್ತೊಂದನೆಯ ಶತಮಾನದ ಸ್ವತಂತ್ರ ಭಾರತದಲ್ಲಿ ಯಾರೂ ಸಾಧಿಸಲಾಗದ ಕಾರ್ಯವನ್ನು ಬಸವಣ್ಣನವರು ಹನ್ನೆರಡನೆಯ ಶತಮಾನದ ಅರಸೊತ್ತಿಗೆಯ ಕಾಲದಲ್ಲಿ ಅದೂ ಬಿಜ್ಜಳನ ಪ್ರಧಾನಿಯಾಗಿ ಸಾಧಿಸಿದ್ದರು ಎನ್ನುವ ಐತಿಹಾಸಿಕ ಸತ್ಯವನ್ನು ಬಸನಗೌಡ ಪಾಟೀಲ್ ಯತ್ನಾಳ ಅವರು ಅರ್ಥಮಾಡಿಕೊಳ್ಳಬೇಕು.ಪುರೋಹಿತರು ಮತ್ತು ಪಟ್ಟಭದ್ರರ ಹಿಡಿತದಲ್ಲಿದ್ದ ದೇವರು- ಧರ್ಮವನ್ನು ಜನಸಾಮಾನ್ಯರತ್ತ ಕೊಂಡೊಯ್ದ ಪರಮಶ್ರೇಯಸ್ಸು ಬಸವಣ್ಣನವರದು.ಶೂದ್ರರು,ದಲಿತರುಗಳಿಗೆ ಕಿಂಚಿತ್ತೂ ಬೆಲೆ ಇರದ ಅಂದಿನ ಅನಾಗರಿಕಸಮಾಜದಲ್ಲಿ ದೇವಸ್ಥಾನ ವ್ಯವಸ್ಥೆಯನ್ನು ಧಿಕ್ಕರಿಸಿ ‘ ಎಲ್ಲರ ದೇಹಗಳಲ್ಲಿ ದೇವರಿದ್ದಾನೆ’ ಎಂದು ಉಪದೇಶಿಸಿ ಶೂದ್ರರು ದಲಿತರು ಮಹಿಳೆಯರ ದೇಹಗಳನ್ನೇ ದೇವಾಲಯವಾಗಿಸಿದ ಪರಮಪುಣ್ಯಮೂರ್ತಿಗಳು ಬಸವಣ್ಣನವರು.ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ಅನರ್ಹರಾಗಿದ್ದ ಪದದುಳಿತರೆಲ್ಲರ ಕೈಯ್ಗಗಳಲ್ಲಿ ‘ ಇಷ್ಟಲಿಂಗ’ ವನ್ನಿಟ್ಟು ಶೋಷಿತರು,ತುಳಿತಕ್ಕೊಳಗಾದವರೆಲ್ಲರ ಮನೆ -ಮನಗಳನ್ನು ಶಿವಾಲಯಗಳನ್ನಾಗಿಸಿದ ಪರಮಚೇತನಮೂರ್ತಿಗಳು ಬಸವಣ್ಣನವರು.ಸಂಸ್ಕೃತವು ದೇವಭಾಷೆ ಎಂದು ಕನ್ನಡ ಭಾಷೆಯನ್ನು ಕಡೆಗಣಿಸಿದ್ದ ಕಾಲದಲ್ಲಿ ಕನ್ನಡದಲ್ಲಿ ತಾವು ವಚನಗಳನ್ನು ರಚಿಸಿದ್ದಲ್ಲದೆ ಸುಮಾರು ಏಳುನೂರಕ್ಕು ಹೆಚ್ಚು ವಚನಕಾರರುಗಳಿಂದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡಕ್ಕೆ ‘ ದೇವಭಾಷೆ’ ಯ ಸ್ಥಾನವನ್ನಿತ್ತ ನಾಡು ನುಡಿಯ ಉದ್ಧಾರಕರು ಬಸವಣ್ಣನವರು.ಇಂದಿನ ಇಪ್ಪತ್ತೊಂದನೆಯ ಶತಮಾನದ ಪ್ರಗತಿಯುಗದಲ್ಲಿಯೇ ಅಂತರ್ ಜಾತೀಯ ವಿವಾಹಗಳನ್ನು ಒಪ್ಪದ ಮನಸ್ಸುಗಳು ‘ ಮರ್ಯಾದಾಹತ್ಯೆ’ ಗಳನ್ನು ಗೈಯುತ್ತಿರುವಾಗ ಹನ್ನೆರಡನೆಯ ಶತಮಾನದ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲದ ರಾಜಪ್ರಭುತ್ವದ ಕಾಲದಲ್ಲಿ ಬಸವಣ್ಣನವರು ಮಾದಾರ ಹರಳಯ್ಯನ ಮಗನಿಗೆ ಬ್ರಾಹ್ಮಣ ಮಧುವರಸನ ಮಗಳನ್ನು ಕೊಟ್ಟು ಮದುವೆ ಮಾಡಿಸುತ್ತಾರೆ.ಇದೇ ಕಲ್ಯಾಣಕ್ರಾಂತಿಯ ಕಾರಣವಾಗುತ್ತದೆ.ಬಸನಗೌಡ ಪಾಟೀಲ್ ಯತ್ನಾಳ ಅವರು ಒಂದಾದರೂ ಅಂತರ್ ಜಾತಿಯ ವಿವಾಹ ಮಾಡಿಸಿದ್ದಾರೆಯೆ?
ಬಸವಣ್ಣನವರ ಅನ್ಯಾದೃಶ ಮೇರು ವ್ಯಕ್ತಿತ್ವವನ್ನು ಗಮನಿಸಿಯೇ ಕರ್ನಾಟಕ ಸರಕಾರವು ಅವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದೆ.ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು ಮಾತ್ರವಲ್ಲ,ಭಾರತದ ರಾಜ್ಯನೀತಿ- ಸಂಸ್ಕೃತಿಯನ್ನು ರೂಪಿಸಿದ ಮಹಾನ್ ವ್ಯಕ್ತಿಗಳು.ನಮ್ಮ ಹೆಮ್ಮೆಯ ಸಂವಿಧಾನವು ಬಸವಸ್ಫೂರ್ತಿಯಲ್ಲಿ ಅರಳಿದ ಮಾನವಧರ್ಮಗ್ರಂಥ.ಬಸವಣ್ಣನವರು ಕರ್ನಾಟಕ ,ಭಾರತಕ್ಕಷ್ಟೇ ಸೀಮಿತರಾಗದ ವಿಶ್ವವನ್ನೇ ಪ್ರಭಾವಿಸಬಲ್ಲ ಯುಗಪುರುಷರು,ವಿಶ್ವಪೂಜ್ಯವಿಭೂತಿಗಳು ಎನ್ನುವುದನ್ನು ಬಸನಗೌಡ ಪಾಟೀಲ್ ಯತ್ನಾಳ ಅವರು ಅರ್ಥಮಾಡಿಕೊಳ್ಳಬೇಕು.
೨೯.೧೧.೨೦೨೪