ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಬಸವತೀರ್ಥಶಾಲೆಯ ಮಕ್ಕಳು : ಬೀದರ ಜಿಪಂ ಸಿಇಒ ಭೇಟಿ
ಮುಕ್ಕಣ್ಣ ಕರಿಗಾರ
ಸಕಾರಾತ್ಮಕ ನಿಲುವು, ಸ್ಪಂದನಶೀಲ ಸ್ವಭಾವದಿಂದ ‘ಜನಾದರಣೀಯ ಸಿಇಒ ‘ಎಂದೇ ಹೆಸರಾಗಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆಯವರು ಇಂದು ಮತ್ತೊಂದು ಹೃದಯವಂತಿಕೆಯ ಪ್ರಸಂಗದಿಂದ ಬೀದರ ಜಿಲ್ಲೆಯ ‘ಜನಮಾನಸದ ಒಲವಿನ ಅಧಿಕಾರಿ’ ಎನ್ನುವ ಗೌರವಕ್ಕೆ ಪಾತ್ರರಾದರು.ನವೆಂಬರ್ ೧೩ ರ ಬೆಳಿಗ್ಗೆ ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಮನಾಬಾದ್ ನಗರದ ‘ಬಸವತೀರ್ಥ ಶಾಲೆ’ ಯ ೪೮ ವಿದ್ಯಾರ್ಥಿಗಳು ಬೆಳಿಗ್ಗೆ ಉಪಹಾರಸೇವಿಸಿ ಅಸ್ವಸ್ಥರಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾದರು.ಸುದ್ದಿ ತಿಳಿಯುತ್ತಲೇ ಸಿಇಒ ಡಾ.ಗಿರೀಶ ಬದೋಲೆಯವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರಿಗೆ ಕರೆಮಾಡಿ ಸ್ಥಳಕ್ಕೆ ಧಾವಿಸಲು ಸೂಚಿಸಿದ್ದಲ್ಲದೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂಪಾಶಾ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ತೆರಳಲು ಸೂಚಿಸಿದರು.ಹುಮನಾಬಾದ್ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದೀಪಿಕಾ ನಾಯಕ್ ಅವರಿಗೆ ಕರೆಮಾಡಿ ಆಸ್ಪತ್ರೆಯಲ್ಲಿದ್ದು ಅಗತ್ಯಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದರು.ಸ್ವಲ್ಪ ಹೊತ್ತಿನಲ್ಲಿ ಸ್ವಯಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆಯವರು ಆಸ್ಪತ್ರೆಗೆ ದೌಡಾಯಿಸಿ ಶಾಲಾ ವಿದ್ಯಾರ್ಥಿಗಳ ಆರೋಗ್ಯವಿಚಾರಿಸಿ ವೈದ್ಯರುಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಗತ್ಯಕ್ರಮಗಳ ನಿರ್ದೇಶನ ನೀಡಿದರು.ಆ ಬಳಿಕ ಬಸವತೀರ್ಥ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿ ಅಶುಚಿ ಮತ್ತು ಅನೈರ್ಮಲ್ಯಕರ ವಾತಾವರಣ ಇದ್ದುದನ್ನು ಕಂಡು ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಡಿ ಡಿ ಪಿ ಐ ಅವರಿಗೆ ಸೂಚಿಸಿದರು.
ಗಮನಾರ್ಹ ಸಂಗತಿ ಎಂದರೆ ಸಿಇಒ ಡಾ.ಗಿರೀಶ ಬದೋಲೆಯವರು ನಿನ್ನೆ ಸಂಜೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರನ್ನು ಪರೀಕ್ಷಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಅಧಿಕಾರಿ ಸಿಇಒ ಅವರಿಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು.ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಶಾಲಾವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿ ಅವರ ಯೋಗಕ್ಷೇಮ ವಿಚಾರಿಸುವ ಮೂಲಕ ಕರ್ತವ್ಯ ಪ್ರಜ್ಞೆಯಾಚೆಯ ಔದಾರ್ಯ ಮೆರೆದು,ಮನುಷ್ಯತ್ವವನ್ನು ಎತ್ತಿಹಿಡಿದಿದ್ದಾರೆ.ಇಂತಹ ಮಾನವೀಯಮುಖದ ಅಧಿಕಾರಿಗಳು ಅಪರೂಪ.ತಮ್ಮ ಮಾನವೀಯ ನಡೆ ನುಡಿಗಳಿಂದ ಜನಮಾನಸಕ್ಕೆ ಹತ್ತಿರರಾಗಿರುವ ಡಾ.ಗಿರೀಶ ಬದೋಲೆಯವರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಎನ್ನುವುದು ಹೆಮ್ಮೆಯ,ಅಭಿಮಾನದ ಸಂಗತಿ.