ಶಹಾಪುರ,
ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಗರದ ಶಾಸಕರ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾಂಗ್ರೆಸ್ ಸಂಘಟನ್ ಸೃಜನ ಅಭಿಯಾನ’ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಏಳು ದಶಕಗಳಿಗೂ ಹೆಚ್ಚು ಕಾಲ ದೇಶದ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಜೊತೆಗೆ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದೆ ಎಂದು ಹೇಳಿದರು.
ಸರ್ವಧರ್ಮ ಸಮಭಾವ, ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು ಹಾಗೂ ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುತ್ತ ಬಂದಿದೆ. ಪಕ್ಷದ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥೈಸಿಕೊಂಡು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಗ್ರಾಮ, ಬೂತ್ ಹಾಗೂ ಬ್ಲಾಕ್ ಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಹೊಸ ಯುವಕರನ್ನು ಪಕ್ಷದತ್ತ ಸೆಳೆಯಬೇಕು. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸುಮಾಕುಮಾರ, ರಾಜ್ಯ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಪುಂಡಲಿಕರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಾಜಗೋಪಾಲರೆಡ್ಡಿ, ಶ್ರೀದೇವಿ ಉತ್ಸವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಎಂ. ಪಾಟೀಲ್ ಅವರು ಕಾಂಗ್ರೆಸ್ ಸಂಘಟನೆ ಬಲವರ್ಧನೆ ಕುರಿತು ಮಾತನಾಡಿದರು.
ಶಹಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಂತಪ್ಪ ಸಾಹು ಚಂದಾಪುರ ಅಧ್ಯಕ್ಷತೆ ವಹಿಸಿದ್ದರು. ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಯಾಳಗಿ, ಹಿರಿಯ ಮುಖಂಡರಾದ ಅಯ್ಯಣ್ಣ ಕನ್ಯಾಕೊಳೂರು, ಶಂಕ್ರಣ್ಣ ವಣಿಕ್ಯಾಳ, ಸಿದ್ದನಗೌಡ ಕೆಂಭಾವಿ, ಶಮಸನ್ ಳಿಕೇರಿ, ಮಹಿಪಾಲರೆಡ್ಡಿ ದಿಗಾಂವಿ, ಸಿದ್ದು ಸಾಹು ಆರಬೊಳ, ಮಹಾದೇವಪ್ಪ ಸಾಲಿಮನಿ, ನೀಲಕಂಠ ಬಡಿಗೇರ, ಅಲ್ಲಾಪಟೇಲ್ ಮಕ್ತಾಪುರ, ಮೌನೇಶ ನಾಟೇಕಾರ್, ರುದ್ರಪ್ಪ ಹುಲಿಮನಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.