ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೪ ಮಹಾಗುರುವಿನ ಮಹಾ ಹರಕೆ,ಲೋಕಕಲ್ಯಾಣ ದೀಕ್ಷೆ–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೪

ಮಹಾಗುರುವಿನ ಮಹಾ ಹರಕೆ,ಲೋಕಕಲ್ಯಾಣ ದೀಕ್ಷೆ

ಮುಕ್ಕಣ್ಣ ಕರಿಗಾರ

” ಶಿಷ್ಯೋತ್ತಮನೆ,ಎಂದೆಂದಿಗೂ ನಾನು ನಿನ್ನೊಂದಿಗೆ ಇದ್ದೇನೆ,ಇರುತ್ತೇನೆ,ನೀನು ಎಲ್ಲಿಗೆ ಹೋಗುತ್ತಿಯೋ,ಅಲ್ಲಿಗೆ ನಾನು ಧಾವಿಸುತ್ತೇನೆ.ನನ್ನ ಸಾಕ್ಷಾತ್ಕಾರದ ಫಲವನ್ನು ನಿನಗೆ ಧಾರಾಳವಾಗಿ ಧಾರೆ ಎರೆದಿದ್ದೇನೆ.ಆ ಫಲವನ್ನು ಸದಾ ಸಂರಕ್ಷಿಸುವುದು,ಅನುಭವಿಸುವುದು,ಇತರರಿಗೆ ವಿತರಿಸುವುದು ನಿನ್ನ ಕರ್ತವ್ಯ ‘”

” ದೇವನಿಗೆ ದೀನರೆಂದರೆ ತುಂಬಾ ಪ್ರೀತಿ.ಅವನು ದೀನಜನರ ಬಂಧು,ನೀನು ದೇವನ ಅಂಶವಾಗಿರುವಿ.ದೀನಜನರ ರಕ್ಷಕನಾಗಬೇಕಲ್ಲ!.ದೇವಾಂಶ ಸಂಭೂತನು ಎಲ್ಲ ಜನರಲ್ಲಿ ಆ ದೇವನನ್ನೇ ದರ್ಶಿಸಬಲ್ಲ.ನನ್ನ ಆಶೀರ್ವಾದ,ದೇವನ ಕರುಣೆ ನಿನ್ನಲ್ಲಿ ತುಂಬಿಕೊಂಡಿದೆ ಎಂದು ನೆರೆನಂಬಿಕೊಂಡಿರು.ನಿನ್ನ ನಂಬಿಗೆಯೇ ನಿನ್ನ ಬಾಳಿನ ಬೆಳಕು”.

ಶಿವಾನುಗ್ರಹವನ್ನು ಕರುಣಿಸಿ,ನನ್ನನ್ನು ಉದ್ಧರಿಸಿದ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಉಪದೇಶಾಮೃತವಿದು ನನಗೆ.ಇದು ಅವರ ಕೊನೆಯ ಉಪದೇಶವೂ ಹೌದು ನನಗೆ.1995 ರ ಅಕ್ಟೋಬರ್ ಮೊದಲವಾರದಲ್ಲಿ ಬರೆದ ಪತ್ರದಲ್ಲಿ ಹೀಗೆಂದು ಹರಸಿ,ಆಶೀರ್ವದಿಸಿದ್ದರು.ಮಹಾಗುರುವಿನ ಮಾತೃವಾತ್ಸಲ್ಯದ ಮಹಾ ಹರಕೆ ಇದು.ಅವರು ಕೈಲಾಸವಾಸಿಗಳಾಗಲಿರುವ ಮುನ್ಸೂಚನೆಯನ್ನರಿತದ್ದರಿಂದಲೋ ಏನೋ 1995 ರ ಅಕ್ಟೋಬರ್ ಮೊದಲವಾರದಲ್ಲಿ ಬರೆದ ಪತ್ರದಲ್ಲಿ ನನಗೆ ಹೀಗೆ ಆಶೀರ್ವದಿಸಿದ್ದರು,ಆಜ್ಞಾಪಿಸಿದ್ದರು.ಅಕ್ಟೋಬರ್ 22,1995 ರಂದು ಅವರು ಶಿವೈಕ್ಯರಾದರು.

ನಾನು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಅಂತರಂಗದ ಶಿಷ್ಯನಾಗಿ,ಅವರ ‘ಮಾನಸಪುತ್ರ’ನಾಗಿ ಅವರ ದಿವ್ಯವ್ಯಕ್ತಿತ್ವದ ಸಂಪರ್ಕದಲ್ಲಿದ್ದುದು ಕೇವಲ ಮೂರುವರೆ ವರ್ಷಗಳ ಅಲ್ಪ ಕಾಲ ಮಾತ್ರ.ನಾನು ರಾಯಚೂರಿನ ಎಲ್ ವಿ ಡಿ ಕಾಲೇಜಿನ ಬಿ ಎ ಮೊದಲ ವರ್ಷದಲ್ಲಿದ್ದ 1991 ರಲ್ಲಿ ನನ್ನನ್ನು ತಮ್ಮ ಸನ್ನಿಧಿಗೆ ಕರೆಯಿಸಿಕೊಂಡು ಶಿವಾನುಗ್ರಹವನ್ನು ಕರುಣಿಸಿದ್ದರು.ಅಷ್ಟಾಂಗಯೋಗಮಾರ್ಗದಿಂದ ಯೋಗಸಾಧನೆಯನ್ನು ಮಾಡಲು ಬೋಧಿಸಿದ್ದರು.ಮೂರು ವರ್ಷಗಳ ಕಾಲ ಅವರ ಕಣ್ಣ ಆರೈಕೆಯಲ್ಲಿ ಅತ್ಯುಗ್ರಯೋಗಸಾಧನೆ ಮಾಡಿದ್ದೆ.ಕುಂಡಲಿನೀಯೋಗ ಸೇರಿದಂತೆ ಹಲವು ಯೋಗಗಳಲ್ಲಿ ಪಳಗಿದ್ದೆ.

ನನ್ನ ಬದುಕಿನ ರೂವಾರಿಗಳು ಅವರು.ತಾಯ್ಗರುಳಿನ ತಂದೆಯಾಗಿ ನನ್ನನ್ನು ಪೊರೆದು,ಬೆಳೆಸಿದರು.ಸಾಮಾನ್ಯ ಬಡರೈತನ ಮಗನಾಗಿದ್ದ ನಾನಿಂದು ಈ ಔನ್ನತ್ಯವನ್ನು ಸಾಧಿಸಲು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಕೃಪಾಶೀರ್ವಾದವೇ ಕಾರಣ.ಮೊದಲ ಭೇಟಿಯಲ್ಲೇ ನನ್ನನ್ನು ಪ್ರಭಾವಿಸಿದರು,ತಮ್ಮ ಯೋಗಪ್ರಭೆಯ ದಿವ್ಯಪ್ರಭೆಯ ವ್ಯಕ್ತಿತ್ವದಲ್ಲಿ ನನ್ನನ್ನು ಸೆಳೆದುಕೊಂಡರು ಮಾತ್ರವಲ್ಲ,ನನ್ನ ಬದುಕು- ಭವಿಷ್ಯಗಳ ಬಗ್ಗೆ ಅಂದೇ ನಿರ್ಧರಿಸಿದ್ದರು ತಮ್ಮ ದಿವ್ಯಸಂಕಲ್ಪದಿಂದ.ನನ್ನ ಬದುಕಿನ ಪ್ರತಿ ಘಟನೆಯು ಅಂದು ಅವರು ನುಡಿದಂತೆ ನಡೆಯುತ್ತಿದೆ,ಕೊಂಚವೂ ವ್ಯತ್ಯಾಸವಿಲ್ಲದೆ.ಒಂದೆರಡು ಬಾರಿ ಅವರ ಅಭಯವಾಕ್ಕನ್ನು ಕಡೆಗಣಿಸಿ,ಪೆಟ್ಟುತಿಂದಿದ್ದೇನೆ! ನಾನು ಸರಕಾರಿ ಅಧಿಕಾರಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ.ಆಸೆಯೇನೋ ಇತ್ತು,ಕೈಗೂಡಬೇಕಲ್ಲ ನನ್ನಂತಹವರಿಗೆ.ಆದರೆ ಶ್ರೀಗುರು ಕರುಣೆ ಅದನ್ನು ಸಾಧಿಸಿತು.1991 ರ ಮೊದಲ ಭೇಟಿಯಲ್ಲಿ ‘ ಮಗು,ನೀನು ಏನಾಗಬೇಕೆಂದಿದ್ದಿಯಾ?’ ಎಂದು ಕೇಳಿದ್ದರು.’ ಎಂ ಎ ಮಾಡಿ,ಉಪನ್ಯಾಸಕನಾಗಬೇಕು ಎಂಬುದು ನನ್ನಾಸೆ ಪೂಜ್ಯರೆ’ ಎಂದಿದ್ದೆ.ನನಗಾಗ ಉಪನ್ಯಾಸಕನಾಗುವ ಬಹುದೊಡ್ಡ ಹುಚ್ಚು ಇತ್ತು,ಕನ್ನಡ ಇಲ್ಲವೆ ಅರ್ಥಶಾಸ್ತ್ರ ಉಪನ್ಯಾಸಕನಾಗಬೇಕೆಂದು ಕನಸು ಕಂಡಿದ್ದೆ.ಗುರುದೇವ ನಿಶ್ಚಯಸ್ವರದಿಂದ ,ನಿರ್ಧಾರವಾಕ್ಕಿನಲ್ಲಿ ಹೇಳಿದ್ದರು ‘ ನೀನು ಎಂ ಎ ಮಾಡಿ,ಉಪನ್ಯಾಸಕನಾಗುವುದು ಬೇಡ,ಸರಕಾರಿ ಅಧಿಕಾರಿ ಆಗಿ ಜನಸೇವೆ ಮಾಡು.ನನ್ನ ಆಶೀರ್ವಾದ ಇದೆ ನೀನು ಸರಕಾರಿ ಅಧಿಕಾರಿ ಆಗುತ್ತಿ,ಸಿದ್ಧಿ- ಪ್ರಸಿದ್ಧಿಗಳು ನಿನಗೆ ಒದಗಿ ಬರುತ್ತವೆ”.ಅವರ ಹರಕೆಯಂತೆಯೇ ನಾನು ಸರಕಾರಿ ಅಧಿಕಾರಿ ಆದೆ.ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಮೂರು ತಿಂಗಳಕಾಲ ಇಂಗ್ಲಿಷ್ ಎಂ ಎ ವಿದ್ಯಾರ್ಥಿಯಾಗಿದ್ದೆ.ಕೆ ಎ ಎಸ್ ಪರೀಕ್ಷೆಯ ಪ್ರಕಟಣೆ ಹೊರಟೊಡನೆ ಗುರುಸಂಕಲ್ಪದ ಪ್ರಾಬಲ್ಯವೋ ತಿಳಿಯದು,ಇಂಗ್ಲಿಷ್ ಎಂ ಎ ಗೆ ತಿಲಾಂಜಲಿಯನ್ನಿತ್ತು ಯಾರ ನೆರವೂ ಇಲ್ಲದೆ ಸ್ವಯಂ ಆಗಿ ಕೆ ಎ ಎಸ್ ಪರೀಕ್ಷೆ ಬರೆದೆ.ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದೆ ಮತ್ತು ಶ್ರೀಗುರುಕುಮಾರಸ್ವಾಮಿಯರ ಹರಕೆಯಂತೆ ಅಧಿಕಾರಿಯಾಗಿ ಆಯ್ಕೆಯಾಗಿ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂದು ಸರಕಾರಿ ಸೇವೆಗೆ ಸೇರಿ ಇಂದು ಈ ಎತ್ತರಕ್ಕೆ ಬಂದು,ನಿಂತಿದ್ದೇನೆ.ನಾನು ಕೆ ಎ ಎಸ್ ಪರೀಕ್ಷೆ ಬರೆದದ್ದು 1992 ರಲ್ಲಿ,ಅಧಿಕಾರಿ ಆಗಿ ಆಯ್ಕೆಯಾಗಿದ್ದು 1997 ರಲ್ಲಿ.ಆದರೆ ನಾನು ಸರಕಾರಿ ಅಧಿಕಾರಿ ಆಗಲಿರುವುದನ್ನು 1991 ರಲ್ಲೇ ಹೇಳಿದ್ದರು ಗುರುದೇವ !ವಾಕ್ಸಿದ್ಧಿಯಾದಿ ಸಮಸ್ತಯೋಗಸಿದ್ಧಿಗಳನ್ನೆಲ್ಲ ಕರವಶಮಾಡಿಕೊಂಡಿದ್ದ ಮಾತುಮಂತ್ರವಾದ ಮಹರ್ಷಿಗಳ ಆಶೀರ್ವಾದದ ವಾಕ್ಯ ನನ್ನನ್ನು ಅಧಿಕಾರಿಯನ್ನಾಗಿಸಿತು,ನನ್ನ ಬಾಳನ್ನು ರೂಪಿಸಿತು.

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ನನ್ನನ್ನು ಶಿವಯೋಗಿಯಾಗಿಸಿದಂತೆ ಸೇವಾಯೋಗಿಯನ್ನಾಗಿಸಿದರು.’ದೀನ ದುರ್ಬಲರ ಸೇವೆಗೈ’ ಎಂದಿದ್ದರು.ಅವರ ಆಶೀರ್ವಾದದಂತೆ ಜನಸಾಮಾನ್ಯರಿಗೆ ಅತಿ ಹತ್ತಿರದ ಇಲಾಖೆಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಧಿಕಾರಿಯಾಗಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದೆ ಜನಸಾಮಾನ್ಯರ ಬದುಕುಗಳಿಗೆ ಆಸರೆಯಾಗುತ್ತ,ಬಡವರ ಬದುಕುಗಳಲ್ಲಿ ಭರವಸೆ ತುಂಬುತ್ತ.ಒಬ್ಬ ಮಹಾಗುರು ತನ್ನ ಶಿಷ್ಯನಿಂದ ನಿರೀಕ್ಷಿಸುವ ಅತಿ ದೊಡ್ಡ ನಿರೀಕ್ಷೆ ಎಂದರೆ ಲೋಕಕಲ್ಯಾಣ,ದೀನ ದುರ್ಬಲರ ಸೇವೆ.ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ದೀನದುರ್ಬಲರ ಹಿತಸಾಧನೆಗಾಗಿ ನನ್ನನ್ನು ಸರಕಾರಿ ಅಧಿಕಾರಿಯನ್ನಾಗಿಸಿದರು,ಅವರ ಆಣತಿಯನ್ನು ತಲೆಯಲ್ಲಿ ಹೊತ್ತು ನನ್ನ ಶಕ್ತಿಗೆ ಸಾಧ್ಯವಿದ್ದಷ್ಟು ಕಾರ್ಯರೂಪಕ್ಕೆ ತಂದೆ ಎನ್ನುವ ಸಮಾಧಾನವಿದೆ ನನಗೆ.

ಸಾಮಾನ್ಯ ಗುರುಗಳು ಇಂತಹ ಶಿಷ್ಯರನ್ನು ರೂಪಿಸುವುದಿಲ್ಲ.ತಮ್ಮ ಕೈಕಾಲುಗಳನ್ನು ಒತ್ತಿಕೊಂಡು ತಮ್ಮ ಪಾದದಾಸರೆಯಲ್ಲಿ ಬಿದ್ದಿರಬೇಕು ಎಂದು ನಿರೀಕ್ಷಿಸುವುದು ಸಾಮಾನ್ಯ ಗುರುಗಳ ನಿರೀಕ್ಷೆ.ಆದರೆ ನನ್ನ ಗುರುದೇವ ಮಹಾತಪಸ್ವಿ ನನ್ನಿಂದ ನಿರೀಕ್ಷಿಸಿದ್ದು ದೀನ ದುರ್ಬಲರ ಕಲ್ಯಾಣವನ್ನು,ಸೇವಾಯೋಗವನ್ನು.ಬಡವರು,ದುರ್ಬಲರು ಮತ್ತು ನೊಂದವರ ಬಗೆಗಿನ ಗುರುದೇವನ ಕಾಳಜಿ ಕಳಕಳಿಗಳೇ ನನ್ನನ್ನು ಅಧಿಕಾರಿಯನ್ನಾಗಿ ರೂಪಿಸಿದವು.ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ದೀನಬಂಧು ವ್ಯಕ್ತಿತ್ವಕ್ಕೆ ನಾನೊಂದು ಆಕಾರವಾದೆನಷ್ಟೆ; ಸಾಕಾರಗೊಂಡಿದ್ದು ಅವರ ಲೋಕಕಲ್ಯಾಣದ ಸಂಕಲ್ಪ.

ಮೂರುವರೆ ವರ್ಷಗಳ ಅಲ್ಪ ಕಾಲದಲ್ಲಿ ನಾನು ಅವರೊಂದಿಗೆ ಐವತ್ತಕ್ಕೂ ಹೆಚ್ಚು ಪತ್ರವ್ಯವಹಾರ ಮಾಡಿದ್ದೆ.ನನ್ನೆಲ್ಲ ಸಂದೇಹ,ಸಮಸ್ಯೆಗಳಿಗೆ ತಾಯಿಕರುಳಿನಿಂದ ಉತ್ತರಿಸುತ್ತಿದ್ದರು.ನಾನು ಧಾರವಾಡದ ತಪೋವನಕ್ಕೆ ಹೋದಾಗ ಸಾವಿರಾರು ಜನದರ್ಶನಾಕಾಂಕ್ಷಿಗಳಿದ್ದರೂ ನನ್ನನ್ನು ತಮ್ಮ ಬಳಿ ಕುಳ್ಳಿರಿಸಿಕೊಂಡು ಯೋಗಕ್ಷೇಮ ವಿಚಾರಿಸುತ್ತಿದ್ದರು.ಹಣ್ಣು- ಸಕ್ಕರೆಗಳನ್ನಿತ್ತು ತಿನ್ನು ಎನ್ನುತ್ತಿದ್ದರು.’ ಬಾ ಮಗು’ ಎಂದೇ ಕರೆಯುತ್ತಿದ್ದರು.ತಪೋವನದ ಕಾರ್ಯದರ್ಶಿಗಳಾಗಿದ್ದ ಶ್ರೀ ಶಿ. ಚ ಅನಾಡ ಅವರು ನನ್ನ ಮತ್ತು ಗುರುದೇವನ ಪತ್ರವ್ಯವಹಾರಗಳನ್ನು ಪ್ರತಿ ಮಾಡಿ ಇಟ್ಟುಕೊಂಡಿದ್ದರು’ ಇವು ಸಾಮಾನ್ಯ ಪತ್ರೋತ್ತರಗಳಲ್ಲ; ಮುಂದೆ ತಪೋವನದಿಂದ ಪ್ರಕಟಿಸುತ್ತೇವೆ’ ಎಂದಿದ್ದರು.ಮುಂದೇನಾಯಿತೋ ನಾನರಿಯೆ.ಆದರೆ ಒಬ್ಬ ಮಹಾತಪಸ್ವಿ,ಮಹಾನ್ ದಾರ್ಶನಿಕ,ಮಹಾನ್ ಸಂತ ಲೋಕಕಲ್ಯಾಣದ ಮಹಾಫಲವನ್ನು ಬಿತ್ತಿ ಬೆಳೆದರೆಂಬುದೇ ವಿಶೇಷ.ಗುರುದೇವ ಹರಸಿದಂತೆ ಎಲ್ಲವೂ ನಡೆದಿದೆ ನನ್ನ ಬಾಳಿನಲ್ಲಿ.ನಾನು ಕರೆದಾಗ ಬಂದಿದ್ದಾರೆ,ಈಗಲೂ ಬರುತ್ತಾರೆ.ಬಹುಶಃ ನನ್ನಷ್ಟು ಸಂಕಷ್ಟಗಳ ಸರಮಾಲೆ ಎದುರಿಸಿದ ಸರಕಾರಿ ಅಧಿಕಾರಿ ಮತ್ತೊಬ್ಬರಿರಲಿಕ್ಕಿಲ್ಲ ಸತ್ತ್ವ ಮತ್ತು ತತ್ತ್ವನಿಷ್ಠೆಗಳಿಂದಾಗಿ.ಎಂತೆಂತಹ ಘೋರ ವಿಪತ್ತುಗಳಲ್ಲಿಯೂ ನನ್ನ ಕೂದಲುಕೊಂಕದಂತೆ ಕಾಯ್ದು ಮುನ್ನಡೆಸಿದ್ದಾರೆ ತಾಯ್ಗರುಳಿನ ತಂದೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು.ನನ್ನ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಅವರ ಪತ್ರ ಮತ್ತು ಉಪದೇಶವನ್ನು ಪ್ರಸ್ತಾಪಿಸಿ ಗುರುದೇವನ ಲೋಕಕಾರುಣ್ಯಗುಣವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ ಇಲ್ಲಿ.

ಅವರ ಕೊನೆಯ ಪತ್ರದ ಎರಡನೆಯ ಪರಿಚ್ಛೇದದ ಕೊನೆಯ ವಾಕ್ಯ ಈಗಲೂ ನನ್ನ ಕಣ್ಣುಗಳಲ್ಲಿ ನೀರೂರಿಸುತ್ತದೆ.ನಿನ್ನನ್ನು ಕರೆದು,ಉಪದೇಶಿಸಲು ಇನ್ನು ಮುಂದೆ ನಾನಿರುವುದಿಲ್ಲ ಎಂಬುದನ್ನು ಸೂಚಿಸಲೋ ಏನೋ” ನಿನ್ನ ನಂಬಿಗೆಯೇ ನಿನ್ನ ಬಾಳಿನ ಬೆಳಕು” ಎಂದಿದ್ದರು.ಅವರು ಭೌತಿಕವಾಗಿ ನನ್ನೊಂದಿಗೆ ಇಲ್ಲದೆ ಇದ್ದರೂ ದಿವ್ಯಕಾಯರಾಗಿ,ದಿವ್ಯಾತ್ಮರಾಗಿ ಬಂದು ಉದ್ಧರಿಸುತ್ತಿದ್ದಾರೆ ಕರೆದಾಗಲೆಲ್ಲ.ಅವರಲ್ಲಿನ ನನ್ನ ಅಚಲ ನಂಬಿಗೆಯೇ ನನ್ನ ಶ್ರೀರಕ್ಷೆಯಾಗಿ ಬೆಳಗುತ್ತಿದೆ ನನ್ನ ಬಾಳನ್ನು.ತಾರುಣ್ಯದ ತಮಂಧದಲ್ಲಿ ಪಶುವಿನಂತೆ ಬಿದ್ದು ಒದ್ದಾಡುತ್ತಿದ್ದ ನನ್ನನ್ನು ಬಳಿಕರೆದು ಮಗುವೆಂದು ಮುದ್ದಾಡಿ ಉದ್ಧರಿಸಿದ ಆ ನನ್ನ ಗುರುದೇವ ಮಹಾತಪಸ್ವಿಶ್ರೀಕುಮಾರಸ್ವಾಮಿಗಳ ಭವ್ಯವೂ ದಿವ್ಯವೂ ಆದ ಮಹೌದಾರ್ಯದ ವ್ಯಕ್ತಿತ್ವವನ್ನು ಬಣ್ಣಿಸಲು ಸರಿಯಾದ ಶಬ್ದಗಳಿಲ್ಲ ನನ್ನಲ್ಲಿ.ಶಬ್ದ ಸತ್ತಿದೆ,ಭಾಷೆ ಸೋತಿದೆ.ಭಾವ ಒಂದೇ ಅರಿತು ಬೆರೆತಿದೆ ಆ ಮಹಾಬೆಳಗಿನೊಳು. ಭುವನದ ಭಾಗ್ಯವೆಂಬಂತೆ ಸಹಸ್ರಮಾನಗಳಿಗೊಮ್ಮೆ ಇಳಿದು ಬರುವ ಪ್ರಭುಕಾರುಣ್ಯದಂತೆ ಅವತರಿಸಿ,ಇಳೆಯ ಬೆಳಗಿದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳೆಂಬ ಮಹಾಬೆಳಗು ನನ್ನ ಗುರುವಾಗಿದ್ದರು ಎಂಬುದು ನನ್ನ ಸಾರ್ಥಕ್ಯವಲ್ಲವೆ?

About The Author