ಪರಮಾತ್ಮನ ಅನುಗ್ರಹದ ಹಕ್ಕು ಎಲ್ಲರಿಗೂ ಇದೆ! : ಮುಕ್ಕಣ್ಣ ಕರಿಗಾರ

ಪರಮಾತ್ಮನಿಂದ ಸೃಷ್ಟಿಗೊಂಡ ಎಲ್ಲ ಜೀವರುಗಳು ಕೊನೆಗೆ ಪರಮಾತ್ಮನಲ್ಲೇ ಒಂದಾಗುತ್ತಾರೆ.ಪ್ರತಿ ಜೀವಿಯೂ ಪರಮಾತ್ಮನಲ್ಲಿ ಒಂದಾಗುವವರೆಗೆ ಇರುತ್ತದೆ ಪ್ರಪಂಚ.ಎಲ್ಲ ಜೀವರುಗಳು ಪರಮಾತ್ಮನಲ್ಲಿ ಒಂದಾದಂದೇ ಪ್ರಳಯ.ಅಂದರೆ ಮೋಕ್ಷವೆಂಬುದು ಎಲ್ಲ ಜೀವರುಗಳ ಹಕ್ಕು,ಅವಕಾಶ.’ನಾನು ಪರಮಾತ್ಮನನ್ನು ಪಡೆಯಬಲ್ಲೆನೆ?’ , ‘ ಪಾಪಿಯಾದ ನನಗೆ ಪರಮಾತ್ಮನ ಅನುಗ್ರಹ ಸಾಧ್ಯವೆ?’ ಎಂದು ಯಾರೂ ಚಿಂತಿಸಬಾರದು.ಪರಮಾತ್ಮನು ಯಾರನ್ನೂ ಪಾಪಿಗಳೆಂದಾಗಲಿ ಯಾರನ್ನಾಗಲಿ ಪುಣ್ಯಾತ್ಮರುಗಳು ಎಂದಾಗಲಿ ಪರಿಗಣಿಸುವುದಿಲ್ಲ.ಯೋಗಿಗಳು,ಭೋಗಿಗಳು,ತ್ಯಾಗಿಗಳು ಕೊನೆಗೆ ರೋಗಿಗಳು ಎಲ್ಲರೂ ಒಂದಾಗಲೇಬೇಕು ಪರಮಾತ್ಮನಲ್ಲಿ.ಮನುಷ್ಯರು ತಾವು ಕಟ್ಟಿಕೊಂಡ ಶಾಸ್ತ್ರ ಸಂಹಿತೆಗಳ ಅಂಕೆ,ಭೀತಿಗಳಲ್ಲಿ ಬಂಧಿತರಾಗಿದ್ದಾರೆಯೇ ಹೊರತು ಪರಮಾತ್ಮನು ಮನುಷ್ಯರಿಂದ ರಚಿಸಲ್ಪಟ್ಟ ಯಾವ ಶಾಸ್ತ್ರ- ಸಂಹಿತೆಗಳ ಹಂಗಿಗೆ ಒಳಗಾಗಿಲ್ಲ,ಒಳಗಾಗುವುದೂ ಇಲ್ಲ!ಮನುಷ್ಯರು ಎಷ್ಟೇ ಸುಂದರವಾದ ಸಿದ್ಧಾಂತಗಳನ್ನು ರೂಪಿಸಲಿ ,ಎಷ್ಟೇ ಅದ್ಭುತವಾದ ನಿಯಮಗಳನ್ನು ರಚಿಸಿಕೊಂಡಿರಲಿ ಅವುಗಳು ಪರಮಾತ್ಮನಿಗೆ ಅನ್ವಯವಾಗುವುದಿಲ್ಲ! ಪರಮಾತ್ಮನ ಕರುಣೆಗೆ ಪಾತ್ರರಾಗುವ ಹಕ್ಕು,ಅವಕಾಶಗಳು ಎಲ್ಲರಿಗೂ ಇವೆ.’ಪರಮಾತ್ಮನ ಅನುಗ್ರಹ ಜೀವರುಗಳೆಲ್ಲರ ಜನ್ಮಸಿದ್ಧ ಹಕ್ಕು’ ಎಂದು ನಾನು ಪ್ರತಿಪಾದಿಸುತ್ತಿದ್ದೇನೆ.

ಪರಮಾತ್ಮನಿಂದ ಹೊರಹೊಮ್ಮಿದ ಈ ಜಗತ್ತು ಪರಮಾತ್ಮನಲ್ಲಿಯೇ ಒಂದಾಗುತ್ತದೆ.ಪರಮಾತ್ಮನ ಸೃಷ್ಟಿಯಾದ ಪ್ರತಿ ಜೀವಿಯೂ ಪರಮಾತ್ಮನಲ್ಲಿಯೇ ಲೀನವಾಗುತ್ತದೆ.ಪರಮಾತ್ಮನನ್ನು ಕೆಲವರು ಬೇಗ ತಲುಪಬಹುದು ಕೆಲವರು ತಡವಾಗಿ ತಲುಪಬಹುದಷ್ಟೆ.ಅಂತೂ ಎಲ್ಲ ಜೀವಿಗಳ,ಮನುಷ್ಯರ ಅಂತಿಮ ಗುರಿ,ಗಂತವ್ಯ ಪರಮಾತ್ಮನಲ್ಲಿ ಒಂದಾಗುವುದು.ಇದನ್ನೇ ಮೋಕ್ಷ ಎನ್ನುವುದು,ಪರಮಸುಖ,ಪರಮಾನಂದ ಎನ್ನುವುದು.ಜೀವರುಗಳು ತಾವು ದೇಹಿಗಳು ಎನ್ನುವ ಭಾವಕ್ಕೆ ಅಂಟಿಕೊಂಡಿರುವವರೆಗೆ ನೋವಿನ ಅನುಭವವಾಗುತ್ತದೆ,ಸುಖ ದುಃಖಗಳ ಅನುಭವವಾಗುತ್ತದೆ.ನಾನು ದೇಹಿಯಲ್ಲ ನಾನು ಆತ್ಮನು ಎನ್ನುವ ಅರಿವು ಮೂಡಿದಾಗ ಜೀವನೇ ದೇವನಾಗುತ್ತಾನೆ.ಎಲ್ಲ ಮನುಷ್ಯರಲ್ಲಿಯೂ ದೇವರಿದ್ದಾನೆ.ಹಿಂದೂಗಳಲ್ಲಷ್ಟೇ ದೇವರಿದ್ದಾನೆ,ಮುಸ್ಲಿಮರಲ್ಲಿ,ಕ್ರಿಶ್ಚಿಯನ್ನರಲ್ಲಿ ದೇವರಿಲ್ಲ ಎನ್ನಲಾಗದು.ಬ್ರಾಹ್ಮಣರಿಗಷ್ಟೇ ದೇವರ ಅನುಗ್ರಹದ ಹಕ್ಕು ಇದೆ,ಶೂದ್ರರು,ದಲಿತರಿಗೆ ದೇವರ ಒಲುಮೆ ಸಾಧ್ಯವಿಲ್ಲ ಎನ್ನುವುದು ತಪ್ಪು,ಭ್ರಮೆ! ಯೋಗಿಗಳಿಗಷ್ಟೆ ಪರಮಾತ್ಮನು ಒಲಿಯುತ್ತಾನೆ,ಜನಸಾಮಾನ್ಯರಿಗೆ ಒಲಿಯುವುದಿಲ್ಲ ಎನ್ನುವುದು ಅಪಕ್ವಭಾವನೆ.ಧಾರ್ಮಿಕ ಗ್ರಂಥಗಳಾಗಲಿ,ಪಾಪ- ಪುಣ್ಯಗಳಾಗಲಿ ಇಲ್ಲವೆ ಕರ್ಮಸಿದ್ಧಾಂತವಾಗಲಿ ಪರಮಾತ್ಮನ ಅನುಗ್ರಹಪ್ರಾಪ್ತಿಗೆ ಅಡ್ಡಿ ಬರುವುದಿಲ್ಲ.ಮನುಷ್ಯರು ರಚಿಸಿಕೊಂಡ ಧಾರ್ಮಿಕ ಗ್ರಂಥಗಳು,ರೂಪಿಸಿಕೊಂಡಿರುವ ನೀತಿ ನಡಾವಳಿಗಳಿಗೆ ಸಂಬಂಧಿಸಿದ ನಿಯಮಗಳು ಸಮಾಜವನ್ನು ಸುಸ್ಥಿತಿಯಲ್ಲಿಡುವ ನಿಯಮಗಳೇ ಹೊರತು ಈ ಯಾವ ನಿಯಮಗಳನ್ನೂ ಪರಮಾತ್ಮನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.ಪರಮಾತ್ಮನು ಜಗತ್ತನ್ನು ,ಜೀವಿಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದಾನೆ,ಸೃಷ್ಟಿಸೂತ್ರಗಳನ್ನು ನಿಯಮಿಸಿದ್ದಾನೆಯೇ ಹೊರತು ಶಾಸ್ತ್ರ- ಸಂಹಿತೆ,ಕಾನೂನು- ನಿಯಮಗಳನ್ನು ಪರಮಾತ್ಮನು ರೂಪಿಸಿಲ್ಲ.ಪ್ರತಿದಿನ ಸೂರ್ಯೋದಯ- ಸೂರ್ಯಾಸ್ತಗಳಾಗುತ್ತವೆ,ಮಳೆಗಾಲ,ಚಳಿಗಾಲ,ಬೇಸಿಗೆ ಕಾಲಗಳಿವೆ.ಮನುಷ್ಯರು ಸೇರಿದಂತೆ ಎಲ್ಲ ಜೀವಿಗಳಿಗೆ ಹುಟ್ಟು,ವಾರ್ಧಕ್ಯ,,ಮುಪ್ಪು,ಮರಣಗಳಿವೆ.ಪ್ರತಿ ಜೀವಿಗೂ ನೋವಿನ ಅನುಭವವಾಗುತ್ತದೆ,ಪ್ರತಿ ಜೀವಿಯೂ ಸಂತೋಷವನ್ನು ಅನುಭವಿಸುತ್ತದೆ.ಇದು ಪರಮಾತ್ಮನ ನಿಯತಿ.ವಿಶ್ವನಿಯಾಮಕನಾಗಿರುವ ಪರಮಾತ್ಮನು ಇಂತಹ ಸಾರ್ವತ್ರಿಕ,ಸಾರ್ವಕಾಲಿಕ ನಿಯಮಗಳನ್ನು ರೂಪಿಸಿದ್ದಾನೆ ಎಲ್ಲರಿಗೂ ಅನ್ವಯವಾಗುವಂತೆ.

ಮನುಷ್ಯರು ಪಾಪ,ಕರ್ಮಗಳ ಫಲವಾಗಿ ಶೂದ್ರಯೋನಿಗಳಲ್ಲಿ ಜನಿಸುತ್ತಾರೆ,ಯಜ್ಞ ಯಾಗಾದಿಗಳ ಫಲವಾಗಿ ಬ್ರಾಹ್ಮಣರಾದಿ ಮೇಲ್ವರ್ಗಗಳಲ್ಲಿ ಜನಿಸುತ್ತಾರೆ ಎನ್ನುವುದು ಅರ್ಥಹೀನ ಮಾತು.ಪರಮಾತ್ಮನಿಗೆ ಮನುಷ್ಯರಂತೆ ಒಡಲು ಇಲ್ಲ,ನೀವು ಮಾಡಿದ ಯಜ್ಞಗಳ ಹವಿಸ್ಸನ್ನು ಉಣ್ಣಲು.ಪರಮಾತ್ಮನು ಪರಿಪೂರ್ಣನಿದ್ದಾನೆ,ಅವನಲ್ಲಿ ಅಪೂರ್ಣತೆಗೆ ಅವಕಾಶವಿಲ್ಲ.ಜಾತಿಗಳಿಂದ ಕೆಲವರು ಶ್ರೇಷ್ಠರು ಕೆಲವರು ಕನಿಷ್ಟರು ಎನ್ನುವುದು ಮನುಷ್ಯರ ಭ್ರಮೆಯೇ ಹೊರತು ಅದು ಪರಮಾತ್ಮನ ಎಣಿಕೆಯಲ್ಲ,ಸೃಷ್ಟಿನಿಯಮವಲ್ಲ.ಮನುಷ್ಯರ ಸ್ವಾರ್ಥ, ದಾಹ ಮತ್ತುಪ್ರಲೋಭನೆಗಳೇ ಸಾಮಾಜಿಕ ಅಸಮತೋಲನದ ಕಾರಣ.ನಮ್ಮಲ್ಲಿ ಕೆಲವರು ಬಡವರಿದ್ದಾರೆ ಮತ್ತೆ ಕೆಲವರು ಶ್ರಿಮಂತರಿದ್ದಾರೆ.ಈ ಅಸಮತೋಲನಕ್ಕೆ ಬಡವರ ಮುಗ್ಧತೆ ಉಳ್ಳವರ ಶೋಷಕ ಬುದ್ಧಿಯೇ ಕಾರಣವೇ ಹೊರತು ಅದಕ್ಕೆ ಯಾವ ಪಾಪ,ಕರ್ಮವೂ ಕಾರಣವಲ್ಲ.ಅದಾನಿ,ಅಂಬಾನಿಗಳು ಪುಣ್ಯಾತ್ಮರೆಂದೂ ಬೀದಿ ಬದಿಯ ಭಿಕ್ಷುಕರುಗಳು ಪಾಪಾತ್ಮರೆಂದು ಭಾವಿಸಬೇಕಿಲ್ಲ.ಇಂದು ಭಿಕ್ಷುಕನಾಗಿದ್ದವನು ಮುಂದೆ ಲಕ್ಷಾಧೀಶನಾಗುತ್ತಾನೆ,ಇಂದು‌ ಬ್ರಾಹ್ಮಣನಾಗಿದ್ದವನು ಮುಂದೆ ಶೂದ್ರಯೋನಿಗಳಲ್ಲಿ ಜನಿಸುತ್ತಾನೆ.ಪರಮಾತ್ಮನ ಸಂಕಲ್ಪ,ನಿಯತಿನಿಯಮಗಳನ್ನು ಅರಿತವರು ಬೇಗ ಮುಕ್ತರಾಗುತ್ತಾರೆ,ಪರಮಾತ್ಮನ ಸೃಷ್ಟಿ ಸೂತ್ರಗಳನ್ನು ಅರಿಯದವರು ಅವರ ಕಾಲ ಬರುವವರೆಗೆ ಕಾಯಬೇಕಾಗುತ್ತದೆ.

ಪರಮಾತ್ಮನೊಬ್ಬನೇ ಪೂರ್ಣನಿದ್ದು ಪರಮಾತ್ಮನ ವಿಶ್ವನಿಯತಿಗನುಗಣವಾಗಿ ಪ್ರಕೃತಿ ವರ್ತಿಸುತ್ತದೆ.ಪರಮಾತ್ಮನ ನಿಯತಿಗನುಗುಣವಾಗಿ ಕಾಲ,ದೇಶಗಳಾಗುತ್ತಿವೆ.ಮನುಷ್ಯರು ಯಾರೂ ಪರಿಪೂರ್ಣರಲ್ಲ,ಮನುಷ್ಯರು ಯಾರೂ ದೇವರಲ್ಲ.ಮನುಷ್ಯರು ಬರೆದ ಯಾವ ಗ್ರಂಥವೂ ಪರಿಪೂರ್ಣವಲ್ಲ.ಪರಮಾತ್ಮನ ಅನುಗ್ರಹದ ಹಕ್ಕು ಎಲ್ಲರಿಗೂ ಇದೆ.ಅವರವರ ಕಾಲ ಪಕ್ವವಾಗುವವರೆಗೆ ಕಾಯಬೇಕಷ್ಟೆ.

About The Author