ಶಹಾಪೂರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ ತಿಳಿಸಿದ್ದಾರೆ.
ಆ.22ರಂದು ಕಲಬುರಗಿ ನಗರದ ಸೇಡಂ ರಸ್ತೆಯ ಹಳೆ ಆರ್‌ಟಿಒ ಕಚೇರಿ ಸಮೀಪದ ಎಂಆರ್‌ಎಂಸಿ ಸಾಕ್ಸ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಆಯ್ಕೆಯಾದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ ₹2 ಸಾವಿರ ನಗದು ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇದಕ್ಕಾಗಿ ಸುಮಾರು ₹12 ಲಕ್ಷ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸಂಘದ ವತಿಯಿಂದ ರಾಜ್ಯಾದ್ಯಂತ ಪ್ರತಿವರ್ಷ ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ತಲಾ ₹2 ಸಾವಿರದಂತೆ ಒಟ್ಟು ₹3.60 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.ಜಿಲ್ಲಾ ಗೌರವಾಧ್ಯಕ್ಷ ಯಾಮರೆಡ್ಡಿ ಮುಂಡಾಸ, ಖಜಾಂಚಿ ರಂಗನಾಥ ನಾಯಕ, ಕಾರ್ಯದರ್ಶಿ ಸಾಯಪ್ಪ ಚಂಡ್ರಕಿ ಇದ್ದರು.