ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖಾ ಅಧಿಕಾರಿಗಳ ಕಿರುಕುಳ : ಸ್ವಯಂ ನಿವೃತ್ತಿ’ ಪಡೆಯಲು ಇಚ್ಛಿಸಿದ ಕಾರಣಗಳು : ಮುಕ್ಕಣ್ಣ ಕರಿಗಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖಾ ಅಧಿಕಾರಿಗಳ ಕಿರುಕುಳ 

ಸ್ವಯಂ ನಿವೃತ್ತಿ ಪಡೆಯಲು ಇಚ್ಛಿಸಿದ ಹಿರಿಯ ಕೆಎಎಸ್ ಅಧಿಕಾರಿ ಮುಕ್ಕಣ್ಣ ಕರಿಗಾರ

ಸ್ವಯಂ ನಿವೃತ್ತಿ ಪಡೆಯಲು ಇಚ್ಛಿಸಿದ ಕಾರಣಗಳು 

ನಾನು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ.ಸರಕಾರದ ಉನ್ನತ ಹುದ್ದೆಯಲ್ಲಿದ್ದು ಇನ್ನು ಆರುವರ್ಷಗಳ ಸೇವಾವಧಿ ಇದ್ದೂ ನಾನು ಸ್ವಯಂ ನಿವೃತ್ತಿ ಪಡೆಯಲು ಬಯಸಿದ್ದು ಕೆಲವರ ಆಶ್ಚರ್ಯದ ಕಾರಣವಾಗಬಹುದು.ಹಾಗೆಯೇ ನನ್ನನ್ನು ಸರಕಾರಿ ಸೇವೆಯಿಂದ ಹೊರತಳ್ಳಲು ಪ್ರಯತ್ನಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲವು ಜನರಿಗೆ ಸಂತೋಷವೂ ಆಗಬಹುದು.ನನ್ನ ಬಂಧು- ಮಿತ್ರರು,ಹಿತೈಷಿಗಳುಗಳು,ಅಭಿಮಾನಿಗಳು,ಶಿಷ್ಯರುಗಳಿಗೆ ಬೇಸರ ಉಂಟಾಗಬಹುದು; ನನ್ನ ಏಳ್ಗೆಯನ್ನು ಸಹಿಸದೆ ಸದಾ ತೊಡರುಗಾಲನ್ನುಂಟು ಮಾಡುತ್ತಿದ್ದವರಿಗೆ ಮೃಷ್ಟಾನ್ನ ಭೋಜನದ ಸವಿಯನ್ನನುಭವಿಸಿದ ಖುಷಿಯೂ ಆಗಬಹುದು.

ಯಾರು ಏನೇ ಹೇಳಲಿ,ಯಾರು ಹೇಗೆಯೇ ಪ್ರತಿಕ್ರಿಯಿಸಲಿ ನಾನು ಸರಕಾರಿ ಸೇವೆಯಿಂದ ಮುಕ್ತನಾಗಬಯಸಿದ್ದೇನೆ.ಸ್ವಯಂ ನಿವೃತ್ತಿ ಪಡೆಯುವ ನನ್ನ ನಿರ್ಧಾರ ಅಚಲವಾದುದು.ಹಳ್ಳಿಗಾಡಿನ,ಬಡಕುಟುಂಬದಿಂದ ಬಂದು ಪ್ರತಿಭೆ,ಸ್ವಯಂ ಪರಿಶ್ರಮ ಮತ್ತು ದೈವಾನುಗ್ರಹಗಳಿಂದಲೇ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಜೆಟೆಡ್ ಅಧಿಕಾರಿ ಹುದ್ದೆಗೆ ಆಯ್ಕೆಗೊಂಡು,ಕ್ಷೇತ್ರಾಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಸರಕಾರಿ ಅಧಿಕಾರಿಯಾಗಿ ವೃತ್ತಿಜೀವನ ಪ್ರಾರಂಭಿಸಿ, ಹಿರಿಯ ಶ್ರೇಣಿಯ ಉಪಕಾರ್ಯದರ್ಶಿ ಹುದ್ದೆಯವರೆಗೆ ತಲುಪಿ,ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇ ಸಾಕು ಎನ್ನಿಸಿದೆ.

ಫೆಬ್ರವರಿ 13 ಕ್ಕೆ ನಾನು ಸರಕಾರಿ ಸೇವೆಗೆ ಸೇರಿ 26 ವರ್ಷಗಳು ಪೂರ್ಣಗೊಂಡವು.ಇನ್ನು ಆರುವರ್ಷಗಳಿಗೂ ಮಿಕ್ಕು ಸೇವಾ ಅವಧಿ ಉಳಿದಿತ್ತು.ಸರಕಾರಿ ಸೇವೆಯಲ್ಲಿ ಮುಂದುವರೆದಿದ್ದರೆ ಉನ್ನತ ಹುದ್ದೆಗಳನ್ನು ಪಡೆಯಬಹುದಿತ್ತು ಎಂದು ಕೆಲವರಿಗೆ ಅನ್ನಿಸಬಹುದು.ದುಡುಕು ನಿರ್ಧಾರ ಎಂದೂ ಕೆಲವರು ಆಕ್ಷೇಪಿಸಬಹುದು.ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಸರಕಾರಿ ಸೇವೆಯಲ್ಲಿ ನಾನು ಅನುಭವಿಸಿದ ನೋವು,ಯಾತನೆ,ಸಂಕಟಗಳನ್ನು ಬಲ್ಲವರಿಗೆ ನನ್ನ ನಿರ್ಧಾರ ಸರಿ ಎನ್ನಿಸಿರುತ್ತದೆ.

ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗಟ್ಟಿಯಾಗಿ ಬೇರೂರಿರುವವರಿಗೆ ನಾನು ಸೇವೆಯಲ್ಲಿ ಮುಂದುವರೆಯುವುದು ಬೇಕಿಲ್ಲ.ಆ ಕಾರಣದಿಂದ ನಾನಾ ತರಹದ ಕಿರುಕುಳ- ಉಪದ್ರವ ನೀಡಿದರು.ನಾನು ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಆಗಿದ್ದಾಗ ಕೊವಿಡ್ ನಿಂದ ನಮ್ಮ ಮಾವ ಕರಬಸ್ಸಪ್ಪ ಹಾಸಗೊಂಡ ಅವರು ಮೃತಪಟ್ಟರು,ಹೃದಯಾಘಾತದಿಂದ ನಮ್ಮ ಅತ್ತೆ ಶಾರದಾಬಾಯಿಯವರು ನಿಧನ ಹೊಂದಿದರು.ನನಗೆ ವಿಂಧ್ಯಾ ಎನ್ನುವ ಮೂರು ವರ್ಷದ ಮಗಳು ಮತ್ತು ನಿತ್ಯಾ ಎನ್ನುವ ಒಂದು ವರ್ಷದ ಮಗಳು ಹೀಗೆ ಇಬ್ಬರು ಸಣ್ಣಮಕ್ಕಳು ಇದ್ದು ಅವರಿಬ್ಬರನ್ನು ನೋಡಿಕೊಳ್ಳಬೇಕಿದ್ದ ನನ್ನ ಅತ್ತೆ ಮಾವ ಇಬ್ಬರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ನನ್ನ ಹೆಂಡತಿ ಸಾಧನಾ ಮಾನಸಿಕವಾಗಿ ಜರ್ಝರಿತಳಾಗಿದ್ದಳು. ನನ್ನ ತಾಯಿ ಮಲ್ಲಮ್ಮ ಕರಿಗಾರ ಅವರು 84 ವರ್ಷ ವಯಸ್ಸಿನವರಾಗಿದ್ದು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ಆಗಾಗ ಚಿಕಿತ್ಸೆ ಮಾಡಬೇಕಾಗಿರುತ್ತದೆ ಎನ್ನುವ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ನನ್ನನ್ನು ಇನ್ನೂ ಒಂದು ವರ್ಷ ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯಿಸುವಂತೆ ಕೋರಿ ಸರಕಾರದ ಪ್ರಧಾನ ಕಾರ್ಯದರ್ಶಿಗಳವರಿಗೆ ಮನವಿ ಸಲ್ಲಿಸಿದ್ದೆ.ಬಹುಶಃ ಮನುಷ್ಯತ್ವ ಇರುವ ಯಾರೂ ನನ್ನ ಮನವಿಯನ್ನು ತಳ್ಳಿ ಹಾಕುತ್ತಿರಲಿಲ್ಲ.ಹೃದಯಶೂನ್ಯರು ನನ್ನ ಮನವಿಯನ್ನು ತಿರಸ್ಕರಿಸಿ ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಿಂದ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರ ಹುದ್ದೆಗೆ ವರ್ಗಾಯಿಸಿದರು.ನನಗೆ‌ ಪದೋನ್ನತಿ ನೀಡಲು ಕಲ್ಬುರ್ಗಿಯ ಕೆ ಎ ಟಿ ಯು ನೀಡಿದ್ದ ಆದೇಶವನ್ನು ಪಾಲಿಸದೆ ಇರುವ ಸರ್ಕಾರದ ನಿರ್ಧಾರಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದನ್ನು ಹಿಂಪಡೆಯಲು ನಾನಾ ರೀತಿಯ ಒತ್ತಡಗಳನ್ನು ಹೇರಿದರು.

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅಲ್ಲಿಯ ಉಪಕಾರ್ಯದರ್ಶಿಗಳು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ನನ್ನನ್ನು ಅವರ ವಿರೋಧಿ ಎಂಬಂತೆ ಕಂಡರು.ಸೇವಾ ಹಿರಿತದಲ್ಲಿ ಮಾತ್ರವಲ್ಲ ಸೇವಾ ಅನುಭವದಲ್ಲಿ ಎಲ್ಲರಿಗಿಂತ ಹಿರಿಯನಿದ್ದ ನನ್ನೊಡನೆ ಕೆಲಸ ಮಾಡಲು ಅವರಿಗೆ‌ ಮುಜುಗರ ಎನ್ನಿಸಿರಬೇಕು.ವಿವಿಧ ರೀತಿಯ ಉಪಟಳ ನೀಡತೊಡಗಿದರು.ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯಲ್ಲಿ ಡಿಸೆಂಬರ್ 2021 ರಿಂದ ಕೆಲಸ ಮಾಡಿದರೂ ಇಲ್ಲಿಯವರೆಗೆ ನನ್ನ ಸಂಬಳವನ್ನೇ ಕೊಡದೆ ಔದಾರ್ಯ ಮೆರೆದಿದ್ದಾರೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಅಧಿಕಾರಿ ಮಹಾನುಭಾವರುಗಳು!

ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ‌ ಪ್ರಾರಂಭಗೊಂಡ ಇಷ್ಟು ವರ್ಷಗಳ ಅವಧಿಯಲ್ಲಿ ಇಲಾಖೆ ನನ್ನಂತಹ ಬಹುಮುಖ ಪ್ರತಿಭಾವಂತ,ನಿಷ್ಠ ಮತ್ತು ದಕ್ಷ ಅಧಿಕಾರಿಯನ್ನು ಕಂಡಿಲ್ಲ ಎಂದು ಬಹುಮಹಡಿಗಳ ಕಟ್ಟಡದ ಕೆಲವು ಅಧಿಕಾರಿಗಳೇ ಹೊಗಳುತ್ತಾರೆ.’ ಶತಮಾನದ ಶಕ್ತಿ’ ಯಾಗಲಿರುವ ನನ್ನಂತಹವರು ಇಲಾಖೆಯಲ್ಲಿದ್ದುದು ಸೌಭಾಗ್ಯ ಎಂದು ಭಾವಿಸಬೇಕಾದ ಆರ್ಡಿಪಿಆರ್ ನವರು ನನ್ನನ್ನು ಅವರ ಶತ್ರು ಎಂಬಂತೆ ಭಾವಿಸಿ, ಇಲಾಖೆಯಿಂದ ಹೊರಹಾಕಲು ಏನೆಲ್ಲ ಕಸರತ್ತು – ಮಸಲತ್ತುಗಳನ್ನು ಮಾಡಿದರು.ಆಗಾಗ ಸರಕಾರದ ದ್ವಂದ್ವ ಮತ್ತು ಇಬ್ಬಗೆ ನೀತಿಯನ್ನು ಪ್ರಶ್ನಿಸಿ ನಾನು ಬರೆಯುತ್ತಿದ್ದ ಪತ್ರಗಳು ಕೆಲವರನ್ನು ಕೆರಳಿಸುತ್ತಿದ್ದವು.ಕಾರಣಕೇಳುವ ನೋಟೀಸುಗಳನ್ನು ನೀಡುವುದು,ಆಧೀನದ ಅಧಿಕಾರಿಗಳಿಂದ ನನ್ನ ವಿರುದ್ಧ ಪ್ರತಿಕೂಲ ವರದಿಗಳನ್ನು ಕೇಳುವುದು,ನನ್ನ ಜಾತಕ ಹುಡುಕುವುದು ಇವೇ ಮೊದಲಾದ ಘನಕಾರ್ಯಗಳನ್ನು ಮಾಡಿ ನನಗೆ ತೊಂದರೆ ಕೊಡತೊಡಗಿದರು.

ಆರ್ಡಿಪಿಆರ್ ನಲ್ಲಿ ನನಗೆ ಕೊಡುತ್ತಿರುವ ಮಾನಸಿಕ ಹಿಂಸೆ,ಉಪಟಗಳಿಂದ ಬೇಸತ್ತು ಇವರ ಸಹವಾಸವೇ ಬೇಡವೆಂದು ಪ್ರವಾಸೋದ್ಯಮ ಇಲಾಖೆಗೆ ಹೋಗಲಿಚ್ಛಿಸಿದೆ. ಮಾನ್ಯ ಮುಖ್ಯಮಂತ್ರಿಗಳವರು ಕಲ್ಬುರ್ಗಿಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲು ಸ್ಪಷ್ಟವಾಗಿ ಸೂಚಿಸಿದರೂ ಆರ್ಡಿಪಿಆರ್ ಇಲಾಖೆಯವರು ಮುಖ್ಯಮಂತ್ರಿಗಳವರಿಗಿಂತ ತಾವು ದೊಡ್ಡವರು ಎಂದು ಭಾವಿಸಿದ್ದರೋ ಏನೋ ಮುಖ್ಯಮಂತ್ರಿಗಳವರ ಲಿಖಿತ ಸೂಚನೆಯನ್ನು ಜಾರಿಗೆ ತರಲು ಮನಸ್ಸು ಮಾಡಲಿಲ್ಲ.ಕೊನೆಗೆ ನನ್ನ ಮನವಿಗೆ ಬೇಸತ್ತು ಪ್ರವಾಸೋದ್ಯಮ ಇಲಾಖೆಗೆ ಯಾವುದೋ ಒಂದು ಪತ್ರ ಬರೆದರು ‘ ಹಾವು ಸಾಯಬಾರದು,ಕೋಲು ಮುರಿಯಬಾರದು’ ಎಂಬಂತೆ.ಆರ್ಡಿಪಿಆರ್ ಇಲಾಖೆಯವರಿಗೆ ನಾನು ಕಲ್ಬುರ್ಗಿಯ ಜಂಟಿ ನಿರ್ದೇಶಕರ ಹುದ್ದೆಗೆ ಹೋಗುವುದು ಇಷ್ಟವಿರಲಿಲ್ಲ! ಆರ್ಡಿಪಿಆರ್ ಇಲಾಖೆಯ ಒಬ್ಬ ಗುಮಾಸ್ತ ನನ್ನ ಬಗೆಗೆ ಇಲ್ಲ ಸಲ್ಲದ ವರದಿಗಳುಳ್ಳ ಪತ್ರ,ಟಿಪ್ಪಣಿಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದ.ಆರ್ಡಿಪಿಆರ್ ನಲ್ಲಿ ನನ್ನ ವಿರುದ್ಧ ಏನೇನು ಷಡ್ಯಂತ್ರ ನಡೆಯುತ್ತಿದೆ ಎಂದು ತಿಳಿದುಕೊಳ್ಳದೆ ಇರುವಷ್ಟು ದಡ್ಡ ನಾನಲ್ಲ.ಕೆಲವು ರಾಜಕಾರಣಿಗಳು,ಕೆಲವು ಜನ ಐಎಎಸ್ ಅಧಿಕಾರಿಗಳು ಮತ್ತು ನನ್ನ ಬ್ಯಾಚಿನ ಇಬ್ಬರು ಅಧಿಕಾರಿಗಳು ಹಾಗೂ ನನ್ನ ಆಧೀನದಲ್ಲಿ ಕೆಲಸ ಮಾಡಿದ ಕೆಲವು ಜನ ಜೂನಿಯರ್ ಅಧಿಕಾರಿಗಳು ನನ್ನ ವಿರುದ್ಧ ಏನೆಲ್ಲ ಕಸರತ್ತುಗಳನ್ನು ಮಾಡಿದ್ದಾರೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ.ಆರ್ಡಿಪಿಆರ್ ನ ಅಧಿಕಾರಿಗಳು ನೀಡಿದ ಕಿರುಕುಳ- ಉಪಟಳಗಳನ್ನು ಕಲ್ಲೆದೆಯವನಾದ ಕಾರಣದಿಂದ ನಾನು ಸಹಿಸಿಕೊಂಡಿದ್ದೇನೆ.ನನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.ಆಧ್ಯಾತ್ಮ ಸಾಧಕನಾಗಿರುವ ನನಗೆ ನನ್ನ ಭವ್ಯ ಭವಿಷ್ಯದ ಸ್ಪಷ್ಟ ತಿಳಿವಳಿಕೆ‌ ಇದೆ, ನಾನು ಸಾಧಿಸಬೇಕಿರುವ ಮಹಾನ್ ಕಾರ್ಯಗಳ ಮುನ್ಸೂಚನೆ ಇದೆ.ಹಾಗಾಗಿ ನಾನು ಹೇಡಿಯಾಗಿ ಆತ್ಮಹತ್ಯೆಯ ಹಾದಿ ತುಳಿಯದೆ ವೀರೋಚಿತವಾಗಿ ಹೋರಾಡಿ ದೇವರು ನನಗೆ ನೀಡಲಿರುವ ಸ್ಥಾನ ಮಾನ,ಅಧಿಕಾರ- ಗದ್ದುಗೆಗಳನ್ನು ಪಡೆದು ಲೋಕೋದ್ಧಾರ ಕಾರ್ಯ ಮಾಡಬೇಕು ಎನ್ನುವ ಸಂಕಲ್ಪ ಮತ್ತು ಸದಿಚ್ಛೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹೊರಹೋಗಲು ಇಚ್ಛಿಸಿದ್ದೇನೆ.ನಾನು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯುವ ಬಗ್ಗೆ ನವೆಂಬರ್ 02,2022 ರಂದೇ ಸರಕಾರಕ್ಕೆ ಮಾಹಿತಿ ನೀಡಿದ್ದೇನೆ ಮತ್ತು ಇಲ್ಲಿಯವರೆಗೂ ಸ್ವಯಂ ನಿವೃತ್ತಿ ಪಡೆಯುವ ನನ್ನ ನಿರ್ಧಾರ ಬದಲಾಗಿಲ್ಲ.

ಮಹಾತ್ಮ ಗಾಂಧಿ ನರೆಗಾ ಯೋಜನೆಯಡಿ ನಾನು ಬಳ್ಳಾರಿ ಮತ್ತು ಯಾದಗಿರಿ ಜಿಲ್ಲಾ ಪಂಚಾಯತಿಗಳಲ್ಲಿ ಸಾಧಿಸಿದ ಅದ್ಭುತ ಪ್ರಗತಿ ಅಧಿಕಾರಿಗಳ ಕಣ್ಣಿಗೆ ಕಾಣಿಸದೆ ಇರಬಹುದು.ಆದರೆ ಎಲ್ಲ ಅಡ್ಡಿ- ಆತಂಕಗಳಿಗೆ ಎದೆಗುಂದದೆ ನರೆಗಾ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಸಹಸ್ರ ಸಹಸ್ರ ಸಂಖ್ಯೆಯ ಬಡಕುಟುಂಬಗಳಿಗೆ ಆಸರೆಯಾದ ಆತ್ಮತೃಪ್ತಿ ನನಗಿದೆ.ಸಾವಿರಾರು ಕೂಲಿಕಾರರು ಇಂದಿಗೂ ನನ್ನನ್ನು ಸ್ಮರಿಸುತ್ತಾರೆ.ಘನಮಾನ್ಯರುಗಳಿಗೆ ತಲೆಬಾಗಿ ನಮಿಸದ ನಾನು ಜನಸಾಮಾನ್ಯರಿಗೆ ನನ್ನ ಕಛೇರಿ ಬಾಗಿಲನ್ನು ತೆರೆದಿಟ್ಟು ‘ ಜನಸಾಮಾನ್ಯರ ಅಧಿಕಾರಿ’ ಎನ್ನುವ ಹಿರಿಮೆಗೆ ಪಾತ್ರನಾದ ಹೆಮ್ಮೆಯೂ ನನಗಿದೆ.ಸರಕಾರದ ಅಧಿಕಾರಿಗಳು ಅರಮನೆಯಂತಹ ಮನೆ ಮಹಲುಗಳನ್ನು ಕಟ್ಟಿಸಿ,ಕುಬೇರರಂತೆ ವೈಭವದಲ್ಲಿ ಮೆರೆಯುತ್ತಿದ್ದರೂ ಸರಕಾರಿ ಅಧಿಕಾರಿಯಾಗಿ ಉನ್ನತ ಹುದ್ದೆಗಳಲ್ಲಿದ್ದೂ ಇದುವರೆಗೂ ಒಂದು ಮನೆಯನ್ನು ಕಟ್ಟಿಸಲು ಆಗದೆ ಸಣ್ಣಮನೆಯಲ್ಲಿ ಜನಸಾಮಾನ್ಯರಂತೆ ವಾಸಿಸುತ್ತಿರುವ ‘ಸೇವಾಯೋಗಿ’ ಯ ಸಾರ್ಥಕತೆಯೂ ನನಗಿದೆ. ಇಪ್ಪತ್ತಾರು ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಇಪ್ಪತ್ತಾರು ಲಕ್ಷ ಅಲ್ಲ,ಎರಡು ಲಕ್ಷ ಇಪ್ಪತ್ತು ಸಾವಿರಗಳ ಬ್ಯಾಂಕ್ ಬ್ಯಾಲೆನ್ಸೂ ಕೂಡ ಇಲ್ಲದ ಪ್ರಾಮಾಣಿಕ ಸೇವೆಯ ಸಂತೃಪ್ತ ನನಗಿದೆ. ಪ್ರಾಮಾಣಿಕರು,ದಕ್ಷರು ಎಂದು ಕೊಚ್ಚಿಕೊಳ್ಳುವ ಅಧಿಕಾರಿಗಳು ತೆರೆದ ಪುಸ್ತಕದಂತೆ ಇರುವ ನನ್ನ ಬಯಲ ಬದುಕನ್ನು ನೋಡಬಹುದು.ಕತ್ತಲೆ ಎಷ್ಟೇ ದಟ್ಟವಾಗಿದ್ದರೂ ಸೂರ್ಯನ ಪ್ರಖರ ಕಿರಣಗಳಿಗೆ ಕರಗಿ ಓಡಲೇಬೇಕು.ಸತ್ಪುರುಷರನ್ನು,ಸಚ್ಚರಿತ್ರರನ್ನು ಕಾಡಿದವರು ಯಾರೇ ಇದ್ದರೂ ಎಷ್ಟೇ ದೊಡ್ಡವರು ಇದ್ದವರು ಕರ್ಮದ ಫಲವನ್ನು ಅನುಭವಿಸಲೇಬೇಕು.ಹಂಗಿನ ಅರಮನೆ ಬೇಡವೆಂದು ಸರಕಾರಿ ಅಧಿಕಾರಿ ಜೀವನದ ಸುಖ- ಸವಲತ್ತುಗಳನ್ನು‌ ತ್ಯಜಿಸಿ ಹೊರನಡೆದಿರುವ ನಾನು ಶಿವಸಂಕಲ್ಪದ ಲೋಕಕಲ್ಯಾಣದ ಹಾದಿಯನ್ನು ಆಯ್ದುಕೊಂಡಿದ್ದೇನೆ. ಸದಾ ಜನಸಾಮಾನ್ಯರೊಂದಿಗೆ ಬದುಕುತ್ತಿರುವ ನಾನು ಜನಸಾಮಾನ್ಯರ ಜೊತೆಗೇ ಇರುವ ಸಮಷ್ಟಿ ಕಲ್ಯಾಣದ ಪಥವನ್ನು ಆಯ್ದುಕೊಂಡಿದ್ದೇನೆ.

About The Author