
ಯಾದಗಿರಿ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕುರುಬ ಸಮಾಜದ ಕುರಿಗಾಹಿಗಳು, ರೈತರು, ಕಾರ್ಮಿಕರು ಹಾಗೂ ಯುವಕರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಟ್ಟದ ಕುರುಬರ ಸಂಘ ಆರೋಪಿಸಿದ್ದು, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಇಂದು ಯಾದಗಿರಿ ನಗರದಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುರುಬ ಸಂಘದ ಪದಾಧಿಕಾರಿಗಳು ಕುರುಬರು ಹಾಗೂ ಕುರಿಗಾಹಿಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಿದರು.
ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದಲ್ಲಿ 17 ಮಂದಿ ಕುರಿಗಾಹಿಗಳ ವಿರುದ್ಧ ಇತ್ತೀಚೆಗೆ ದಾಖಲಾಗಿರುವ ಪ್ರಕರಣ ಹಾಗೂ ಕಿಲ್ಲನಕೇರಾ ಗ್ರಾಮದಲ್ಲಿ ದಾಖಲಾಗಿರುವ ಅಟ್ರಾಸಿಟಿ ಪ್ರಕರಣಗಳಾಗಿವೆ. ವೈಯಕ್ತಿಕ ಜಗಳ, ಕುರಿ ಕಳ್ಳತನ ಹಾಗೂ ಆಸ್ತಿ ವಿವಾದಗಳಂತಹ ಪ್ರಕರಣಗಳಲ್ಲಿಯೂ ಅಟ್ರಾಸಿಟಿ ಕಾಯ್ದೆಯನ್ನು ಅನಗತ್ಯವಾಗಿ ಬಳಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಅಟ್ರಾಸಿಟಿ ಕಾಯ್ದೆ ಶೋಷಿತ ವರ್ಗಗಳ ರಕ್ಷಣೆಗೆ ರೂಪಿಸಲಾಗಿದ್ದು, ಅದರ ದುರ್ಬಳಕೆಯಿಂದ ಮುಗ್ಧರಿಗೆ ಅನ್ಯಾಯವಾಗಬಾರದು.ಸುಳ್ಳು ಪ್ರಕರಣಗಳ ಮೂಲಕ ಭಯದ ವಾತಾವರಣ ಸೃಷ್ಟಿಸಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ದಾಖಲಾಗಿರುವ ಅಟ್ರಾಸಿಟಿ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸುಳ್ಳು ದೂರು ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕುರಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದರು.
ಈ ಸಂದರ್ಭದಲ್ಲಿ ಕುರುಬರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಾಲ್, ರಾಜ್ಯ ಸಂಘಟನಾ ಸಂಚಾಲಕ ನಾಗಪ್ಪಗೌಡ ಶಖಾಪುರ, ಶಹಾಪುರ ತಾಲ್ಲೂಕು ಅಧ್ಯಕ್ಷ ರೇವಣಸಿದ್ದಪ್ಪ ಗುಂಡಾಪೂರ ಹಾಗೂ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಗಿರೀಶ ಕವಡೆ, ಸಿದ್ದನಗೌಡ ಪಾಟೀಲ, ನಿಂಗನಗೌಡ ಮಾಲಿ ಪಾಟೀಲ ಬಿರಾದರ, ಶಹಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.
“ಅಟ್ರಾಸಿಟಿ ಕಾಯ್ದೆ ಶೋಷಿತರಿಗೆ ರಕ್ಷಣೆ ನೀಡುವ ಮಹತ್ವದ ಕಾನೂನಾಗಿದೆ. ಆದರೆ ಯಾವುದೇ ತಪ್ಪು ಮಾಡದ ಮುಗ್ಧ ಕುರಿಗಾಹಿಗಳು, ರೈತರು ಹಾಗೂ ಯುವಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಭಯದ ವಾತಾವರಣ ಸೃಷ್ಟಿಸುವುದು ಖಂಡನೀಯ. ನೈಜ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕು; ಅದೇ ರೀತಿ ಕಾಯ್ದೆಯ ದುರ್ಬಳಕೆಯಿಂದ ಮುಗ್ಧರಿಗೆ ಅನ್ಯಾಯವಾಗದಂತೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸುಳ್ಳು ದೂರು ನೀಡಿ ಕಿರುಕುಳ ನೀಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು.”

ರೇವಣಸಿದ್ದಪ್ಪ ಗುಂಡಾಪುರ.
ಅಧ್ಯಕ್ಷರು.
ತಾಲೂಕು ಕುರುಬರ ಸಂಘ,ಶಹಪುರ