ವಿಶ್ವೇಶ್ವರಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಕನ್ನಡ ದ್ರೋಹ

ಮೂರನೇ ಕಣ್ಣು
ವಿಶ್ವೇಶ್ವರಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಕನ್ನಡ ದ್ರೋಹ :
ಮುಕ್ಕಣ್ಣ ಕರಿಗಾರ

ಇಂದಿನಿಂದ ಆರಂಭಗೊಂಡ ಸಂಸತ್ ಅಧಿವೇಶನದ ಮೊದಲೆರಡು ದಿನಗಳು ನೂತನ ಸಂಸತ್ ಸದಸ್ಯರ ಪ್ರಮಾಣವಚನ ಸ್ವೀಕಾರಕ್ಕೆ ನಿಗದಿಯಾದ ದಿನಗಳು.ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಾನು ಟಿ.ವಿ ವಾಹಿನಿಯಲ್ಲಿ ನೋಡುತ್ತಿದ್ದೆ.ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು ! ಇದು ಸಖೇದಾಶ್ಚರ್ಯದ ಸಂಗತಿ.ವಿಶ್ವೇಶ್ವರ ಹೆಗಡೆ ಕಾಗೇರಿಯವರು ಯಾಕಾಗಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರೋ ?

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿನಿಧಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಅತಿಸುಂದರ ಜಿಲ್ಲೆಯಷ್ಟೇ ಅಲ್ಲ, ಸಾಹಿತ್ಯಕ- ಸಾಂಸ್ಕೃತಿಕವಾಗಿ ನಾಡಿಗೆ ಮಹತ್ವದ ಕೊಡುಗೆ ನೀಡಿದ ಜಿಲ್ಲೆಯೂ ಹೌದು.ಉತ್ತರಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ಬಹುಸಂಖ್ಯಾತರಾಗಿದ್ದಾರಾದರೂ ಅಲ್ಲಿ ಸಿದ್ಧಿಗಳು,ಹಾಲಕ್ಕಿಗಳು,ಕುಣಬಿಗಳಂತಹ ಆದಿವಾಸಿಜನಾಂಗದವರೂ ಇದ್ದಾರೆ.ಮರಾಠರು,ಪರಿಶಿಷ್ಟವರ್ಗದ ಜನತೆ ಮತ್ತು ಹಿಂದುಳಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.ವಿಶ್ವೇಶ್ಚರ ಹೆಗಡೆ ಕಾಗೇರಿಯವರು ಉತ್ತರಕನ್ನಡ ಜಿಲ್ಲೆಯ ಸಂಸದರಾಗಿ ಬಹುತ್ವಸಂಸ್ಕೃತಿಯನ್ನು ಪ್ರತಿನಿಧಿಸಬೇಕಾದವರು.ಹಿಂದೊಮ್ಮೆ ಕರ್ನಾಟಕದ ಶಿಕ್ಷಣ ಮಂತ್ರಿಗಳಾಗಿದ್ದವರು,ವಿಧಾನಸಭೆಯ ಸ್ಪೀಕರ್ ಆಗಿ ಉತ್ತಮ ಕಾರ್ಯನಿರ್ವಹಿಸಿದವರು.ಕನ್ನಡಭಾಷೆ,ಸಂಸ್ಕೃತಿಯ ಬಗ್ಗೆ ಹೆಮ್ಮೆ,ಗೌರವಗಳಿಂದ ಮಾತನಾಡುತ್ತಿದ್ದವರು.ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ನನಗೆ ನಿರಾಸೆ ಮತ್ತು ಬೇಸರ ಎರಡೂ ಉಂಟಾದವು ಕಾಗೇರಿಯವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಕಂಡು.

‌ವಿಶ್ವೇಶ್ವರ ಹೆಗಡೆ ಕಾವೇರಿಯವರು ಸಂಸತ್ ಸದಸ್ಯರಾಗಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಯಾವ ಪುರುಷಾರ್ಥಕ್ಕೆ ? ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಗೇರಿಯವರು ಕನ್ನಡಿಗರಿಗೆ ಯಾವ ಸಂದೇಶ ನೀಡಹೊರಟಿದ್ದಾರೆ? ಬ್ರಾಹ್ಮಣ್ಯತ್ವದ ಹುಸಿ ಶ್ರೇಷ್ಠತೆಯ ಪ್ರದರ್ಶನ ಮಾಡಹೊರಟಿದ್ದಾರೆಯೆ ? ಜನಸಾಮಾನ್ಯರಿಂದ ಭಿನ್ನನು ಎನ್ನುವದನ್ನು ತೋರಿಸಿಕೊಳ್ಳುವ ಚಪಲವೊ ? ಕರ್ನಾಟಕದ ಇತರ ಲೋಕಸಭಾಸದಸ್ಯರುಗಳು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡಾಭಿಮಾನವನ್ನು ಮೆರೆದಿದ್ದರೆ ಹಿಂದೆ ಕರ್ನಾಟಕದ ಶಿಕ್ಷಣಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡವನ್ನು ಧಿಕ್ಕರಿಸಿದ್ದು ಅವರ ಗೋಸುಂಬೆತನವೊ ? ಕಾಗೇರಿಯವರು ಕನ್ನಡಿಗರಿಗೆ ಉತ್ತರಿಸಲೇಬೇಕು ಅವರ ಸಮರ್ಥನೀಯವಲ್ಲದ ಸಂಸ್ಕೃತ ಭಾಷಾ ಪ್ರೇಮಕ್ಕೆ.ಹಿಂದೊಮ್ಮೆ ಸಂಸ್ಕೃತವು ಗೀರ್ವಾಣಭಾಷೆ,ದೇವಭಾಷೆ ಎನ್ನಿಸಿಕೊಂಡು ಪ್ರತಿಷ್ಠೆ ಮೆರೆದಿರಬಹುದು ಆದರೆ ವರ್ತಮಾನ ಭಾರತದಲ್ಲಿ ಸಂಸ್ಕೃತವು ಮೃತಭಾಷೆಯ ಸ್ಥಾನದಲ್ಲಿದೆ.ಸಂಸ್ಕೃತವು ಅತ್ಯಂತ ಸುಂದರ ಭಾಷೆಯಾಗಿದ್ದರೂ ಅದು ಕೇವಲ ಬ್ರಾಹ್ಮಣರ ಸ್ವತ್ತಾದ ಭಾಷೆಯಾಗಿ ಮಾರ್ಪಟ್ಟ ಕಾರಣದಿಂದಲೇ ಅದಕ್ಕಿಂದು ಈ ದುಸ್ಥಿತಿ ಬಂದಿದೆ.ಕನ್ನಡವು ಸಂಸ್ಕೃತದೊಂದಿಗೆ ಸ್ಪರ್ಧಿಸಿ ಗೆದ್ದು ಉಳಿದು ಬೆಳೆದಿದೆ ತನ್ನ ಸತ್ತ್ವದಿಂದ.ನಮ್ಮ ಪೂರ್ವಿಕ ಕವಿಗಳು ಸಂಸ್ಕೃತವನ್ನು ಧಿಕ್ಕರಿಸಿ ಕನ್ನಡದಲ್ಲಿಯೇ ಸತ್ತ್ವಯುತ ಕಾವ್ಯರಚಿಸಿದ್ದಾರೆ.ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯು ಬ್ರಾಹ್ಮಣರ ಸಂಸ್ಕೃತಿಯೊಂದಿಗೆ ಸಂಸ್ಕೃತ ಭಾಷೆಯನ್ನೂ ಧಿಕ್ಕರಿಸಿದ ಜನಸಾಮಾನ್ಯರ ಚಳುವಳಿಯಾಗಿ ಪರಿವರ್ತನೆಯಾಯಿತು.ಮುನ್ನೂರಕ್ಕೂ ಹೆಚ್ಚು ಜನ ವಚನಕಾರರು ಕನ್ನಡದಲ್ಲಿಯೇ ಆತ್ಮಜ್ಞಾನ,ಶಿವಸಾಕ್ಷಾತ್ಕಾರವನ್ನು ಸಾಧಿಸುವ,ಉತ್ಕೃಷ್ಟ ವಚನಗಳನ್ನು ಬರೆದಿದ್ದಾರೆ.ಕನಕದಾಸರು ಪುರಂದರ ದಾಸರಂತಹ ದಾಸವರೇಣ್ಯರುಗಳು ವಠಾರಪರಂಪರೆಯಲ್ಲಿದ್ದುಕೊಂಡೇ ಆ ಪರಂಪರೆಯ ಹಂಗಿನಿಂದ ಹೊರಬಂದು ಕನ್ನಡದಲ್ಲಿ ವೇದವಾಙ್ಮಯದ ತತ್ತ್ವಾರ್ಥ ಬಿಂಬಿಸುವ ಕೀರ್ತನೆಗಳನ್ನು ರಚಿಸಿದ್ದಾರೆ.ಆಂಡಯ್ಯನೆಂಬ ಕವಿ ‘ ಕಬ್ಬಿಗರ ಕಾವಂ’ ಎನ್ನುವ ಕಾವ್ಯವನ್ನು ಒಂದೇ ಒಂದು ಸಂಸ್ಕೃತಪದವನ್ನು ಬಳಸದೆ ಅಚ್ಚಗನ್ನಡದಲ್ಲಿಯೇ ರಚಿಸಿದ್ದಾನೆ.ಇದು ಕನ್ನಡದ ಸತ್ತ್ವ,ಕನ್ನಡಿಗರ ಸ್ವಾಭಿಮಾನ.

ವಿಶ್ವೇಶ್ವರ ಹೆಗಡೆ ಕಾವೇರಿಯವರು ಯಾರನ್ನು ಸಂಪ್ರೀತಗೊಳಿಸಲು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ? ಸಂಸತ್ ಭವನವು ಪ್ರಜಾಪ್ರಭುತ್ವದ ಕಸುವಿನ ಮೇಲೆ ನಿಂತ ಪ್ರಜಾಶಕ್ತಿದ್ಯೋತಕವಾದ ಭವನ.ಸಂಸತ್ ಸದಸ್ಯರು ಜನತೆಯ ಆಶೋತ್ತರವನ್ನು ಪ್ರತಿನಿಧಿಸಬೇಕಾದವರು.ಉತ್ತರಕನ್ನಡ ಜಿಲ್ಲೆಯ,ಕನ್ನಡಿಗರ ಪ್ರತಿನಿಧಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಮನುವಾದವನ್ನು ಎತ್ತಿಹಿಡಿಯ ಹೊರಟಂತಿದೆ.ಇದು ಸಂವಿಧಾನವನ್ನು ಬದಲಿಸಲು ನಾಲ್ಕುನೂರು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆನೀಡಿದ್ದ ಉತ್ತರಕನ್ನಡ ಜಿಲ್ಲೆಯ ಹಿಂದಿನ ಲೋಕಸಭಾ ಸದಸ್ಯ ಅನಂತಕುಮಾರಹೆಗಡೆಯವರ ನಿಲುವಿನಷ್ಟೇ ಅಪಾಯಕಾರಿ ನಿಲುವು ಮಾತ್ರವಲ್ಲ ಬ್ರಾಹ್ಮಣಿಕೆಯ ಶ್ರೇಷ್ಠತೆಯ ವ್ಯಸನವೂ ಹೌದು. ಹುಸಿಶ್ರೇಷ್ಠತೆಯ ವ್ಯಸನಪೀಡಿತ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದದ್ದಂತೂ ನಿಜ.ವಿಶ್ವೇಶ್ವರ ಹೆಗಡೆ ಕಾಗೇರಿಯವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಗೋಕರ್ಣದ ಮಹಾಬಲ ಶಿವನ ದರ್ಶನ ಪಡೆದರು.ಗೋಕರ್ಣದ ಮಹಾಬಲ ಶಿವನು ಜನಪದರ ಶಿವ,ನಾಡಜನರ ದೈವ ಎನ್ನುವುದನ್ನು ಕಾಗೇರಿಯವರು ಮರೆಯಬಾರದು.ಹಾಗೆಯೇ ಕಾಗೇರಿಯವರು ಇರುವುದು ಶಿರಸಿಯಲ್ಲಿ.ಶಿರಸಿಯ ಅಧಿದೇವತೆ ನಾಡಿನ ಜಾಗೃತಶಕ್ತಿದೇವಿಯರಲ್ಲಿ ಒಬ್ಬಳಾಗಿರುವ ಮಾರಿಕಾಂಬೆಯು ಜನಪದರ,ದಲಿತರ ದೇವಿ.ಹೀಗಿರುವಾಗ ಜನಪದರ ಆಶೋತ್ತರಗಳನ್ನು ಬಿಂಬಿಸುವ ನಾಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಆಗುತ್ತಿದ್ದ ಕೇಡಾದರೂ ಏನು ?

೨೪.೦೬.೨೦೨೪

About The Author