ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ; ಸಿಬ್ಬಂದಿ ವರ್ತನೆಗೆ ಸಾರ್ವಜನಿಕರ ಆಕ್ರೋಶ

ಶಹಾಪುರ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಪಡೆಯಲು ಬರುವ ರೋಗಿಗಳು ನಿತ್ಯವೂ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಆಸ್ಪತ್ರೆಗೆ ನಿಗದಿತ ಸಮಯಕ್ಕೆ ವೈದ್ಯರು ಆಗಮಿಸದೆ ಇರುವುದರಿಂದ ಬೆಳಗ್ಗಿನಿಂದಲೇ ರೋಗಿಗಳು ವೈದ್ಯರಿಗಾಗಿ ಸಾಲುಗಟ್ಟಿ ಕಾಯುವಂತಾಗಿದೆ. ವೈದ್ಯರನ್ನು ವಿಚಾರಿಸಿದರೆ, ಕೆಲ ಸಿಬ್ಬಂದಿ ಬೇರೆ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರೆ, ವೈದ್ಯರಿಗಾಗಿ ಕಾಯುತ್ತಿರುವ ರೋಗಿಗಳು ವೈದ್ಯರನ್ನು ಸಂಪರ್ಕಿಸಿದರೆ ಇನ್ನೈದು ನಿಮಿಷ ತಡೆಯಿರಿ ಎನ್ನುತ್ತಿದ್ದಾರೆ..

ವೈದ್ಯಕೀಯ ಸೇವೆ ನೀಡಬೇಕಾದ ಸಿಬ್ಬಂದಿಯೇ ವೈದ್ಯರಂತೆ ವರ್ತಿಸಿ ರೋಗಿಗಳಿಗೆ ಸೂಚನೆ ನೀಡುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಕೆಲ ಸಿಬ್ಬಂದಿಯ ಅತಿರೇಕದ ವರ್ತನೆ ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಕೆಲ ಸಿಬ್ಬಂದಿ ತಮಗೆ ಅನುಕೂಲವಾದ ಸಮಯಕ್ಕೆ ಆಗಮಿಸಿ, ಕರ್ತವ್ಯದ ಸಮಯದಲ್ಲಿಯೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳಿವೆ. ಇದರಿಂದ ದೂರದ ಗ್ರಾಮಗಳಿಂದ ಚಿಕಿತ್ಸೆಗಾಗಿ ಬರುವ ಬಡವರು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಗಂಟೆಗಟ್ಟಲೆ ಕಾಯುವಂತಾಗಿದೆ. ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೇಲೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಬಡವರ ಪಾಲಿಗೆ ಆಶಾಕಿರಣವಾಗಬೇಕು. ಆದರೆ ಇಲ್ಲಿ ವೈದ್ಯರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಸಿಬ್ಬಂದಿಯ ವರ್ತನೆಯಿಂದ ರೋಗಿಗಳು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಂಡು, ರೋಗಿಗಳಿಗೆ ಸಮರ್ಪಕ ಹಾಗೂ ಗೌರವಯುತ ಸೇವೆ ದೊರೆಯುವಂತೆ ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಗಮನಹರಿಸಬೇಕಾಗಿದೆ.


“ಸ್ಕ್ಯಾನಿಂಗ್‌ ಸೆಂಟರ್‌ಗೆ ಹೋದರೆ ಬೆಳಗ್ಗೆ 10 ಗಂಟೆಯಾದರೂ ವೈದ್ಯರು ಇರುವುದಿಲ್ಲ. ಎಕ್ಸ್‌ರೇ ಬಗ್ಗೆ ವಿಚಾರಿಸಿದರೆ ವೈದ್ಯರು ಬಂದಿಲ್ಲ, ಎಲುಬಿನ ವೈದ್ಯರನ್ನು ಭೇಟಿ ಮಾಡಿ ಎಂದು ಸಿಬ್ಬಂದಿಗಳು ಕಳುಹಿಸುತ್ತಾರೆ. ವೈದ್ಯರು ಬಂದ ಬಳಿಕ ವಿಚಾರಿಸಿದರೆ ‘ಐದು ನಿಮಿಷ ತಡೆಯಿರಿ’ ಎಂದು ಕಾಯಿಸಲಾಗುತ್ತದೆ. ಇದು ಖಾಸಗಿ ಆಸ್ಪತ್ರೆಯಲ್ಲ, ಬಡವರು ತಮ್ಮ ದಿನಗೂಲಿ ಕೆಲಸವನ್ನೇ ಬಿಟ್ಟು ಚಿಕಿತ್ಸೆಗಾಗಿ ಬರುವ ಸರ್ಕಾರಿ ಆಸ್ಪತ್ರೆ. ರೋಗಿಗಳ ಸಂಕಷ್ಟ ಅರ್ಥಮಾಡಿಕೊಂಡು ಸೇವೆ ನೀಡಬೇಕಾದ ವೈದ್ಯರು, ಅಸಭ್ಯವಾಗಿ ವರ್ತಿಸುವ ಸಿಬ್ಬಂದಿಯನ್ನೇ ಬೆಂಬಲಿಸುತ್ತಿರುವುದು ದುರಂತ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಬೇಕು.”

— ಬಸವರಾಜ ಬಸವಂತಪುರ

Leave a Reply

Your email address will not be published. Required fields are marked *