ಮೂರನೇ ಕಣ್ಣು : ಧರ್ಮಸ್ಥಳಕ್ಕೆ ಕೇಡು ಬಗೆಯುವುದು ಮಾನವತೆಗೆ ಎಸಗುವ ದ್ರೋಹ : ಮುಕ್ಕಣ್ಣ ಕರಿಗಾರ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮೌನ ಮುರಿದು ಮನದಾಳದ ದುಃಖ ತೋಡಿಕೊಂಡಿದ್ದಾರೆ ಧರ್ಮಸ್ಥಳ ಕ್ಷೇತ್ರದ ವಿವಿಧ ಸಂಸ್ಥೆಗಳ ಸಿಬ್ಬಂದಿಯವರ ಬಳಿ.( ಪ್ರಜಾವಾಣಿ ಜುಲೈ 20,2023 ಪುಟ 07,ರಾಜ್ಯ)ಇದು ನಿಜಕ್ಕೂ ಬೇಸರದ ವಿಷಯ.ವೀರೇಂದ್ರ ಹೆಗ್ಗಡೆಯವರಿಗಷ್ಟೇ ಅಲ್ಲ ,ಧರ್ಮಸ್ಥಳ ಕ್ಷೇತ್ರವನ್ನು ನಂಬಿರುವ ಭಕ್ತರಿಗೆಲ್ಲರಿಗೂ ನೋವು,ಆಘಾತವನ್ನುಂಟು ಮಾಡು ವ ಸಂಗತಿ ಇದು.ಸೌಜನ್ಯಾಳ ಕೊಲೆಯ ಪ್ರಕರಣವನ್ನು ಶ್ರೀಕ್ಷೇತ್ರ ಧರ್ಮಸ್ಥಳದೊಂದಿಗೆ ತಳುಕು ಹಾಕುವುದು ತುಚ್ಛ ಮನಃಸ್ಥಿತಿ,ವಿಕೃತ ವಿಚಾರ.ಸೌಜನ್ಯಾಳ ಕೊಲೆ ಪ್ರಕರಣವು ನ್ಯಾಯಾಲಯದಿಂದ ತೀರ್ಮಾನವಾಗುವ ಪ್ರಕರಣವೇ ಹೊರತು ದುರ್ಬುದ್ಧಿಯ ಜನರ ಉಪದ್ರವಕಾರಿ ವಿಚಾರಗಳಿಂದಲ್ಲ.ಯಾರೋ ಕೆಲವರು ಸ್ವಯಂಘೋಷಿತ ಪ್ರಗತಿಪರರು ಸುಂದರವಾದ ಭಾಷೆ ಬಳಸಿ ಖಂಡನಾತ್ಮಕ ಬರಹಗಳನ್ನು ಫೇಸ್ ಬುಕ್,ವಾಟ್ಸಾಪ್ ಗಳಲ್ಲಿ ಹರಿಯ ಬಿಟ್ಟರೆ ಧರ್ಮಸ್ಥಳ ಕ್ಷೇತ್ರದ ಮಹಿಮೆಗೇನೂ ಧಕ್ಕೆ ಬರುವುದಿಲ್ಲ.ವೀರೇಂದ್ರ ಹೆಗ್ಗಡೆಯವರು ಆ ಬಗ್ಗೆ ವಿಚಲಿತರಾಗುವ ಕಾರಣವಿಲ್ಲ.ಕರ್ನಾಟಕದ ಜನತೆ ವೀರೇಂದ್ರ ಹೆಗ್ಗಡೆಯವರ ಜೊತೆ ಇದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳವು ‘ ಕಲಿಯುಗದ ಪ್ರತ್ಯಕ್ಷ ದೇವರು’ ಎಂದು ಹೆಸರಾಗಿರುವ ಮಂಜುನಾಥನ ಮಹಿಮೆಯಿಂದ ವಿಶ್ವಪ್ರಸಿದ್ಧಿಯನ್ನು ಪಡೆದಿದೆ.ಜೊತೆಗೆ ವೀರೇಂದ್ರ ಹೆಗ್ಗಡೆಯವರ ಸೇವಾಕಾರ್ಯಗಳು,ಸಮಾಜದ ,ದೀನ-ದಲಿತರು ಮತ್ತು ಮಹಿಳೆಯರ ಉದ್ಧಾರಕ್ಕೆ ಅವರು ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ’ ಯ ಮೂಲಕ ಕೈಗೊಳ್ಳುತ್ತಿರುವ ಜೀವನೋಪಾಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನುಂಟು ಮಾಡಿವೆ.ಸರಕಾರವು ಮಾಡದ ಕೆಲಸ ಕಾರ್ಯಗಳನ್ನು ವೀರೇಂದ್ರ ಹೆಗ್ಗಡೆಯವರು ಒಬ್ಬ ವ್ಯಕ್ತಿಯಾಗಿ,ಮಂಜುನಾಥನ ಪ್ರಕಟಶಕ್ತಿಯಾಗಿ ಮಾಡುತ್ತಿದ್ದಾರೆ.ಕೇಂದ್ರ ಮತ್ತು ರಾಜ್ಯಸರಕಾರಗಳು ಮಹಿಳೆಯರ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಮಹಿಳಾ ಸ್ವಸಹಾಯ ಗುಂಪುಗಳ ಯಶೋಗಾಥೆಯ ಪ್ರೇರಣೆ ಇದೆ.ಅಬಲೆಯರೆಂದು ತಿರಸ್ಕರಿಸಲ್ಪಟ್ಟ ಮಹಿಳೆಯರನ್ನು ಸಬಲರನ್ನಾಗಿ ಮಾಡಿದ ಕೀರ್ತಿ ಧರ್ಮಸ್ಥಳಕ್ಕೆ ಮತ್ತು ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ.ಕರ್ನಾಟಕದ ಯಾವ ಧಾರ್ಮಿಕ ಕ್ಷೇತ್ರವೂ ಕೈಗೊಳ್ಳದ ಜನಾಭಿವೃದ್ಧಿಯ ಕಾರ್ಯಕ್ರಮಗಳನ್ನು ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೈಗೊಂಡು,ಯಶಸ್ವಿಯಾಗಿದ್ದಾರೆ.ವೀರೇಂದ್ರ ಹೆಗ್ಗಡೆಯವರ ಜನಪ್ರಿಯತೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಲೋಕಪ್ರಸಿದ್ಧಿಯನ್ನು ಸಹಿಸದ ಕ್ಷುಲ್ಲಕ ವ್ಯಕ್ತಿಗಳು ಧರ್ಮಸ್ಥಳದ ‘ ಧವಳಶುಭ್ರಕೀರ್ತಿಗೆ’ ಕಳಂಕ ತರಬಯಸುತ್ತಾರೆ.ದುರ್ಬುದ್ಧಿಯ ಜನರ ಈ ಕೃತ್ಯವು ಆಕಾಶಕ್ಕೆ ಕೆಸರು ಎರಚಿದಂತೆ.

ವೀರೇಂದ್ರ ಹೆಗ್ಗಡೆಯವರೇ ಸ್ಪಷ್ಟಪಡಿಸಿದ್ದಾರೆ ‘ ಸೌಜನ್ಯಾಳ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ಅಂದಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಸಂಗತಿಯನ್ನು’. ಅಲ್ಲದೆ ಈ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ.ಸೌಜನ್ಯಾಳ ಕೊಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸಿಲುಕಿಸಬಯಸುವವರು ಮೇಲಿನ ಕೋರ್ಟಿಗೆ ಅಪೀಲು ಹೋಗಬಹುದಿತ್ತು ಸೌಜನ್ಯಾಳ ಕುರಿತು ನ್ಯಾಯಾಲಯವು ನೀಡಿದ ತೀರ್ಪು ಅವರಿಗೆ ಅತೃಪ್ತಿಯನ್ನುಂಟು ಮಾಡಿದ್ದರೆ.ಅದು ಸಾಂವಿಧಾನಿಕ ವಿಧಾನವೂ ಆಗುತ್ತಿತ್ತು.ಅದನ್ನು ಬಿಟ್ಟು ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಲೇಖನ,ಬರಹಗಳನ್ನು ಬರೆಯುವುದು ಅಂತಹ ಮಹಾನುಭಾವರ ದುರುದ್ದೇಶವನ್ನು ಎತ್ತಿತೋರಿಸುತ್ತದೆ.

ಧರ್ಮಸ್ಥಳವು ವಿಕೃತಿಮತಿಗಳ ದುರುದ್ದೇಶಪೀಡಿತ ವಿಕಾರಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವನ್ನು ಪಡೆದಿದೆ. ಸ್ವಯಂ ಪರಶಿವನು ಮಂಜುನಾಥನ ರೂಪದಲ್ಲಿ ಪ್ರಕಟಗೊಂಡು ಜಗದೋದ್ಧಾರದ ಲೀಲೆಯನ್ನಾಡುತ್ತಿರುವದರಿಂದ ಯಾವ ದುರಾತ್ಮರ ದುರ್ಬುದ್ಧಿಯ ಆಟ ನಡೆಯದು ಅಲ್ಲಿ.ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪಿತೂರಿಗಳಲ್ಲಿ ಇದು ಮೊದಲನೆಯದೇನಲ್ಲ; ಧರ್ಮಸ್ಥಳದ ಲೋಕಪ್ರಸಿದ್ಧಿಯನ್ನು,ವೀರೇಂದ್ರ ಹೆಗ್ಗಡೆಯವರ ಔನ್ನತ್ಯವನ್ನು ಸಹಿಸದ ಅಲ್ಪಮತಿಗಳು ಆಗಾಗ್ಗೆ ಇಂತಹ ಉಪದ್ರವಗಳನ್ನುಂಟು ಮಾಡುತ್ತಿದ್ದಾರೆ.ಒಂದು ಸತ್ಯವನ್ನು ಇಂತಹ ಮಹಾನುಭಾವರುಗಳು ಮರೆತಿದ್ದಾರೆ,ಧರ್ಮಸ್ಥಳದ ಮಂಜುನಾಥನು ಬರಿಯ ಬೋಳೇ ಶಂಕರ ಶಿವನಲ್ಲ,ಪ್ರಳಯ ರುದ್ರನೂ ಅಹುದು.ದುಷ್ಟಶಿಕ್ಷಕ,ಶಿಷ್ಟರಕ್ಷಕನಾಗಿರುವ ಮಂಜುನಾಥನು ದುಷ್ಟರನ್ನು,ದುರುಳರನ್ನು ದಂಡಿಸದೆ ಬಿಡುವುದಿಲ್ಲ.ಇದು ಲಕ್ಷಾಂತರ ಜನರ ಅನುಭವ.

ಮಹಾಶೈವ ಧರ್ಮಪೀಠ ಎನ್ನುವ ಧಾರ್ಮಿಕ ಕ್ಷೇತ್ರದ ಮುಖ್ಯಸ್ಥನಾಗಿರುವ ನಾನು ಕಾಶಿಯೂ ಸೇರಿದಂತೆ ದೇಶದ ಪ್ರಮುಖ ತೀರ್ಥಕ್ಷೇತ್ರಗಳನ್ನೆಲ್ಲ ಕಂಡಿದ್ದೇನೆ.ಆದರೆ ಧರ್ಮಸ್ಥಳದಂತೆ ಅನ್ನದಾಸೋಹವನ್ನು ಶ್ರದ್ಧಾಭಕ್ತಿಗಳಿಂದ,ಸಮರ್ಪಣಾಭಾವದಿಂದ ನಡೆಸುವ ಮತ್ತೊಂದು ಕ್ಷೇತ್ರವನ್ನು ನಾನು ಕಂಡಿಲ್ಲ.ಧರ್ಮಸ್ಥಳದಲ್ಲಿರುವಂತೆ ಶಿಸ್ತು,ಪ್ರಾಮಾಣಿಕ ಸೇವಾಮನೋಭಾವದ ಸಾವಿರಾರು ಕಾರ್ಯಕರ್ತರುಗಳನ್ನು ಬೇರೆಲ್ಲಿಯೂ ಕಾಣಲಾಗದು.ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿದಿನವೂ ಲಕ್ಷಾಂತರ ಭಕ್ತರುಗಳು ಭೇಟಿ ನೀಡುತ್ತಾರೆ.ಸಹಸ್ರ ಸಹಸ್ರ ಸಂಖ್ಯೆಯ ಜನರಿಗೆ ಅನ್ನವನ್ನು ನೀಡುವುದು,ಆಶ್ರಯ ಕಲ್ಪಿಸುವುದು ಸರಕಾರಕ್ಕೆ ಸವಾಲಿನ ಕೆಲಸವಾಗಿರುವಾಗ ವೀರೇಂದ್ರ ಹೆಗ್ಗಡೆಯವರು ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.ಧರ್ಮಸ್ಥಳದ ಶುಚಿತ್ವವು ಇತರಕ್ಷೇತ್ರಗಳಿಗೆ ಮಾದರಿ.ಸರಕಾರದಂತೆಯೇ ನೂರಾರು ಪ್ರಜಾಭಿವೃದ್ಧಿಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವ ವೀರೇಂದ್ರ ಹೆಗ್ಗಡೆಯವರು ‘ ಭಾರತರತ್ನ’ ಪ್ರಶಸ್ತಿಗೆ ಸರ್ವವಿಧದಲ್ಲೂ ಅರ್ಹರಿರುವ ಕನ್ನಡಿಗರು.ಸಮಾಜೋದ್ಧಾರ,ಕಲೆ ಸಾಹಿತ್ಯ, ವೈದ್ಯಕೀಯ,ಆಯುರ್ವೇದ,ಪ್ರಾಚ್ಯವಸ್ತು ಸಂಗ್ರಹ,ಇತಿಹಾಸ ಪುರಾತತ್ತ್ವ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಒಂದು ಜವಾಬ್ದಾರಿಯುತ ಬೃಹತ್ ಸರಕಾರದಂತೆ ಕೆಲಸ ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರಲ್ಲಿ ಕುಂದನ್ನು ಕಾಣುತ್ತಿರುವವರು ಅಲ್ಪರೇ ಸರಿ.ಅನ್ನದಾನ,ವಿದ್ಯಾದಾನ ಮತ್ತು ಅಭಯದಾನಗಳೆಂಬ ದಾನತ್ರಯಗಳಿಂದ ಲೋಕಪ್ರಸಿದ್ಧಿಯಾಗಿರುವ ಧರ್ಮಸ್ಥಳವು ಧರೆಯಮೇಲಣ ನಿಜಕೈಲಾಸವು.ಹಿಂದೂ ದೇವಸ್ಥಾನಗಳ ಪುನರುಜ್ಜೀವನಕ್ಕೆ ಉದಾರ ಹಸ್ತದ ನೆರವು ನೀಡುವ ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಹತ್ತಾರು ಸಾವಿರ ರುದ್ರಭೂಮಿಗಳ ಅಭಿವೃದ್ಧಿಗೂ ಆರ್ಥಿಕ ನೆರವು ನೀಡಿದ್ದಾರೆ.ಕರ್ನಾಟಕದ ಯಾವ ಧಾರ್ಮಿಕ ಕ್ಷೇತ್ರವೂ ಇಂತಹ ಕಾರ್ಯಗಳನ್ನು ಮಾಡುತ್ತಿಲ್ಲ ಎನ್ನುವುದನ್ನು ಮನಗಾಣಬೇಕು.ಧರ್ಮಸ್ಥಳವು ಜಗದೀಶ್ವರನಾದ ಪರಶಿವನ ಜಗದೋದ್ಧಾರದ ಬದ್ಧತೆಗೆ ಸಾಕ್ಷಿಯಾಗಿರುವ ಶಿವಜಾಗೃತಕ್ಷೇತ್ರವು.

ಸರ್ವಧರ್ಮ ಸಮನ್ವಯದ,ಜಾತ್ಯಾತೀತ ನಿಲುವಿನ,ಧಾರ್ಮಿಕ ಸಾಮರಸ್ಯದ ಕೇಂದ್ರವಾಗಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಅಲ್ಪಮತಿಗಳ ದುಷ್ಕೃತ್ಯವು ಖಂಡನಾರ್ಹವಾದುದು.ಧರ್ಮಸ್ಥಳದಂತೆ ಇರುವ ಮತ್ತೊಂದು ಸಮನ್ವಯ ಧಾರ್ಮಿಕ ಕ್ಷೇತ್ರ ಇಡೀ ದೇಶದಲ್ಲೇ ಇಲ್ಲ.ಮಂಜುನಾಥನು ಶಿವನಾದರೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಜೈನರು; ಮಂಜುನಾಥನ ಪೂಜಾರ್ಚನಾದಿಗಳನ್ನು ಮಾಡುವವರು ಮಾಧ್ವ ಬ್ರಾಹ್ಮಣರು.ಇಂತಹ ಧಾರ್ಮಿಕ ಸಾಮರಸ್ಯವನ್ನು ಬೇರಾವ ಧಾರ್ಮಿಕ ಕ್ಷೇತ್ರದಲ್ಲಿ ಕಾಣಲು ಸಾಧ್ಯವಿಲ್ಲ.ಉದರಪೋಷಣೆಗಾಗಿ ಹುಸಿ ದೈವಗಳನ್ನು ಸೃಷ್ಟಿಸಿ,ತಮ್ಮ ದೈವಗಳ ಸುತ್ತ ಹುಸಿಯ ಕಥೆ ಪವಾಡ- ಪುರಾಣಗಳನ್ನು ಹೊಸೆದು,ಮುಗ್ಧ ಜನರತ್ತ ಹುಸಿದೈವಗಳ ಹುಸಿಮಹಿಮೆಯ ಬಾಣಗಳನ್ನೆಸದು ಬದುಕುತ್ತಿರುವವರ ನಡುವೆಯೇ ಕಲಿಯುಗದಲ್ಲಿಯೂ ತನ್ನ ನಿತ್ಯಸತ್ಯಲೀಲೆಗಳಿಂದ ಜಗವನ್ನು,ಜನರನ್ನು ಉದ್ಧರಿಸುತ್ತಿರುವ ಅಭಯಂಕರ ಲೋಕಶಂಕರನ ಪ್ರತ್ಯಕ್ಷನೆಲೆಯಾದ ಶ್ರೀಕ್ಷೇತ್ರ ಧರ್ಮಸ್ಥಳದ ಬಗೆಗೆ ಕೆಟ್ಟದನ್ನು ಆಲೋಚಿಸುವವರು,ಕೆಟ್ಟದ್ದನ್ನು ಬಯಸುವವರು ಮನುಷ್ಯತ್ವವಿರೋಧಿ ಜನರು ಎನ್ನುವುದರಲ್ಲಿ ಸಂದೇಹವೇ ಇಲ್ಲ.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನಿತ್ಯಸತ್ಯಲೀಲೆಯನ್ನಾಡುತ್ತಿರುವ ಕೈಲಾಸನಾಥ ವಿಶ್ವೇಶ್ವರನು ಧರ್ಮಸ್ಥಳಕ್ಷೇತ್ರಕ್ಕಂಟಿದ ಕಾರ್ಮೋಡವನ್ನು ಕಳೆಯಲಿ,ವೀರೇಂದ್ರ ಹೆಗ್ಗಡೆಯವರಲ್ಲಿ ಬಲ ಶಕ್ತಿಗಳನ್ನು ತುಂಬಿ ಅವರ ಪರಿಶುದ್ಧಾತ್ಮವ್ಯಕ್ತಿತ್ವವು ಮತ್ತಷ್ಟು ಪ್ರಜ್ವಲಿಸಿ ಬೆಳಗುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತ ಈ ಲೇಖನಕ್ಕೆ ಮಂಗಳ ಹಾಡುವೆ.

೨೦.೦೭.೨೦೨೩

About The Author