ಮೂರನೇ ಕಣ್ಣು : ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಕ್ಕೂ ಬರ ಬೀಳುವುದಕ್ಕೂ ಎಲ್ಲಿಯ ಸಂಬಂಧ ? : ಮುಕ್ಕಣ್ಣ ಕರಿಗಾರ

ಬಿಜೆಪಿಯ ಮುಖಂಡ,ಮಾಜಿ ಶಾಸಕ ಸಿ.ಟಿ.ರವಿಯವರು ‘ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಬರ ಬೀಳುವುದು ಸತ್ಯ’ ಎನ್ನುವ ಅಸಂಬದ್ಧ,ಅತಾರ್ಕಿಕ ಮಾತನ್ನಾಡಿ ಇದನ್ನು ಜನರಿಗೆ ತಲುಪಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಬರ ಬೀಳುತ್ತದೆ ಎನ್ನುವ ಅದ್ಭುತ ಸಂಶೋಧನೆಯನ್ನು ಕೈಗೊಂಡ ಸಿ.ಟಿ.ರವಿಯವರ ಅಪ್ರಬುದ್ಧತೆಯ ಬಗ್ಗೆ ಆಶ್ಚರ್ಯವೆನಿಸುತ್ತದೆ.ಇದುವರೆಗೆ ಕೆಲವು ಜನ ಅವಿವೇಕಿಗಳು ಆಡುತ್ತಿದ್ದ ಮಾತನ್ನು ಈಗ ಸಿ.ಟಿ ರವಿಯವರು ಆಡಿ ತಮ್ಮ ಅಸ್ವಸ್ಥ ಮನೋಸ್ಥಿತಿಯನ್ನು ಪ್ರಕಟಗೊಳಿಸಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವುದು ನಮ್ಮ ಪ್ರಬುದ್ಧ ಸಂವಿಧಾನದ ಬಲದಿಂದ,ಕಾಗಕ್ಕ ಗುಬ್ಬಕ್ಕನ ಕಥೆ ಹೇಳುವ ಜ್ಯೋತಿಷಿಗಳು,ಶಾಸ್ತ್ರಿಗಳ ಬಲದಿಂದ ಅಲ್ಲ.ಜ್ಯೋತಿಷ,ಶಾಸ್ತ್ರಗಳನ್ನು ನಂಬುವ ಸಿ.ಟಿ.ರವಿಯವರಿಗೆ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ ಎಂದೇ ಅವರ ಬಾಯಿಂದ ಇಂತಹ ಮಾತುಗಳು ಬರುತ್ತಿವೆ.

ಅಷ್ಟಕ್ಕೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಕ್ಕೂ ಬರ ಬೀಳುವುದಕ್ಕೂ ಎಲ್ಲಿಯ ಸಂಬಂಧ? ಮಾನ್ಸೂನ್ ಮಾರುತಗಳಲ್ಲಿ ಆದ ಏರು ಪೇರಿನಿಂದ ಮಳೆ ಕಡಿಮೆಯಾಗಿ ಬರದ ಛಾಯೆ ಆವರಿಸಿದೆ ಎನ್ನುವುದು ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನವನ್ನು ಓದುವ ಮಕ್ಕಳು ಹೇಳಬಲ್ಲರು.ಸಿದ್ದರಾಮಯ್ಯನವರೇನು ಮಾನ್ಸೂನ್ ಮಾರುತಗಳಿಗೆ ಅಡ್ಡಬಿದ್ದು ಅವುಗಳನ್ನು ತಡೆದು ನಿಲ್ಲಿಸಲಿಲ್ಲವಲ್ಲ.ಚಂದ್ರಯಾನ -೩ ರ ಮೂಲಕ ವಿಶ್ವದ ಅಗ್ರಮಾನ್ಯ ವೈಜ್ಞಾನಿಕ ರಾಷ್ಟ್ರಗಳಲ್ಲಿ ಒಂದು ಎನ್ನುವ ಹೆಮ್ಮೆಗೆ ಪಾತ್ರವಾಗಿರುವ,ಸೂರ್ಯನ ಬಗ್ಗೆ ಸಂಶೋಧನೆ ಕೈಗೊಳ್ಳುವಷ್ಟು ವೈಜ್ಞಾನಿಕ ಶಕ್ತಿ ಸಾಮರ್ಥ್ಯವನ್ನು ಪಡೆದಿರುವ ವಿಜ್ಞಾನಭಾರತದಲ್ಲಿ ಸಿ.ಟಿ.ರವಿಯಂಥವರು ಓಬಿರಾಯನ ಕಾಲದ ಕಥೆ ಪುರಾಣಗಳ ಗುಂಗಿನಲ್ಲಿಯೇ ತೇಲುತ್ತಿದ್ದಾರೆ ಎನ್ನುವುದು ವಿಷಾದದ ಸಂಗತಿ.ಕಾಲ ಬದಲಾದಂತೆ ನಾವೂ ಬದಲಾಗಬೇಕು ಎನ್ನುವ ವಾಸ್ತವವನ್ನು ಮೈಗೂಡಿಸಿಕೊಳ್ಳದೆ ಇದ್ದುದೇ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯವರ ಸೋಲಿನ ಕಾರಣ.ಮಳೆಯ ಕೊರತೆ,ಹವಾಮಾನ ವೈಪರಿತ್ಯದಂತಹ ಹಲವು ಕಾರಣಗಳಿಂದ ಬರ ಬೀಳುತ್ತದೆ ಎನ್ನುವುದು ಬರದ ವೈಜ್ಞಾನಿಕ ಕಾರಣ.

ಹಿಂದೆ ರಾಜಪ್ರಭುತ್ವದ ಕಾಲದಲ್ಲಿ ಕೆಳವರ್ಗದ ಅರಸುರುಗಳ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತಿದ್ದ ಪುರೋಹಿತಶಾಹಿ ವ್ಯವಸ್ಥೆಯು ಶಿವಾಜಿಯು ಛತ್ರಪತ್ರಿ ಬಿರುದು ಧರಿಸಲು ಹೇಗೆ ಅಡ್ಡಿಯಾಯಿತು,ಕೊನೆಗೆ ಶಿವಾಜಿ ಉತ್ತರ ಭಾರತದಿಂದ ಬ್ರಾಹ್ಮಣರನ್ನು ಕರೆಯಿಸಿ ಛತ್ರಪತಿ ಪಟ್ಟ ಅಲಂಕರಿಸಿದ ಎನ್ನುವ ಐತಿಹಾಸಿಕ ಸತ್ಯ ಸಿ.ಟಿ.ರವಿಯವರಿಗೆ ಗೊತ್ತಿರಬೇಕು.ಪ್ರಭುತ್ವವು ಬ್ರಾಹ್ಮಣರ ಪದತಲಗಳಲ್ಲಿಯೇ ಬಿದ್ದಿರಬೇಕು ಎನ್ನುವ ಹಠ ಮತ್ತು ಹವಣಿಕೆಯ ಪುರೋಹಿತಶಾಹಿ ವ್ಯವಸ್ಥೆಯು ಶೂದ್ರರನ್ನು,ಕೆಳವರ್ಗದ ಅರಸರನ್ನು ಚಕ್ರವರ್ತಿ,ಮಹಾರಾಜ ಆಗಲು ಬಿಡುತ್ತಿರಲಿಲ್ಲ,ಬಾಹುಬಲದಿಂದ ಶೂದ್ರಸಮುದಾಯದ ಅರಸರುಗಳ ಔನ್ನತ್ಯಕ್ಕೆ ಏರಿದರೂ ಅದನ್ನು ಸಹಿಸುತ್ತಿರಲಿಲ್ಲ.ಸ್ವಯಂ ಸಾಮರ್ಥ್ಯದಿಂದ ಮೇಲೆದ್ದು ಬಂದ ಶೂದ್ರದೊರೆಗಳ ಆಳ್ವಿಕೆಯನ್ನು ಕಲಿಗಾಲ,ಕೇಡುಗಾಲ ,ಕಾಲ ಕೆಟ್ಟುಹೋಯಿತು ಎಂಬಂತಹ ವಿಪರೀತ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರಲ್ಲದೆ ಶೂದ್ರರಾಜರುಗಳ ಆಳ್ವಿಕೆಯಲ್ಲಿ ಸಂಭವಿಸಿದ ಯಾವುದಾದರೂ ನೈಸರ್ಗಿಕ ವಿಕೋಪಗಳಿಗೆ ಈ ರಾಜನ ಆಳ್ವಿಕೆಯೇ ಇದಕ್ಕೆಲ್ಲ ಕಾರಣ ಎಂದು ಇಲ್ಲ ಸಲ್ಲದ ಕಥೆ ಪುರಾಣಗಳನ್ನು ಸೃಷ್ಟಿಸಿ ವ್ಯವಸ್ಥಿತವಾಗಿ ಪ್ರಜಾಸಮುದಾಯದಲ್ಲಿ ಗೊಂದಲ ಹುಟ್ಟಿಸುತ್ತಿದ್ದರು. ಹುಟ್ಟಿನಿಂದ ಶೂದ್ರರಾಗಿಯೂ ಪುರೋಹಿತಶಾಹಿಯ ಭೂತವನ್ನು ಮೈಯಲ್ಲಿ ಆಹ್ವಾನ ಮಾಡಿಕೊಂಡಿರುವುದರಿಂದ ಸಿ.ಟಿ.ರವಿಯವರು ‘ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಲೆಲ್ಲ ಬರಬೀಳುತ್ತದೆ’ ಎನ್ನುವ ಮಾತುಗಳನ್ನಾಡಿದ್ದಾರೆ.ಸ್ವಯಂ ಶೂದ್ರರಾಗಿರುವ ಸಿ.ಟಿ ರವಿಯವರು ಶೂದ್ರವರ್ಗದ ನಾಯಕ ಸಿದ್ದರಾಮಯ್ಯನವರ ಬಗ್ಗೆ ಇಂತಹ ಮಾತುಗಳನ್ನು ಆಡಬಾರದಿತ್ತು.

ನೈಸರ್ಗಿಕ ವಿಕೋಪಗಳಲ್ಲಿ ಹಲವು ಬಗೆಗಳಿದ್ದರೂ ಅತಿವೃಷ್ಟಿ ಮತ್ತು ಅನಾವೃಷ್ಟಿ ಎನ್ನುವ ಎರಡು ಪ್ರಕೋಪಗಳು ಜನಜೀವನವನ್ನು ತಲ್ಲಣಗೊಳಿಸುತ್ತವೆ.ಸಿದ್ದರಾಮಯ್ಯನವರ ಕಾಲದಲ್ಲಿ ಅನಾವೃಷ್ಟಿಯಿಂದ ಬರಬಿದ್ದಿದೆ ಎಂದು ಒಪ್ಪಿಕೊಳ್ಳೋಣ.ಆದರೆ ಬಿಜೆಪಿಯ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಲಪ್ರಳಯವೋ ಎಂಬಂತೆ ಅತಿವೃಷ್ಟಿಯಾಗಿ ಹಲವಾರು ಗ್ರಾಮಗಳು ಕೊಚ್ಚಿಹೋಗಿ,ಲಕ್ಷಾಂತರ ಜನರ ಜೀವನ ಚೆಲ್ಲಾಪಿಲ್ಲಿಯಾಗಿತ್ತಲ್ಲ. ಅದಕ್ಕೆ ಏನು ಹೇಳುತ್ತಾರೆ ಸಿ.ಟಿ.ರವಿಯವರು? ಈ ಹಿಂದೆ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭೀಕರಬರಬಿದ್ದಿತ್ತು.ಡಾ.ರಾಜಕುಮಾರ ಅವರನ್ನು ವೀರಪ್ಪನ್ ಅಪಹರಿಸಿದ್ದೂ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೆ.ಅದಕ್ಕೆ ಏನು ಹೇಳುತ್ತಾರೆ ಸಿ.ಟಿ.ರವಿಯವರು? ಯಡಿಯೂರಪ್ಪನವರು ಲಿಂಗಾಯತರು,ಎಸ್.ಎಂ ಕೃಷ್ಣ ಅವರು ಒಕ್ಕಲಿಗರು.ಜಾತಿಯಿಂದ ಒಕ್ಕಲಿಗರಾಗಿರುವ ಸಿ.ಟಿ.ರವಿಯವರು ಲಿಂಗಾಯತರು ಮತ್ತು ಒಕ್ಕಲಿಗರು ಮಾತ್ರ ರಾಜ್ಯದ ಮುಖ್ಯಮಂತ್ರಿಗಳಾಗಿರಬೇಕು,ಹಾಗಿದ್ದರೆ ಮಾತ್ರ ರಾಜ್ಯಸುಭಿಕ್ಷವಾಗಿರುತ್ತದೆ ಎನ್ನುವ ಶಾಸ್ತ್ರವನ್ನೇನಾದರೂ ಬರೆಯಲು ಹೊರಟಿದ್ದಾರೆಯೆ?

ಸಿ.ಟಿ.ರವಿಯವರು ವೈಯಕ್ತಕವಾಗಿ ಏನನ್ನಾದರೂ ನಂಬಲಿ ಸಾರ್ವಜನಿಕ ಜೀವನದಲ್ಲಿ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕು.ಸಂವಿಧಾನವು ಶೂದ್ರರು,ದಲಿತರು ಸೇರಿದಂತೆ ಎಲ್ಲ ಅವಕಾಶವಂಚಿತ ಸಮುದಾಯಗಳಿಗೆ ರಾಜಕೀಯ ಉನ್ನತಿಯ ಅವಕಾಶಗಳನ್ನು ಕೊಟ್ಟಿದೆ.ಸಂವಿಧಾನವು ಕೊಡಮಾಡಿದ ಅವಕಾಶಗಳನ್ನು ಉಪಯೋಗಿಸಿಕೊಂಡೇ ಪ್ರಜಾಪ್ರಭುತ್ವ ಪದ್ಧತಿಗೆ ಅನುಗುಣವಾಗಿ 135 ಜನ ಶಾಸಕರುಗಳನ್ನು ಆರಿಸಿ ತಂದ ಪಕ್ಷದ ನಾಯಕರಾಗಿ ಸಂವಿಧಾನಬದ್ಧವಾಗಿ ಮುಖ್ಯಮಂತ್ರಿಯಾಗಿದ್ದಾರೆ ಸಿದ್ದರಾಮಯ್ಯನವರು.ನಿಮ್ಮಲ್ಲಿ ಸಾಮರ್ಥ್ಯ,ರಾಜಕೀಯ ಚಾತುರ್ಯವಿದ್ದರೆ ನೀವೂ ಸಿದ್ದರಾಮಯ್ಯನವರಂತೆ ಜನಬಲ ಪಡೆದು ತೋರಿಸಬೇಕೇ ಹೊರತು ಪ್ರಬುದ್ಧ ಸಂವಿಧಾನಕ್ಕೆ ಅಪಚಾರ ಎಸಗುವ ಕಾಗಕ್ಕ ಗುಬ್ಬಕ್ಕನ ಕಥೆಗಳನ್ನು ಹೇಳಿ ಸಿದ್ದರಾಮಯ್ಯನವರನ್ನು ಮೂದಲಿಸಬಾರದು.

About The Author