ಜನನ ಮರಣ ನೋಂದಣಿ ಗೊಂದಲ ನಿವಾರಿಸಿ

ಶಹಾಪುರ : ಕೇಂದ್ರ ಸರ್ಕಾರವು ಹೊಸದಾಗಿ ಜನನ ಮರಣ ನೋಂದಣಿ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದು, ಅದರಂತೆ ಅ.1ರಿಂದ ಜನನ ಹಾಗೂ ಮರಣ ನೋಂದಣಿಯ ಪ್ರಮಾಣ ಪತ್ರವನ್ನು ಆಯಾ ಉಪ ವಿಭಾಗಧಿಕಾರಿ ಕಚೇರಿಯಿಂದ ಪಡೆಯಲು ನಿರ್ದೇಶನ ನೀಡಿದೆ.
ಆದರೆ ಕಂದಾಯ ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಇದರಿಂದ ಕಕ್ಷಿದಾರರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಕೀಲೆ ಆಯಿಷ್ ಪರ್ವೀನ್ ಜಮಖಂಡಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಆಯಾ ವರ್ಷದಲ್ಲಿ ಜನಿಸಿದ್ದರೆ ಹಾಗೂ ಮರಣ ಹೊಂದಿದ್ದರೆ ಸಂಬಂಧಪಟ್ಟ ನಗರಸಭೆ ಇಲ್ಲವೆ ತಹಶೀಲ ಕಚೇರಿಗೆ ತೆರಳಿ ಪಡೆಯಬಹುದಾಗಿದೆ. ಆದರೆ ಹಳೆಯ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಪಡೆಯಲು ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ. ಜನನ ಪ್ರಮಾಣ ಪತ್ರ ಪಡೆಯಲು ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಬೇಕು ಎಂದರೆ ಕಕ್ಷಿದಾರರಿಗೆ ತುಂಬಾ ಹೊರೆಯಾಗಲಿದೆ ಎಂದು ಅವರು ತಿಳಿಸಿದರು.

ಹೊಸ ತಿದ್ದುಪಡೆ ಕಾಯ್ದೆ ಜಾರಿಯಾಗುವ ಮುನ್ನ ಜನನ ಹಾಗೂ ಪ್ರಮಾಣ ಪತ್ರವನ್ನು ನ್ಯಾಯಾಲಯದಿಂದ ಕಕ್ಷಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳುತ್ತಿದ್ದರು. ಈಗ ತೆರೆ ಬಿದ್ದಿದೆ. ನ್ಯಾಯಾಲಯದಲ್ಲಿ ಜನನ ಹಾಗೂ ಮರಣ ಸಂಬಂಧಪಟ್ಟ ವಿಷಯಕ್ಕೆ ಅರ್ಜಿಯನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಹಳೆಯ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪಡೆಯಲು ಅರ್ಜಿದಾರರಿಗೆ ಸೂಚಿಸಲಾಗುತ್ತಿದೆ ಎಂದು ತಹಶೀಲ್ದಾರ ಉಮಾಕಾಂತ ಹಳ್ಳೆ ಸ್ಪಷ್ಟಪಡಿಸಿದ್ದಾರೆ ಎಂದರು.

About The Author