ಶಿರವಾಳ ವಲಯ ಸಾಹಿತ್ಯ ಪರಿಷತ್ತಿನಿಂದ ಆದರ್ಶ ಶಿಕ್ಷಕರಿಗೆ ಸನ್ಮಾನ : ಸಂಪತ್ತಿಗಿಂತ ಸಂಸ್ಕಾರವೇ ದೊಡ್ಡದು: ತ್ರಿಶೂಲಪ್ಪ ಶರಣರು.

ಶಹಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಉರುಸಗುಂಡಗಿ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆದರ್ಶ ಶಿಕ್ಷಕರ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮುಡಬೂಳದ ಪೂಜ್ಯ ಸದ್ಗುರು ರಂಗಲಿಂಗೇಶ್ವರ ಮಠದ ತ್ರಿಶೂಲಪ್ಪ ಶರಣರು ಉದ್ಘಾಟಿಸಿ ಮಾತನಾಡಿ, ತಂದೆ-ತಾಯಿ ನಮ್ಮ ಮೊದಲ ಗುರುಗಳು, ನಂತರ ಶಿಕ್ಷಕರು. ಜೀವನದಲ್ಲಿ ಸಂಪತ್ತು ದೊಡ್ಡದಲ್ಲ, ಸಂಸ್ಕಾರವೇ ದೊಡ್ಡದು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಶಿಕ್ಷಕರು ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉಪನ್ಯಾಸ ನೀಡಿದ ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವೆಂಕಟೇಶ ಪಾಟೀಲ ಮಾತನಾಡಿ, ದೇಶ ಕಂಡ ಮಹಾನ್ ತತ್ವಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿ, ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ, ಶಿಕ್ಷಣದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಶ್ರಮಿಸಿದರು ಎಂದರು.
ಗುರುಗಳು ನೂರು ತಪ್ಪುಗಳನ್ನು ಕ್ಷಮಿಸುವ ದೊಡ್ಡ ಮನಸ್ಸು ಹೊಂದಿರುತ್ತಾರೆ. ಮಕ್ಕಳು ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿ ಜ್ಞಾನಿಗಳಾಗಿ, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರನಾಥ ಹೊಸಮನಿ ಮಾತನಾಡಿ, ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ. ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕ್ರಿಯಾಶೀಲವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಮಕ್ಕಳು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಾದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದರು.
ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಮಾತನಾಡಿ, ಕಳೆದ 11 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ, ಪ್ರತಿ ವರ್ಷ ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದುವರೆಗೆ 64 ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಗುರುತಿಸದಿದ್ದರೂ ಸತತ 10 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ ಎಂದು ತಿಳಿಸಿದರು.
ಅಲ್ಲದೆ, ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ನವೆಂಬರ್ ತಿಂಗಳಲ್ಲಿ ಗೌರವಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಪರಿಷತ್ತಿನ ಗೌರವಾಧ್ಯಕ್ಷ ನಾಗನಗೌಡ ಹಿರೇಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಅನುಪಮ, ದೇವಪುತ್ರ ಕಟ್ಟಿ, ಶಾರದಾ ಬಿರಾದಾರ ಹಾಗೂ ಚಂದಪ್ಪ ಬಲ್ಲಿದವ ಅವರನ್ನು ಆದರ್ಶ ಶಿಕ್ಷಕರೆಂದು ಗುರುತಿಸಿ ಸನ್ಮಾನಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಕರೇಗಾರ ಅವರನ್ನು ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಮಾನಪ್ಪ ಹೂಗಾರ್, ಸಿಆರ್‌ಪಿ ಮಲ್ಲಿಕಾರ್ಜುನ, ರಾಘವೇಂದ್ರ ಹಾರಣಗೇರಾ, ತಾಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಬಣ್ಣ ಪುರ್ಲೆ, ಮಹಾಲಿಂಗಪ್ಪ ನಾಯ್ಕಲ್, ಚಂದ್ರಶೇಖರ ಉಕ್ಕೇರಿ, ಭೀಮಣ್ಣ ಬೇವಿನಹಳ್ಳಿ, ಚಂದ್ರಶೇಖರ ಮುಖ್ಯ ಗುರಿಗಳು ದೇವೇಂದ್ರಪ್ಪ ವಿಶ್ವಕರ್ಮ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಶ್ರೀಮತಿ ಜುಬೇದ ಬೇಗಂ ಸ್ವಾಗತಿಸಿದರು. ರೇಣುಕಾ ಆರೋಳ್ಕರ್ ನಿರೂಪಿಸಿದರು. ಮಾರ್ತಾಂಡಪ್ಪ ವಂದಿಸಿದರು.

Leave a Reply

Your email address will not be published. Required fields are marked *