(ಬಸವರಾಜ ಕರೇಗಾರ)
ಶಹಾಪುರ : ಮಾಜಿ ಮುಖ್ಯಮಂತ್ರಿ ಹಾಗೂ ಕುರುಬ ಸಮುದಾಯದ ಪ್ರಮುಖ ನಾಯಕ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಂಗಳವಾರ ಹಾಲುಮತ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಹಪುರ ಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷಭೇದ ಮರೆತು ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಒಂದಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಹಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಕುರುಬ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಪ್ರತಿಮೆ ತೆರವು ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಪೊಲೀಸರು ತಡೆಯಲು ಹರಸಾಹಸಪಟ್ಟರು.ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಮೆ ಮರುಸ್ಥಾಪಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ ಪ್ರತಿಭಟನಾಕಾರರು, ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಗುಡುಗಿದರು.
ಕುರುಬ ಸಮಾಜವನ್ನು ಬಿಟ್ಟು ರಾಜಕೀಯ ಮಾಡಿ ನೋಡಲಿ.ನಮ್ಮ ತಾಕತ್ತು ಏನೆಂಬುದನ್ನು ತೋರಿಸುತ್ತೇವೆ.ಟಗರು ಸುಮ್ಮನಿದೆ ಎಂದರೆ ಸರ್ಕಾರವೇ ಮೇಲೆ–ಕೆಳಗೆ ಆಗಬಹುದು.ಆ ತಾಕತ್ತು ಸಿದ್ದರಾಮಯ್ಯನವರಿಗಿದೆ ಎಂಬುದು ಕೆಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಿಗೆ ಗೊತ್ತಿಲ್ಲ ಅನಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯಕ್ಕೆ ಕೆಟ್ಟದಾದರೆ ಸುಮ್ಮನಿರುವುದಿಲ್ಲ.ಪ್ರತಿಮೆ ಮರುಸ್ಥಾಪನೆ ಮಾಡದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು.2028ರ ಚುನಾವಣೆಯಲ್ಲಿ ಜನರ ತೀರ್ಪಿನ ಮೂಲಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಮೆ ತೆರವು ಪ್ರಕರಣ ಇದೀಗ ಪಕ್ಷದ ಗಡಿಗಳನ್ನು ಮೀರಿ ಸಮುದಾಯದ ವಿಚಾರವಾಗಿ ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ರಾಜಕೀಯ ಪರಿಣಾಮ ತೀವ್ರವಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
(2028ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಹಾಲುಮತಸ್ಥರು)
ಸಿದ್ದರಾಮಯ್ಯನವರು ರಾಜಕೀಯವಾಗಿ ಇಂದು ಏನಾಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು. 2028ರ ಚುನಾವಣೆಯಲ್ಲಿ ನಮ್ಮ ತಾಕತ್ತು ಏನೆಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿಸುತ್ತೇವೆ.ನಾವು ಒಗ್ಗಟ್ಟಾದರೆ ಯಾರನ್ನೂ ಬಿಡುವುದಿಲ್ಲ.ಸಮುದಾಯದ ವಿಚಾರದಲ್ಲಿ ರಾಜಕೀಯ ಭೇದ ಮರೆತು ಒಂದಾಗಿದ್ದೇವೆ.ಹಾಲುಮತ ಸಮಾಜದ ಶಕ್ತಿಯನ್ನು ಕಡೆಗಣಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.