ರಾಯಚೂರು : ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ-ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ರಾಯಣ್ಣ ಅವರ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ (ರಿ.) ಒತ್ತಾಯಿಸಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತ್ಯಾಗ, ಪರಾಕ್ರಮ ಹಾಗೂ ದೇಶಪ್ರೇಮದ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅರೆ-ಸರ್ಕಾರಿ ಕಚೇರಿಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಯಣ್ಣ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.
ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಆ.15ರಂದು ರಾಯಚೂರು ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರದೊಂದಿಗೆ ಶಾಂತಿಯುತ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿದೆ. ಮೆರವಣಿಗೆಗೆ ಅಗತ್ಯ ಅನುಮತಿ ನೀಡುವುದರ ಜೊತೆಗೆ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡಿ, ರಾಯಣ್ಣ ಜಯಂತಿಯನ್ನು ಗೌರವಯುತವಾಗಿ ಆಚರಿಸಲು ಹಾಗೂ ಮೆರವಣಿಗೆಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಕೆ. ಅಯ್ಯಣ್ಣ ವಡವಟ್ಟಿ, ಪ್ರಧಾನ ಕಾರ್ಯದರ್ಶಿ ಡಿ. ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷ ನರಸಿಂಹ ತೋರ್ಸಿ, ವಿ. ಜಗದೀಶ್, ವೆಂಕಟೇಶ ಇಡಪನೂರು, ಈರಣ್ಣ ಪೂಜಾರಿ, ವಿರುಪಾಕ್ಷಿ ಕೊರಿವಿಹಾಳ್, ಸಾಬಣ್ಣ ಗಟ್ಟುಬಿಚ್ಚಾಲಿ, ಕೆ. ಆಂಜನೇಯ ಪುಚ್ಚಲದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.