ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ : ಪೇ.10ಕ್ಕೆ ಶಹಾಪುರಕ್ಕೆ ಸಿದ್ದರಾಮಯ್ಯ ಆಗಮನ : ಕಾರ್ಯಕ್ರಮ ಯಶಸ್ವಿಗೊಳಿಸಲು ದರ್ಶನಾಪುರ ಕರೆ

ಶಹಾಪುರ : ಕರ್ನಾಟಕ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯು ಫೆ.10ಕ್ಕೆ ಶಹಾಪುರ ನಗರಕ್ಕೆ ಆಗಮಿಸುತ್ತಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಎನ್‌ಜಿಒ ಕಾಲೋನಿಯ ಮೈದಾನದಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮ ನಡೆಯಲಿದ್ದು, ವಿರೋಧಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.

ಇಂದು ಪ್ರಜಾಧ್ವನಿ ಕಾರ್ಯಕ್ರಮ ನಡೆಯುವ ಎನ್ಜಿಓ ಕಾಲೋನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಧ್ವನಿ ಯಾತ್ರೆಯಲ್ಲಿ 14 ಲೋಕಸಭೆ 112 ವಿಧಾನಸಭೆಯಲ್ಲಿ ಒಂದು ತಂಡದ ನೇತೃತ್ವ ವಹಿಸಿರುವ ಸಿದ್ದರಾಮಯ್ಯನವರು ಶಹಾಪುರ ನಗರಕ್ಕೆ ಆಗಮಿಸುವರು.ಕಾಂಗ್ರೆಸ್ ಮುಖಂಡರಾದ ಸತೀಶ ಜಾರಕಿಹೊಳಿ, ಜಮೀರ್ ಅಹ್ಮದ್, ಪ್ರಕಾಶ್ ರಾಥೋಡ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ಸರ್ಕಾರ ಎಲ್ಲಾ ರೀತಿಯಲ್ಲಿ ವಿಫಲವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ರೈತರ ಹಿತಕಾಯಲಿಲ್ಲ.ಉದ್ಯೋಗ ಸೃಷ್ಟಿಸಲಿಲ್ಲ. ಸರಕಾರದ ಹಗರಣಗಳ ಬಗ್ಗೆ ತಮ್ಮ ಪಕ್ಷದ ಶಾಸಕರು ಮತ್ತು ಸಚಿವರು ಬಹಿರಂಗವಾಗಿ ಕಚ್ಚಾಡಿಕೊಂಡಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದರು. ಇಂತಹ ಭ್ರಷ್ಟ ಸರ್ಕಾರವನ್ನು ತೆಗೆದೊಗೆಯಲು ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದು, ಯಾತ್ರೆಯಲ್ಲಿ ಸುಮಾರು 40 ರಿಂದ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಸ್ ಸಂಚಾರ ಮುಖಾಂತರ ಆಗಮಿಸುವ ಯಾತ್ರೆ ಯಶಸ್ವಿಯಾಗಲಿದೆ ಎಂದು ಹೇಳಿದರು. ಈಗಾಗಲೇ ಪ್ರಜಾಧ್ವನಿಯಾತ್ರೆಯ ಎಲ್ಲಾ ಪೂರ್ವ ಸಿದ್ಧತೆಗಳನ್ನು ನಗರದಲ್ಲಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳಾದ ಮರಿಗೌಡ ಹುಲ್ಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಬೋಳ, ಕುರಿ ಮತ್ತು ಮೇಕೆ ಮಹಾಮಂಡಳಿ ನಿರ್ದೇಶಕರಾದ ಶಾಂತನಗೌಡ ನಾಗನಟಗಿ, ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು, ನೀಲಕಂಠ ಬಡಿಗೇರ, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಇತರರು ಇದ್ದರು.

About The Author