ಶಹಾಪುರ: ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಶಹಾಪುರ ಸಿಟಿ, ಲಿಟಲ್ ವಿಂಗ್ಸ್ ಪ್ರೀ-ಸ್ಕೂಲ್, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ನಮ್ಮ ಕ್ಲಿನಿಕ್ ಹಳ್ಳಿಸಗರ ಸಹಯೋಗದಲ್ಲಿ 41ನೇ ನೇತ್ರದಾನ ಪಾಕ್ಷಿಕದ ಅಂಗವಾಗಿ ಸೆ.11ರಂದು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಶಹಾಪುರ ವೈದ್ಯಾಧಿಕಾರಿ ಡಾ. ಅಭಿಷೇಕ ರೆಡ್ಡಿ ಶಿಬಿರ ಉದ್ಘಾಟಿಸಿದರು. ಒಟ್ಟು 97 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, 43 ಮಂದಿಗೆ ಉಚಿತ ಕನ್ನಡಕ ವಿತರಿಸಲು ಆಯ್ಕೆ ಮಾಡಲಾಗಿದೆ. 33 ಮಂದಿಯಲ್ಲಿ ಕಣ್ಣಿನ ಪೊರೆ ಪತ್ತೆಯಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುವುದು ಎಂದು ಆಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಿಬಣ್ಣ ಎ. ಪುರ್ಲೆ ಯಾದವ್ ನೇತ್ರದಾನಕ್ಕೆ ಸಂಕಲ್ಪ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.