ಭರಮಸಾಗರ : ಬಣಜಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಘಟಿತ ಪ್ರಯತ್ನದ ಜೊತೆಗೆ ಸಮಾಜದ ಪ್ರತಿಯೊಬ್ಬರೂ ಪರಸ್ಪರ ಸಹಕಾರ ಒಗ್ಗಟ್ಟು ಹಾಗೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಯಾದಗಿರಿ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ನಗರದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ (ರಿ.)ಬೆಂಗಳೂರು ವತಿಯಿಂದ ಶ್ರೀಮತಿ ರತ್ನಮ್ಮ ಶರಣಪ್ಪ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಅಭಿವೃದ್ಧಿಗೆ ಸಂಘಟನೆಯೇ ಪ್ರಮುಖ ಶಕ್ತಿಯಾಗಿದ್ದು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಘಟನೆಯ ಬಲವರ್ಧನೆಗೆ ಆದ್ಯತೆ ನೀಡಬೇಕು. ಸಂಘದ ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಅನುಷ್ಠಾನಗೊಳಿಸಬೇಕು. ಸಮಾಜದ ಯಾವುದೇ ಭಾಗದಲ್ಲಿ ತುರ್ತು ಪರಿಸ್ಥಿತಿ ಅಥವಾ ಸಮಸ್ಯೆ ಎದುರಾದಾಗ ಪಕ್ಷ, ಪ್ರದೇಶ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗೂಡಿ ಸಮಾಜದ ಸದಸ್ಯರಿಗೆ ಬೆಂಬಲ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ರೂಢಗಿ ಮಾತನಾಡಿ ಬಣಜಿಗ ಸಮಾಜದಲ್ಲಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ವಿದ್ಯಾರ್ಥಿವೇತನ, ಮಾರ್ಗದರ್ಶನ ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯ ಸಹಕಾರ ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸಲು ಸಮಾಜ ಮುಂದಾಗಬೇಕು. ಶಿಕ್ಷಣವೇ ಸಮಾಜದ ಪ್ರಗತಿಯ ಪ್ರಮುಖ ಸಾಧನವಾಗಿದ್ದು ಯಾವುದೇ ಮಗು ಆರ್ಥಿಕ ಕಾರಣದಿಂದ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಬಿದರಿ ವಾರ್ಷಿಕ ವರದಿ ಮಂಡಿಸಿದರು. ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಸವರಾಜ ಭರಮಶೆಟ್ಟಿ ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆಂದನಪ್ಪ ಜವಳಿ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು, ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಬಣಜಿಗ ಸಮಾಜದ ಸಂಘಟನಾ ಬಲವರ್ಧನೆ, ಶೈಕ್ಷಣಿಕ ಪ್ರಗತಿ, ಆರ್ಥಿಕ ಸಬಲೀಕರಣ, ಯುವಜನತೆ ಹಾಗೂ ಮಹಿಳೆಯರ ಅಭಿವೃದ್ಧಿ, ಸರ್ಕಾರದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಸಮಾಜದ ಸಮಗ್ರ ಏಳ್ಗೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.