ಶಹಾಪುರ: ನಗರದ ತೋಟಗೇರಿ, ತುಳೇರ, ಮಮದಾಪುರ, ಕೋಲ್ಕರ್, ಗಂಗಾನಗರ ಹಾಗೂ ಮುಲ್ಲಾ ಭಗವಾನ್ ಓಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರ ಬಹುದಿನಗಳ ಸಮಸ್ಯೆಯಾದ ಶೌಚಾಲಯದ ಕೊರತೆಗೆ ಕೊನೆಗೂ ಪರಿಹಾರ ದೊರೆಯುವ ನಿರೀಕ್ಷೆ ಮೂಡಿದೆ.
ನಗರಸಭೆ ವತಿಯಿಂದ 2014-15ನೇ ಸಾಲಿನಲ್ಲಿ ಆರಂಭಗೊಂಡು, 2016ರಲ್ಲಿ ಸುಮಾರು ₹7 ಲಕ್ಷ ವೆಚ್ಚದಲ್ಲಿ ಕಟ್ಟಡ ಪೂರ್ಣಗೊಂಡಿದ್ದರೂ, ಇದುವರೆಗೆ ಸಾರ್ವಜನಿಕರ ಬಳಕೆಗೆ ಶೌಚಾಲಯ ಲಭ್ಯವಾಗಿರಲಿಲ್ಲ. ಇದರಿಂದ ಮಹಿಳೆಯರು ಸೇರಿದಂತೆ ಸ್ಥಳೀಯರು ಬಯಲು ಶೌಚಾಲಯವನ್ನೇ ಅವಲಂಬಿಸುವಂತಾಗಿತ್ತು. ಸುಮಾರು 40 ವರ್ಷಗಳಿಂದ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಸೌಲಭ್ಯ ಇರಲಿಲ್ಲ.
ಈ ಕುರಿತು ಸೆಕ್ಯುಲರ್ ಎಕ್ಸ್‌ಪ್ರೆಸ್ ದಿನಪತ್ರಿಕೆ ವರದಿ ಪ್ರಕಟಿಸಿ, ಸಾರ್ವಜನಿಕರ ಸಮಸ್ಯೆ ಹಾಗೂ ಬಳಕೆಯಾಗದೆ ಪಾಳು ಬಿದ್ದಿರುವ ಶೌಚಾಲಯದ ಸ್ಥಿತಿಯನ್ನು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು.
ವರದಿಗೆ ಸ್ಪಂದಿಸಿದ ಶಾಸಕರು.

ವರದಿಗೆ ಸ್ಪಂದಿಸಿದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ನಗರಸಭೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಂಡು, ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.
ಶಾಸಕರ ಸೂಚನೆಯ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೌಚಾಲಯಕ್ಕೆ ನೀರಿನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
“ಕಳೆದ ಹತ್ತು ವರ್ಷಗಳಿಂದ ಕಟ್ಟಡವಿದ್ದರೂ ಬಳಕೆಯಾಗದೆ ನೆನೆಗುದಿಗೆ ಬಿದ್ದಿದ್ದ ಶೌಚಾಲಯವು ಶಾಸಕರ ಸೂಚನೆಯ ಮೇರೆಗೆ ಇನ್ನೆರಡು ದಿನಗಳಲ್ಲಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಸಿದ್ಧಪಡಿಸಲಾಗುತ್ತಿದೆ.”
ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಗಮನಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ದರ್ಶನಾಪುರ ಅವರು ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಪತ್ರಿಕಾ ವರದಿಗೆ ಸ್ಪಂದಿಸಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಬಹುಕಾಲದಿಂದ ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದ ಈ ಭಾಗದ ಜನರಿಗೆ ಇದೀಗ ನೆಮ್ಮದಿಯ ನಿರೀಕ್ಷೆ ಮೂಡಿದೆ.
“ನೀರು, ಬಾಗಿಲು, ನಲ್ಲಿಗಳ ವ್ಯವಸ್ಥೆ”
ಈ ಕುರಿತು ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ ಮಾತನಾಡಿ, ಶೌಚಾಲಯಕ್ಕೆ ಸದ್ಯ ನೀರಿನ ಸೌಲಭ್ಯವಿಲ್ಲ. ತಕ್ಷಣ ಪೈಪ್‌ಲೈನ್ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಬಾಗಿಲುಗಳು, ನಲ್ಲಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇನ್ನೆರಡು ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಶೌಚಾಲಯವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.