ಗುರುಪೂರ್ಣಿಮೆ ಭಕ್ತಿ ಸಂಭ್ರಮ: ಗುರುವಿನ ಮಹತ್ವ ಸಾರಿದ ಶಾಂತಮಯ ಶ್ರೀ

ಯಾದಗಿರಿ,
ಹುಣಸಗಿ ತಾಲೂಕಿನ ಅಗತೀರ್ಥದ ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಗುರುಬಸವ ಶಿವಯೋಗಿಗಳ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಬುಧವಾರ ಗುರು ವಂದನಾ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ, “ಶಿಷ್ಯರ ಅಜ್ಞಾನವನ್ನು ದೂರ ಮಾಡಿ ಜ್ಞಾನದೆಡೆಗೆ ಕೊಂಡೊಯ್ಯುವವರೇ ನಿಜವಾದ ಗುರು. ಭವಬಂಧನದಿಂದ ಮುಕ್ತಿ ನೀಡಿ ಸಂಸ್ಕಾರದ ದಾರಿ ತೋರಿಸುವ ಗುರುವಿನ ಸೇವೆಗೆ ಬೆಲೆ ಕಟ್ಟಲಾಗದು” ಎಂದು ಹೇಳಿದರು.
ಇಂದಿನ ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕಿನಿಂದ ಗುರು-ಶಿಷ್ಯರ ಬಾಂಧವ್ಯ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರೂ ಪ್ರತಿದಿನ ಗುರುವಿನ ಸ್ಮರಣೆ ಮಾಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ತಿಳಿಸಿದರು. ಸದ್ಗುರುವಿನ ಕೃಪೆಯಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಸಾಧಕರಿಗೆ ಗುರುಪೂರ್ಣಿಮೆ ಅತ್ಯಂತ ಪವಿತ್ರ ಹಬ್ಬವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಕ್ತರು ಶ್ರೀಗಳಿಗೆ ಗುರು ವಂದನಾ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಪರಮಪೂಜ್ಯ ಶ್ರೀ ಕೈವಲ್ಯಾನಂದ ಶರಣರು, ಶ್ರೀ ಮಾಳಿಂಗರಾಯ ದೇವರು ಹಾಗೂ ಅಗತೀರ್ಥ, ಕೂಚಬಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *