ಸರ್ವ ಸಮಾನತೆಯನ್ನು ದೊರಕಿಸುವ ಸಂವಿಧಾನವನ್ನು ರೂಪಿಸಿದ ಮಹಾನ್ ದಾರ್ಶನಿಕ ಬಾಬಾಸಾಹೇಬ್ ಅಂಬೇಡ್ಕರ್ : ಕಬೀರಾನಂದ ಸ್ವಾಮಿಜಿ

ಶಹಾಪುರ: ದೇಶ ಕಂಡ ಅತ್ಯಂತ ಪ್ರಬುದ್ಧ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯದ ಕಡೆಗೆ ಅವರ ಸಂಕಲ್ಪ ಮತ್ತು ದೃಢವಾದ ಬದ್ಧತೆ ಇಂದಿಗೂ ಜಗತ್ತಿನಾದ್ಯಾಂತ ಪ್ರಶಂಸಿಸಲಾಗುತ್ತದೆ. ದೇಶದ ಎಲ್ಲಾ ಪ್ರಜೆಗಳಿಗೂ ಸರ್ವ ಸಮಾನತೆಯನ್ನು ದೊರಕಿಸುವ ಸಂವಿಧಾನವನ್ನು ರೂಪಿಸಿದ ಮತ್ತು ಮಹಿಳೆಯರ ವಿಮೋಚನಾ ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ ಮಹಾನ್ ದಾರ್ಶನಿಕ, ವಿಶ್ವ ಜ್ಞಾನಿಯಾಗಿದ್ದಾರೆ ಎಂದು ಚಿಗರಳ್ಳಿ ಮರುಳಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರಾನಂದ ಮಹಾಸ್ವಾಮಿಜಿಯವರು ಹೇಳಿದರು.
        ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ೧೩೩ನೇ ಜಯಂತೋತ್ಸವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಸೌಲಭ್ಯಗಳಿಂದ ವಂಚಿತರಾದ ಸಮುದಾಯಗಳ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು.  ಅಂಬೇಡ್ಕರ್‌ರವರ ತತ್ವ ವಿಚಾರಗಳು ಕೇವಲ ಭಾಷಣಗಳಲ್ಲಿ, ಪುಸ್ತಕಗಳಲ್ಲಿ ಸೀಮಿತವಾಗಬಾರದು. ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
         ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಕಲಬುರ್ಗಿಯ ಮಹಿಳಾ ಹೋರಾಟಗಾರರು ಹಾಗೂ ನ್ಯಾಯವಾದಿಗಳಾದ ಅಶ್ವಿನಿ ಮದನಕರ್ ಅವರು ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ಅಂಬೇಡ್ಕರ್ ಅವಿರತ ಸಾಮಾಜಿಕ ಹೋರಾಟ ಅವಿಸ್ಮರಣೀಯವಾದುದ್ದು. ಅವರ ದೃಷ್ಟಿಯಲ್ಲಿ ಸಾಮಾಜಿಕ ಪ್ರಗತಿಗೆ ಮಹಿಳೆ ಸಾಧಿಸಿದ ಪ್ರಗತಿಯೇ ಮಹತ್ವದ್ದಾಗಿದೆ. ಮಹಿಳೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ಮಹಿಳೆಯರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ ಉನ್ನತ ಸ್ಥಾನಮಾನ ಪಡೆದುಕೊಳ್ಳಲು ಶ್ರಮಿಸಬೇಕೆಂದು ತಿಳಿಸಿದರು.
       ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ ಮತ್ತು ಶ್ರೀಶೈಲ ಹೊಸಮನಿ ಮಾತನಾಡಿದರು. ಜಯಂತೋತ್ಸವ ಸಮಿತಿಯ ಅಧ್ಯಕ್ಷ ಶಾಂತಪ್ಪ ಸಾಲಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾಯಪ್ಪ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
      ಕಾರ್ಯಕ್ರಮದಲ್ಲಿ ಮೊನಯ್ಯ ಹೊಸಮನಿ, ಮಲ್ಲಪ್ಪ ಬೀರನೂರ, ನಾಗಣ್ಣ ಬಡಿಗೇರ, ಮಾನಪ್ಪ ಗಡ್ಡದ, ಶರಣಬಸಪ್ಪ ಜಕಾಪುರ, ಶರಣಪ್ಪ ಬಡಿಗೇರ, ಹೊನ್ನಪ್ಪ ಗಂಗನಾಳ, ಸುಭಾಸ ತಳವಾರ, ನಾಗಣ್ಣಗೌಡ ಮಾಲಿಪಾಟೀಲ, ಬಸಣ್ಣಗೌಡ ಕೋನಾಳ, ದೇಸಾಯಿಗೌಡ ದಳಪತಿ, ಬಸವರಾಜ ಗುಡಿಮನಿ, ಅಂಬರೇಶಗೌಡ ಹುಲಗಬಾಳ, ಮರೆಪ್ಪ ಜಾಲಿಮಂಚಿ, ಮಲ್ಲಣ್ಣಗೌಡ ಪೋಲಿಸ್ ಪಾಟೀಲ, ಶರಣಪ್ಪ ದೊಡ್ಡಮನಿ, ಜಟ್ಟೆಪ್ಪ ಇಂಗನಾಳ, ಅಯ್ಯಪ್ಪ ಮಜಿರಿ, ಈರಪ್ಪ ಕಟ್ಟಿಮನಿ, ಮುದಕಪ್ಪ, ಮಡಿವಾಳಪ್ಪ ಸಾಲಿಮನಿ, ಭೀಮರಾಯ ಇಂಗನಾಳ, ಮಲ್ಲಪ್ಪ ಮಜಿರಿ, ಗುರುಸಿದ್ಧಪ್ಪ ಕಾಡಮಗೇರಾ, ಬಸವರಾಜ ಕಾಂಬ್ಳೆ, ಬಸವರಾಜ ಸಾಲಿಮನಿ, ಮರೆಪ್ಪ ಮಜರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಆರಂಭದಲ್ಲಿ ಬಸವೇಶ್ವರ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕುಂಭ, ಯುವಕ-ಯುವತಿಯರ ನೃತ್ಯ, ವಿವಿಧ ವಾದ್ಯಗೋಷ್ಠಿಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.

About The Author