ಶಾಸಕರಿಂದ ಗೌಡಗೇರಾ ಶಾಲಾ ಕಟ್ಟಡಗಳ ಉದ್ಘಾಟನೆ : ವಿವಿಧ ಕಾಮಗಾರಿಗಳ ಚಾಲನೆ

ಯಾದಗಿರಿ : ಶಹಾಪುರ ಮತಕ್ಷೇತ್ರದ ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ಗೌಡಗೇರಿ ಗ್ರಾಮದಲ್ಲಿ ಇಂದು ನೂತನವಾಗಿ ನಿರ್ಮಿಸಿದ ನೂತನ ಪ್ರೌಢ ಶಾಲೆ ಕಟ್ಟಡವನ್ನು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಲೋಕಾರ್ಪಣೆಗೊಳಿಸಿದರು.

ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಬಡವರ ಹಾಗೂ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸುಮಾರು 99.99 ಲಕ್ಷ ರೂ. ವೆಚ್ಚದಲ್ಲಿ ಮಂಜೂರು ಮಾಡಿಸಿ ಈ ನೂತನ ಪ್ರೌಢ ಶಾಲೆ ನಿರ್ಮಿಸಿದ್ದು. ವಿಧ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ತರುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಈ ನಿಟ್ಟಿನಲ್ಲಿ ಶ್ರಮಿಸುವಂತೆ ಸಲಹೆ ನೀಡಿದರು.

ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದ ಅವರು ಈ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಗ್ರಾಮಕ್ಕೆ ಸುಮಾರು 35 ಲಕ್ಷ ರೂ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಚಂದಪ್ಪ, ಗ್ರಾಪಂ ಉಪಾಧ್ಯಕ್ಷ ಮತ್ತು ಸದಸ್ಯರು, ಶಾಲೆಯ ಶಿಕ್ಷಕರು-ಶಿಕ್ಷಕಿಯರು, ಮಕ್ಕಳು, ಊರಿನ ಗಣ್ಯರು ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರೂ ಉಪಸ್ಥಿತರಿದ್ದರು.

About The Author