ಶರಣರ ಸಾಮಾಜಿಕ ಕ್ರಾಂತಿ ವಿಶ್ವಕ್ಕೆ ಮಾದರಿ: ಪ್ರೊ. ದಯಾನಂದ ಅಗಸರ

ಶಹಾಪುರ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ಕಾಯಕ ಸಮುದಾಯಗಳನ್ನು ಒಂದೇ ವೇದಿಕೆಗೆ ತಂದ ಬಸವಣ್ಣನವರು ಎಲ್ಲ ಕಾಯಕಗಳು ಸಮಾನ ಹಾಗೂ ಸಮಾಜಕ್ಕೆ ಉಪಯುಕ್ತವೆಂಬ ಕಾಯಕ ತತ್ವದ ಜೀವಪರ ಸಂದೇಶವನ್ನು ಸಾರಿದರು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಮಡಿವಾಳ ಮಾಚಿದೇವ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ವಚನ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆಗಳು’ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ಕಲ್ಯಾಣ ಕ್ರಾಂತಿಯ ಸಂದಿಗ್ಧ ಸಂದರ್ಭದಲ್ಲಿ ವೀರಶರಣ ಮಡಿವಾಳ ಮಾಚಿದೇವರು ಶರಣರ ವಚನಗಳ ಕಟ್ಟುಗಳನ್ನು ಸಂರಕ್ಷಿಸುವ ಮಹತ್ವದ ಜವಾಬ್ದಾರಿ ವಹಿಸಿದ್ದರು ಎಂದರು.

ಮಾಚಿದೇವರು ವಚನಗಳನ್ನು ಕೇವಲ ಸಂರಕ್ಷಿಸುವ ಕಾರ್ಯ ಮಾಡದೇ, ಅವುಗಳಲ್ಲಿರುವ ಮನುಷ್ಯಪರ ಹಾಗೂ ಮಾನವೀಯ ಚಿಂತನೆಗಳನ್ನು ಸಮಾಜಕ್ಕೆ ಪ್ರಚುರಪಡಿಸಿದರು. ಈ ಮೂಲಕ ಶರಣ ಸಂಸ್ಕೃತಿ ಮತ್ತು ವಚನ ಪರಂಪರೆಗೆ ಮಹತ್ತರ ಕೊಡುಗೆ ನೀಡಿದ ಶ್ರೇಷ್ಠ ಶರಣರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರ ಸಾಮಾಜಿಕ ಸಮಾನತೆಯ ಭದ್ರ ಬುನಾದಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಆಧಾರವಾಗಿಸಿಕೊಂಡು ಮಡಿವಾಳ ಸಮುದಾಯ ಸೇರಿದಂತೆ ಎಲ್ಲ ತಳ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದು ಅಗಸರ ಕರೆ ನೀಡಿದರು. ಇದೇ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ರಚನಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ, ಬಸವಾದಿ ಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಮಹತ್ವದ ಪಾತ್ರ ವಹಿಸಿದ್ದು, ತಮ್ಮ ವಚನಗಳ ಮೂಲಕ ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧತೆಯ ಸಂದೇಶ ಸಾರಿದ್ದಾರೆ ಎಂದರು. ಬಸವಣ್ಣ, ಚೆನ್ನಬಸವಣ್ಣ ಹಾಗೂ ಸೊಲ್ಲಾಪುರದ ಸಿದ್ದರಾಮೇಶ್ವರ ಸೇರಿದಂತೆ ಹಲವು ಶರಣರು ತಮ್ಮ ವಚನಗಳಲ್ಲಿ ಮಾಚಿದೇವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ ಎಂದು ತಿಳಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಅವರು ಮಡಿವಾಳ ಮಾಚಿದೇವರ ಬದುಕು, ಚಿಂತನೆಗಳು ಹಾಗೂ ಮಡಿವಾಳ ಸಮುದಾಯದ ಅಭಿವೃದ್ಧಿ ಕುರಿತು ಮಾತನಾಡಿದರು. ನಗರಸಭೆಯ ಎಇಇ ಅಧಿಕಾರಿ ನಾನಾಸಾಹೇಬ ಮಡಿವಾಳ ಅವರು ಮಾಚಿದೇವರ ವಚನಗಳಲ್ಲಿನ ಸಾಮಾಜಿಕ ಕಾಳಜಿಯನ್ನು ವಿವರಿಸಿದರು.

ಮಡಿವಾಳೇಶ್ವರ ಮಠದ ಪೂಜ್ಯ ಶೇಖಪ್ಪ ಸಾಧು ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ಹಾಗೂ ವಿಶೇಷ ಉಪನ್ಯಾಸಗಳ ಮೂಲಕ ಜನರಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಚಿಂತನೆ ಬೆಳೆಸುತ್ತಿದೆ ಎಂದರು.

ಶಿಕ್ಷಕಿ ಕಾವೇರಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ದೇವೇಂದ್ರಪ್ಪ ಮಡಿವಾಳಕರ್ ಆಶಯ ನುಡಿಗಳನ್ನಾಡಿದರು. ಯಾದಗಿರಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಡಿವಾಳಪ್ಪ ಬಿಜಾಸಪೂರ, ತಾಲೂಕು ಅಧ್ಯಕ್ಷ ಭೀಮರಾಯ ಗುತ್ತಿಪೇಟೆ ಸೇರಿದಂತೆ ವಿವಿಧ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕು. ಅಕ್ಷಯ ವಚನ ವಾಚನದ ಮೂಲಕ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

 

Leave a Reply

Your email address will not be published. Required fields are marked *