ಶಹಾಪುರ,
ಭಾರತೀಯ ಹತ್ತಿ ನಿಗಮ ಅನುಮತಿಸಲಾದ ಸ್ಥಳೀಯ ಎಪಿಎಂಸಿ ಅಧೀನದಲ್ಲಿ 2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಹತ್ತಿ ಉತ್ಪನ್ನ ಖರೀದಿಸಲು ತಾಲೂಕಿನಲ್ಲಿ ಸುಮಾರು 14 ಹತ್ತಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದ್ದು, ಅದರಲ್ಲಿ ಮಂಗಳವಾರ ತಾಲೂಕಿನ ಹುಲಕಲ್ ಗ್ರಾಮ ಬಳಿಯ ಮಣಿಕಂಠ ಹತ್ತಿ ಮಿಲ್ ನಲ್ಲಿ ಪ್ರಥಮವಾಗಿ ಹತ್ತಿ ಖರೀದಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹತ್ತಿ ಖರೀದಿ ಕೇಂದ್ರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಅಧಿಕೃತ ಹತ್ತಿ ಕೇಂದ್ರಗಳಲ್ಲಿ ಮಾತ್ರ ರೈತರು ಹತ್ತಿಯನ್ನು ಮಾರಾಟ ಮಾಡಬೇಕು. ಅಕ್ರಮ ಖರೀದಿದಾರರಿಗೆ ಹತ್ತಿ ಮಾರಾಟ ಮಾಡಿ ಮೋಸ ವಂಚನೆಗೆ ಒಳಗಾಗಬೇಡಿ. ರೈತರು ಎಚ್ಚರಿಕೆಯಿಂದ ಹತ್ತಿ ಮಾರಾಟ ಮಾಡಬೇಕು. ಸರ್ಕಾರದಿಂದ ತೆರೆದ ಕೇಂದ್ರಗಳಲ್ಲಿಯೆ ಹತ್ತಿ ಮಾರಾಟ ಮಾಡಬಹುದು. ಆದರೆ ನಿಯಮಗಳನ್ವಯವಿದ್ದು, ಅವುಗಳನ್ನು ಸಮರ್ಪಕವಾಗಿ ಸಲ್ಲಿಸುವ ಮೂಲಕ ಬೆಂಬಲ ಬೆಲೆಯ ಸಹಾಯ ಪಡೆಯಬಹುದು. ಕ್ವಿಂಟಲ್‌ಗೆ ೭೫೨೧ ರೂ. ಬೆಲೆ ನಿಗದಿ ಪಡಿಸಲಾಗಿದೆ. ಒಂದು ಎಕರೆಗೆ ೧೨ ಕ್ವಿಂಟಲ್ ಹತ್ತಿ ಮಾರಾಟ ಮಾಡಬಹುದಾಗಿದೆ ಎಂದರು. ನವಂಬರ್ 16ಕ್ಕೆ ಸಲಹಾ ಸಮಿತಿಯ ಸಭೆ ಇದ್ದು ಹಿಂಗಾರು ಬೆಳೆಗೆ ಕೂಡ ನೀರು ಒದಗಿಸಲಾಗುತ್ತದೆ. ರೈತರು ಮುಂಚಿತವಾಗಿಯೇ ಹಿಂಗಾರು ಬೆಳೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹತ್ತಿ ಮಿಲ್ ಮಾಲೀಕ ಗುರು ಮಣಿಕಂಠ, ದೇಶದಲ್ಲಿಯೇ ಸಗರನಾಡು ಭಾಗದ ಹತ್ತಿ ಬೆಳೆ ಅತ್ಯಂತ ಉತ್ಕೃಷ್ಟತೆ ಹೊಂದಿದೆ.ಈ ಭಾಗದ ಹತ್ತಿಗೆ ಹೆಚ್ಚಿನ ಬೆಲೆ ಇದ್ದು, ರೈತರು ಹತ್ತಿ ಹೆಚ್ಚು ಹತ್ತಿ ಬೆಳೆಯುವಲ್ಲಿ ಮುತುವರ್ಜಿವಹಿಸಬೇಕಿದೆ. ರೈತರು ಹತ್ತಿ ಮಾರಾಟ ಕೇಂದ್ರಕ್ಕೆ ತರುವಾಗ ಈ ಬಾರಿ ಸಾಕಷ್ಟು ಜನ ರೈತರು ತಾವೂ ಬೆಳೆದ ಹತ್ತಿ ಸಾಗಾಟಕ್ಕೆ ದಂಡ ತೆತ್ತ ಉದಾಹರಣೆಗಳಿವೆ. ಇದಲ್ಲದೆ ಕೆಲ ರೈತರಿಗೆ ನಕಲಿ ಹತ್ತಿ ಬೀಜಗಳ ನೀಡುವ ಮೂಲಕ ಮೋಸವಾಗಿದೆ. ಗುಜರಾತ್ ಇತರೆ ಅನ್ಯ ರಾಜ್ಯಗಳಿಂದ ಹತ್ತಿ ಖರೀದಿಸಲು ಬಂದು ಬಿಳಿ ಏರಿಕೆ ಮಾಡಿ ನೀಡುತ್ತೇವೆಂದು ಹತ್ತಿ ಖರೀದಿ ಮಾಡಿ ಹಣ ನೀಡದೆ ಮೋಸ ಮಾಡಿ ಹೊರಟು ಹೋದ ಪ್ರಕರಣಗಳು ಇವೆ. ಹೀಗಾಗಿ ರೈತರ ಸಮಸ್ಯೆಗಳಿಗೆ ಸಚಿವರು ಪರಿಹಾರ ಕಲ್ಪಿಸಬೇಕಿದೆ. ರೈತಾಪಿ ಶ್ರಮಕ್ಕೆ ಬೆಲೆ ನೀಡುವ ಕೆಲಸವಾಗಬೇಕಿದೆ ಎಂದರು.
ನಿಗಮದ ತಾಲೂಕಿನ ಅಧಿಕಾರಿ ಕಿರಣ್ ಪುರೋಹಿತ ಮಾತನಾಡಿ, ರೈತರು ನೇರವಾಗಿ ಹತ್ತಿ ಖರೀದಿ ಕೇಂದ್ರಕ್ಕೆ ಬಂದು ಪಹಣಿ ಮತ್ತು ಆಧಾರ್ ಕಾರ್ಡ್ ಸಂಪರ್ಕ ಕಲ್ಪಿಸಿದ ಬ್ಯಾಂಕ್ ಖಾತೆ ಪುಸ್ತಕ ಪ್ರತಿ ಸಮೇತ ಸಲ್ಲಿಸುವ ಮೂಲಕ ಖರೀದಿಯಾದ ಹತ್ತಿಯ ಹಣವನ್ನು ವಾರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದರು. ಶೇ.8 ರಷ್ಟು ತೇವಾಂಶ ಇದ್ದರೂ ಹತ್ತಿಯನ್ನು ತೆಗೆದುಕೊಳ್ಳಲಾಗುತ್ತದೆ.ಶೇ 12 ರಷ್ಟು ತೇವಾಂಶವಿದ್ದರೆ ಹತ್ತಿಯನ್ನು ತೆಗೆದುಕೊಳ್ಳುವುದಿಲ್ಲ. ತೇವಾಂಶದ ಮೇಲೆ ಬೆಲೆ ನಿಗದಿಯಾಗುತ್ತದೆ. ದಯವಿಟ್ಟು ರೈತರು ಒಣಗಿದ ಹತ್ತಿಯನ್ನು ತರಬೇಕು ಎಂದು ತಿಳಿಸಿದರು.
ರೈತ ಮುಖಂಡ ಕಾಂತೇಶ ಪಾಟೀಲ್ ಮಾತನಾಡಿ ರೈತಾಪಿ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಿಸಿಐ ಅವರು ಹತ್ತಿ ಖರೀದಿ ಕೇಂದ್ರ ತೆರೆದಿರುವದು, ಹೀಗಾಗಿ ಅಧಿಕಾರಿಗಳು ಕೆಲ ನಿಯಮಗಳನ್ನು ಸಡಿಲಿಕೆ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದರು.
ಎಪಿಎಂಸಿ ಅಧ್ಯಕ್ಷೆ ಬಸ್ಸಮ್ಮ ಊರಕೋಲ ಸಗರ, ಕರವೇ ಉಕ ಅಧ್ಯಕ್ಷ ಶರಣು ಬಿ.ಗದ್ದುಗೆ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಹಯ್ಯಾಳ, ಮುಖಂಡರಾದ ಸಿದ್ಲಿಂಗಣ್ಣ ಆನೇಗುಂದಿ, ಶಿವಮಹಾಂತ ಚಂದಾಪುರ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳ್ಳಂಡಗೇರಿ ಸೋಮನಗೌಡ ಚಂದಪ್ಪ ಸೇರಿ ಭೀಮಾಶಂಕರ್ ಉಲ್ಕಲ್ ಗೌಡಪ್ ಗೌಡ ಸೇರಿದಂತೆ ಶರಣು ಮಂದರವಾಡ, ಚಂದಪ್ಪ ಸೇರಿ ಸೇರಿದಂತೆ ಇತರರು ಇತರರಿದ್ದರು. ಈ ಸಂದರ್ಭದಲ್ಲಿ ರೈತರಿಗೆ ಸಚಿವರಿಂದ ಸನ್ಮಾನಿಸಲಾಯಿತು.