ಹೆಚ್ಚುತ್ತಿದೆ ನಕಲಿ ಪತ್ರಕರ್ತರ ಹಾವಳಿ : ಅಕ್ಷರ ಜ್ಞಾನವಿಲ್ಲ,ಓದಲು-ಬರೆಯಲು ಬರುವುದಿಲ್ಲ.ಆದರೂ ಪತ್ರಕರ್ತರು.!

  • ಹೆಚ್ಚುತ್ತಿದೆ ನಕಲಿ ಪತ್ರಕರ್ತರ ಹಾವಳಿ.
  • ಪ್ರೆಸ್ ಐಡಿ ಕಾರ್ಡ್: ವಸೂಲಿಯ ಲೈಸೆನ್ಸ್ ಅಲ್ಲ.
  • ಪತ್ರಿಕೋದ್ಯಮವು ಸಾಮಾಜಿಕ ಹೊಣೆಗಾರಿಕೆ.
  • ಸತ್ಯವನ್ನು ನಿರ್ಭೀತಿಯಾಗಿ ಪ್ರಕಟಿಸುವುದು ಪತ್ರಿಕೋದ್ಯಮದ ಮೂಲ ಉದ್ದೇಶ.
  • ಕೆಲವರು ಪತ್ರಕರ್ತರಾಗಿ ದಂಧೆಗೆ ಇಳಿದಿದ್ದಾರೆ.
  • ಪತ್ರಕರ್ತ ಸಮಾಜದ ಜವಾಬ್ದಾರಿ ಹೊತ್ತ ವ್ಯಕ್ತಿ.

                                       ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮವು ಸಮಾಜದ ಕಣ್ಣು ಮತ್ತು ಕಿವಿಯಾಗಿದೆ. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು, ಸತ್ಯವನ್ನು ನಿರ್ಭೀತಿಯಾಗಿ ಪ್ರಕಟಿಸುವುದು ಪತ್ರಿಕೋದ್ಯಮದ ಮೂಲ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

ಕುತ್ತಿಗೆಯಲ್ಲಿ ಪ್ರೆಸ್ ಐಡಿ ಕಾರ್ಡ್ ಧರಿಸಿಕೊಂಡು ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವ್ಯಾಪಾರಸ್ಥರ ಬಳಿ ತೆರಳಿ ಬೆದರಿಕೆ ಹಾಕುವುದು, ಹಣ ಕೊಟ್ಟರೆ ಸುದ್ದಿ ಪ್ರಕಟಿಸುವುದಿಲ್ಲ ಅಥವಾ ಹಣ ಕೊಡದಿದ್ದರೆ ಸುದ್ದಿ ಹಾಕುತ್ತೇವೆ ಎಂಬ ರೀತಿಯಲ್ಲಿ ವರ್ತಿಸುವ ಆರೋಪಗಳು ಆಗಾಗ ಕೇಳಿಬರುತ್ತಿವೆ. ಇಂತಹ ಕೃತ್ಯಗಳಿಗೆ ಪತ್ರಿಕೋದ್ಯಮದೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ನೇರವಾಗಿ ಕಾನೂನುಬಾಹಿರ ಮತ್ತು ಸಮಾಜ ವಿರೋಧಿ ನಡೆ.

ಪ್ರೆಸ್ ಐಡಿ ಕಾರ್ಡ್ ಎನ್ನುವುದು ಅಧಿಕಾರದ ಸಂಕೇತವಲ್ಲ.ಅದು ಜವಾಬ್ದಾರಿಯ ಸಂಕೇತ. ಅದು ಜನರ ವಿಶ್ವಾಸವನ್ನು ಪ್ರತಿನಿಧಿಸುವ ಗುರುತು. ಆ ಗುರುತನ್ನು ಬಳಸಿಕೊಂಡು ವೈಯಕ್ತಿಕ ಲಾಭ ಪಡೆಯಲು ಯತ್ನಿಸುವವರು ಪತ್ರಕರ್ತರಲ್ಲ.ಅವರು ಪತ್ರಿಕೋದ್ಯಮದ ಹೆಸರಿಗೆ ಕಳಂಕ ತರುವವರು.ನಿಜವಾದ ಪತ್ರಕರ್ತ ತಪ್ಪು ಕಂಡಾಗ ಸಾಕ್ಷ್ಯಾಧಾರಗಳೊಂದಿಗೆ ಸುದ್ದಿ ಪ್ರಕಟಿಸುತ್ತಾನೆ. ಸತ್ಯವನ್ನು ಸಮಾಜದ ಮುಂದೆ ಇಡುತ್ತಾನೆ. ಯಾವುದೇ ಒತ್ತಡ, ಆಮಿಷ ಅಥವಾ ಬೆದರಿಕೆಗೆ ಮಣಿಯುವುದಿಲ್ಲ. ಆದರೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವ ವ್ಯಕ್ತಿ ಪತ್ರಕರ್ತನಲ್ಲ.ಕಾನೂನಿನ ಮುಂದೆ ಉತ್ತರಿಸಬೇಕಾದ ವ್ಯಕ್ತಿ. ದುರದೃಷ್ಟವಶಾತ್, ಇಂತಹ ಕೆಲವರ ಕೃತ್ಯದಿಂದ ನಿಷ್ಠೆ, ಪ್ರಾಮಾಣಿಕತೆ ಮತ್ತು ಜನಸೇವೆಯ ಮನೋಭಾವದಿಂದ ದುಡಿಯುತ್ತಿರುವ ಸಾವಿರಾರು ಪತ್ರಕರ್ತರ ಗೌರವಕ್ಕೂ ಧಕ್ಕೆಯಾಗುತ್ತಿದೆ.

ಸಮಾಜದಲ್ಲಿ ಮಾಧ್ಯಮದ ಮೇಲಿನ ನಂಬಿಕೆ ಕುಗ್ಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.ಇಂತಹ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಕರ್ತರ ಸಂಘಗಳು ಹಾಗೂ ಮಾಧ್ಯಮ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಅದೇ ವೇಳೆ ಜನರೂ ಕೂಡ ಯಾವುದೇ ಬೆದರಿಕೆ ಅಥವಾ ಅಕ್ರಮ ವಸೂಲಿಗೆ ಮಣಿಯದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವ ಧೈರ್ಯ ತೋರಬೇಕು.

ಪತ್ರಿಕೋದ್ಯಮವು ಉದ್ಯೋಗ ಮಾತ್ರವಲ್ಲ.ಅದು ಸಾಮಾಜಿಕ ಹೊಣೆಗಾರಿಕೆ. ಪ್ರೆಸ್ ಐಡಿ ಕಾರ್ಡ್ ಹಣ ಸಂಪಾದಿಸುವ ಪರವಾನಗಿ ಅಲ್ಲ, ಜನಸೇವೆಯ ಪ್ರತಿಜ್ಞೆ. ಆ ಪ್ರತಿಜ್ಞೆಯನ್ನು ಗೌರವಿಸುವವರು ಮಾತ್ರ ನಿಜವಾದ ಪತ್ರಕರ್ತರು.

ಪ್ರೆಸ್ ಐಡಿ ಕಾರ್ಡ್ ಎದೆಯ ಮೇಲಿರುವುದಕ್ಕಿಂತ, ಸತ್ಯ ಮತ್ತು ಪ್ರಾಮಾಣಿಕತೆ ಮನಸ್ಸಿನಲ್ಲಿರುವುದು ಮುಖ್ಯ. ಪತ್ರಕರ್ತನ ನಿಜವಾದ ಗುರುತು ಅವನ ಐಡಿ ಕಾರ್ಡ್‌ನಲ್ಲಿ ಅಲ್ಲ, ಅವನ ನೈತಿಕತೆ, ಜನಪರ ನಿಲುವು ಮತ್ತು ನಿರ್ಭೀತ ಪತ್ರಿಕೋದ್ಯಮದಲ್ಲಿದೆ. ಪತ್ರಿಕೋದ್ಯಮದ ಗೌರವವನ್ನು ಉಳಿಸುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ ಮತ್ತು ಸಮಾಜದ ನಿರೀಕ್ಷೆಯೂ ಹೌದು. ಇಂದು ಮಾಧ್ಯಮ ಸಂಸ್ಥೆಗಳು ನೇಮಕಾತಿಯಲ್ಲಿ ಶಿಕ್ಷಣ, ನೈತಿಕತೆ ಮತ್ತು ವೃತ್ತಿಪರ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೆಲವರು ಪತ್ರಕರ್ತರಾಗಿ ದಂಧೆಗೆ ಇಳಿದಿದ್ದಾರೆ. ಇದು ಯಾರನ್ನೂ ಅವಮಾನಿಸುವ ಉದ್ದೇಶವಲ್ಲ. ಅನುಭವಕ್ಕೂ ತನ್ನದೇ ಆದ ಮೌಲ್ಯವಿದೆ. ಅನೇಕ ಹಿರಿಯ ಪತ್ರಕರ್ತರು ಔಪಚಾರಿಕ ಪತ್ರಿಕೋದ್ಯಮ ಶಿಕ್ಷಣವಿಲ್ಲದಿದ್ದರೂ ತಮ್ಮ ಶ್ರಮ, ಅಧ್ಯಯನ ಮತ್ತು ಪ್ರಾಮಾಣಿಕತೆಯಿಂದ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದರೆ ಮುಂದಿನ ತಲೆಮಾರಿನ ಪತ್ರಿಕೋದ್ಯಮ ಇನ್ನಷ್ಟು ವೃತ್ತಿಪರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹವಾಗಬೇಕಾದರೆ ಶಿಕ್ಷಣ, ತರಬೇತಿ ಮತ್ತು ನೈತಿಕತೆಗೆ ಹೆಚ್ಚಿನ ಒತ್ತು ನೀಡುವುದು ಕಾಲದ ಅಗತ್ಯವಾಗಿದೆ.

********************

ಏನಾದರೂ ಎಜುಕೇಶನ್ ಆಗಿದ್ಯಾ…ಇಲ್ಲ..
ಪತ್ರಿಕೋದ್ಯಮಕ್ಕೂ ವೃತ್ತಿಪರ ಅರ್ಹತೆ ಬೇಕಲ್ಲವೇ?..

ದೇಶದಲ್ಲಿ ಪ್ರತಿಯೊಂದು ವೃತ್ತಿಗೂ ನಿರ್ದಿಷ್ಟ ಅರ್ಹತೆ, ತರಬೇತಿ ಮತ್ತು ಪರೀಕ್ಷೆಗಳಿವೆ. ಭಾರತೀಯ ಆಡಳಿತ ಸೇವೆಗೆ (IAS) ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಬೇಕು. ಭಾರತೀಯ ಪೊಲೀಸ್ ಸೇವೆಗೆ (IPS) ಆಯ್ಕೆಯಾಗಲು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು. ವೈದ್ಯರಾಗಲು MBBS ಓದಿ ವೈದ್ಯಕೀಯ ಮಂಡಳಿಯ ನಿಯಮಗಳನ್ನು ಪಾಲಿಸಬೇಕು. ಶಿಕ್ಷಕರಾಗಲು B.Ed., ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಹಾಗೂ ಅಗತ್ಯ ಅರ್ಹತೆ, ಇಂಜಿನಿಯರ್ ಆಗಲು ಇಂಜಿನಿಯರಿಂಗ್ ಶಿಕ್ಷಣ—ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಶಿಕ್ಷಣ ಮತ್ತು ಕೌಶಲ್ಯಕ್ಕೆ ಮಹತ್ವ ನೀಡಲಾಗಿದೆ.

ಆದರೆ ಸಮಾಜದ ನಾಲ್ಕನೇ ಅಂಗವಾದ ಪತ್ರಿಕೋದ್ಯಮಕ್ಕೆ ಮಾತ್ರ ಇಂತಹ ವೃತ್ತಿಪರ ಮಾನದಂಡಗಳ ಕೊರತೆ ಕಂಡುಬರುತ್ತಿದೆ. ಇಂದು ಪತ್ರಕರ್ತ ಎಂಬ ಹೆಸರನ್ನು ಬಳಸುವುದು ಸುಲಭವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಯಾವುದೇ ಪತ್ರಿಕೋದ್ಯಮದ ತರಬೇತಿ ಇಲ್ಲದೆ, ಭಾಷೆಯ ಮೇಲಿನ ಹಿಡಿತವಿಲ್ಲದೆ, ಸುದ್ದಿಯ ಮೌಲ್ಯವೇನು ಎಂಬ ಅರಿವಿಲ್ಲದೆ ಪತ್ರಕರ್ತರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.

ಪತ್ರಕರ್ತನಾಗುವುದು ಎಂದರೆ ಕುತ್ತಿಗೆಯಲ್ಲಿ ಪ್ರೆಸ್ ಐಡಿ ಕಾರ್ಡ್ ಹಾಕಿಕೊಳ್ಳುವುದಲ್ಲ. ಪತ್ರಕರ್ತ ಎಂದರೆ ಸಮಾಜದ ಜವಾಬ್ದಾರಿ ಹೊತ್ತ ವ್ಯಕ್ತಿ. ಕಾನೂನು, ಸಂವಿಧಾನ, ಪತ್ರಿಕಾ ನೈತಿಕತೆ, ಭಾಷಾ ಜ್ಞಾನ, ವರದಿಗಾರಿಕೆಯ ಕೌಶಲ್ಯ, ಸತ್ಯ ಪರಿಶೀಲನೆ (Fact Checking) ಮತ್ತು ಸಾರ್ವಜನಿಕ ಹಿತಾಸಕ್ತಿಯ ಅರಿವು ಇರಬೇಕು.

ಕೇವಲ RNI ನೋಂದಣಿ ಹೊಂದಿರುವ ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆಯೊಂದರ ಐಡಿ ಕಾರ್ಡ್ ಇರುವುದರಿಂದ ಮಾತ್ರ ಯಾರೂ ಪತ್ರಕರ್ತರಾಗುವುದಿಲ್ಲ. RNI ನೋಂದಣಿ ಒಂದು ಪ್ರಕಟಣೆಯ ಕಾನೂನುಬದ್ಧ ನೋಂದಣಿಯನ್ನು ಸೂಚಿಸುತ್ತದೆ; ಅದು ವ್ಯಕ್ತಿಯ ವೃತ್ತಿಪರ ಅರ್ಹತೆಯ ಪ್ರಮಾಣಪತ್ರವಲ್ಲ. ಪತ್ರಕರ್ತನ ಅರ್ಹತೆಯನ್ನು ನಿರ್ಧರಿಸುವುದು ಅವನ ಶಿಕ್ಷಣ, ನೈತಿಕತೆ, ಕೌಶಲ್ಯ ಮತ್ತು ಜನಪರ ಸೇವೆ.

ಇಂದು ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿರುವ ಕೆಲವು ಸಮಸ್ಯೆಗಳು ಅಪೂರ್ಣ ಮಾಹಿತಿ, ಸುಳ್ಳು ಸುದ್ದಿಗಳು, ಬ್ಲ್ಯಾಕ್‌ಮೇಲ್, ಬೆದರಿಕೆ, ವಸೂಲಿ, ಸಾಮಾಜಿಕ ಜಾಲತಾಣಗಳ ದುರುಪಯೋಗ. ಇವೆಲ್ಲವೂ ವೃತ್ತಿಪರ ತರಬೇತಿಯ ಕೊರತೆಯನ್ನು ಪ್ರಶ್ನಿಸುವಂತೆ ಮಾಡುತ್ತವೆ.

*********************************

ಜವಾಬ್ದಾರಿಯುತ ವೃತ್ತಿಯನ್ನಾಗಿಸಲು
ಕೆಲವು ಸುಧಾರಣೆಗಳು ಅಗತ್ಯ.

ಪತ್ರಕರ್ತರಾಗಿ ಕಾರ್ಯನಿರ್ವಹಿಸುವವರಿಗೆ ಪತ್ರಿಕೋದ್ಯಮ ಅಥವಾ ಸಮೂಹ ಸಂವಹನ (Journalism & Mass Communication) ವಿಷಯದಲ್ಲಿ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿಗೆ ಉತ್ತೇಜನ ನೀಡಬೇಕು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಕರ್ತರ ನೋಂದಣಿ ಅಥವಾ ಮಾನ್ಯತೆಗೆ ಸಂಬಂಧಿಸಿದ ಕೌಶಲ್ಯ ಪರೀಕ್ಷೆ ಅಥವಾ ಪ್ರಮಾಣೀಕರಣ ವ್ಯವಸ್ಥೆಯನ್ನು ಪರಿಗಣಿಸಬೇಕು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಥವಾ ಸೂಕ್ತ ಸಂಸ್ಥೆಗಳ ಮೂಲಕ ಪತ್ರಿಕಾ ನೈತಿಕತೆ, ಕಾನೂನು, ವರದಿಗಾರಿಕೆ ಮತ್ತು ಭಾಷಾ ಕೌಶಲ್ಯದ ಕುರಿತು ಪ್ರಮಾಣಿತ ತರಬೇತಿ ಹಾಗೂ ಪರೀಕ್ಷೆಗಳನ್ನು ನಡೆಸುವ ಕುರಿತು ಚರ್ಚೆಯಾಗಬೇಕು.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ನಿರಂತರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಬೇಕು.

ಲೇಖನ– ಮಾಲತೇಶ್ ಅರಸ್ ಹರ್ತಿಕೋಟೆ
 MA.,MCJ.,BEd.,LLB.,PGDJ., 
ಸಂಪಾದಕರು,
ನಗರವಾಣಿ ದಿನಪತ್ರಿಕೆ ಚಿತ್ರದುರ್ಗ.

Leave a Reply

Your email address will not be published. Required fields are marked *