ಶಹಾಪುರ,,
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಬೆಳೆ ಸಮೀಕ್ಷೆ ನಿಮಿತ್ತ ಗುರುವಾರ ಶಹಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಸಚಿವರ ಪ್ರವಾಸದ ಅಧಿಕೃತ ಮಾಹಿತಿಯನ್ನು ತಾಲೂಕು ಪತ್ರಕರ್ತರಿಗೆ ನೀಡದಿರುವುದು ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರ ಪ್ರವಾಸದ ವೇಳಾಪಟ್ಟಿ ಹಾಗೂ ಕಾರ್ಯಕ್ರಮದ ವಿವರಗಳನ್ನು ತಹಶೀಲ್ದಾರ ಸಿದ್ದಾರೂಢ ಬನ್ನಿಕೊಪ್ಪ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನೀಲಕುಮಾರ ಅವರು ಪತ್ರಕರ್ತರಿಗೆ ತಿಳಿಸಿಲ್ಲ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಸಚಿವರ ಆಪ್ತ ಸಹಾಯಕ ಆನಂದ್ ಪೂಜಾರಿ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಪತ್ರಕರ್ತರು ತಿಳಿಸಿದ್ದಾರೆ. ಸಚಿವರ ಅಂಗರಕ್ಷಕರನ್ನು ಸಂಪರ್ಕಿಸಿದಾಗ, ಈ ಕುರಿತು ನನಗೆ ಮಾಹಿತಿ ಇಲ್ಲ. ಪಿಎ ಆನಂದ್ ಪೂಜಾರಿ ಅವರನ್ನು ಸಂಪರ್ಕಿಸಿ ಎಂದು ಉತ್ತರ ನೀಡಿರುವುದಾಗಿ ತಿಳಿದುಬಂದಿದೆ.
ಸಚಿವರ ಶಹಾಪುರ ಕ್ಷೇತ್ರದ ವಿವಿಧ ಗ್ರಾಮಗಳ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರ ಪ್ರವಾಸದ ಮಾಹಿತಿಯನ್ನು ನಾವೇ ತೆಗೆದುಕೊಂಡಿದ್ದು, ಪ್ರವಾಸದ ವೇಳೆ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ಶಹಾಪುರ ಕ್ಷೇತ್ರದ ಯಾವ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ತಾಲೂಕು ಪತ್ರಕರ್ತರಿಗೆ ಇರಲಿಲ್ಲ..!
ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಚಿವರ ಪ್ರವಾಸ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಕರೇಗಾರ ಆಗ್ರಹಿಸಿದ್ದಾರೆ.