ಕನಕ ಚಿಂತನೆ
ಸಂಪತ್ತಿನ ಸಂಗ್ರಹಣೆಯ ದಾಹಪೀಡಿತ ಮನಸ್ಸುಗಳಿಗೆ ಕನಕದಾಸರ ಸಂದೇಶ
ಮುಕ್ಕಣ್ಣ ಕರಿಗಾರ
ಆಧುನಿಕ ಜಗತ್ತು ಹಣದ ಹಿಂದೆ ಓಡುತ್ತಿದೆ.ಹಣದ ವ್ಯಾಮೋಹ ಜನರನ್ನು ದಟ್ಟವಾಗಿ ಆವರಿಸಿದೆ.ಹಣವಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಣ ಉಳ್ಳವರೇ ಪ್ರಭಾವಶಾಲಿಗಳಾಗಿದ್ದಾರೆ.ಹಣದೆದುರು ಮೌಲ್ಯಗಳು ಸೋತಿರುವುದು ಕಲಿಯುಗ ವಿಶೇಷ ! ಎಲನ್ ಮಸ್ಕ್ ಟ್ರಿಲಿಯನೇರ್ ಆಗಿ ಜಗತ್ತಿನ ಅತಿದೊಡ್ಡ ಶ್ರೀಮಂತ ಎನ್ನಿಸಿಕೊಂಡರೆ ನಮ್ಮ ದೇಶದಲ್ಲಿ ಅದಾನಿ,ಅಂಬಾನಿ ಸೇರಿದಂತೆ ಕೆಲವು ಕುಟುಂಬಗಳು ಶತಕೋಟ್ಯಾಧಿಪತಿ ಸಂಪತ್ತಿನ ‘ಕುಬೇರರು’ ಆಗಿದ್ದಾರೆ.ಮಿಲಿಯನೇರ್,ಬಿಲಿಯನೇರುಗಳು ತಮ್ಮ ‘ಅರ್ಜಿತ ಪಾಪ’ ವನ್ನು ಕಳೆದುಕೊಳ್ಳಲು ಅವರ ಲಾಭದ ಶೇಕಡಾ ಐದರಿಂದ ಆರರಷ್ಟು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಒಂದಿಷ್ಟು ಸಮಾಜೋಪಯೋಗಿ ಕೆಲಸ ಕಾರ್ಯಗಳನ್ನು ಮಾಡಿ ದೊಡ್ಡ ಪ್ರಚಾರ ಪಡೆಯುತ್ತಿದ್ದಾರೆ.ಸಂಪತ್ತಿನ ವಿಪರೀತ ಸಂಗ್ರಹಣೆ ಮಾಡಿ ರಾಷ್ಟ್ರಜೀವನವನ್ನು ಅಸ್ವಸ್ಥಗೊಳಿಸುತ್ತಿರುವ ಮನುಷ್ಯತ್ವಹೀನ ಮಹಾನುಭಾವರುಗಳಿಗೆ ಕನಕದಾಸರ ಧರ್ಮದರ್ಶಿತ್ವ ವ್ಯಕ್ತಿತ್ವ ದೊಡ್ಡ ಸಂದೇಶವನ್ನು ನೀಡುತ್ತಿದೆ.
ಕನಕದಾಸರು ಹರಿದಾಸರಾಗುವ ಪೂರ್ವದಲ್ಲಿ ಅವರು ವಿಜಯನಗರದ ಅರಸರ ಡಣ್ಣಾಯಕರಾಗಿ ಬಾಡ- ಬಂಕಾಪುರಗಳಿಂದ ಆಳ್ವಿಕೆ ನಡೆಸುತ್ತಿದ್ದ ದಿನಗಳಲ್ಲಿ ನಡೆದ ಘಟನೆ ಇದು.ತಿಮ್ಮಪ್ಪ ದಣ್ಣಾಯಕರು ಬಾಡದಲ್ಲಿ ದಣ್ಣಾಯಕರ ಮನೆ ನಿರ್ಮಾಣಕ್ಕೆ ಸಂಕಲ್ಪಿಸಿ ನೆಲ ಅಗೆಸುತ್ತಿದ್ದಾಗ ಏಳು ಕೊಪ್ಪರಿಗೆ ಹೊನ್ನು ಸಿಗುತ್ತದೆ.ಬಂಗಾರದ ರಾಶಿಯೇ ಸಿಕ್ಕರೂ ಅದರ ಬಗ್ಗೆ ವ್ಯಾಮೋಹಿತರಾಗದ ತಿಮ್ಮಪ್ಪ ದಣ್ಣಾಯಕರು ಆ ಸಂಪತ್ತನ್ನು ಬಾಡ -ಬಂಕಾಪುರಗಳ ಬಡವರನ್ನು ಕರೆದು ದಾನ ಮಾಡಿದ್ದಲ್ಲದೆ ಬಾಡ ಬಂಕಾಪುರಗಳಲ್ಲಿ ರಂಗನಾಥ,ನರಸಿಂಹಸ್ವಾಮಿ ಮೊದಲಾದ ದೇವಸ್ಥಾನಗಳ ನಿರ್ಮಾಣಕ್ಕೆ ಬಳಸಿ ನಿರುಮ್ಮಳರಾಗಿರುತ್ತಾರೆ.ಕನಕದಾಸರ ನಿರ್ಮೋಹಿ ವ್ಯಕ್ತಿತ್ವವನ್ನು ಕಂಡ ಜನರು ತಿಮ್ಮಪ್ಪ ದಣ್ಣಾಯಕರಿಗೆ’ ಕನಕನಾಯಕ’ ಎನ್ನುವ ಬಿರುದನ್ನು ನೀಡುತ್ತಾರೆ.ಸಿಕ್ಕ ಬಂಗಾರವನ್ನು ಬಡಬಗ್ಗರಿಗೆ ದಾನ ಮಾಡಿ,ದೇವಸ್ಥಾನಗಳ ನಿರ್ಮಾಣ ಕಾರ್ಯಕ್ಕೆ ಬಳಸಿದ ಕಾರಣದಿಂದ ಮಾತ್ರ ಅವರು ಕನಕನಾಯಕರಲ್ಲ; ಸಂಪತ್ತನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಸಮಾಜದಲ್ಲಿ ಬತ್ತಿಹೋಗಿದ್ದ ದಯೆ,ಕರುಣೆ,ಅನುಕಂಪಗಳಂತಹ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಕೆಚ್ಚೆದೆಯ ಸತ್ತ್ವ ಗುಣಪ್ರತೀಕವಾದ ಸ್ವರ್ಣದ ಬೆಲೆಯ ‘ ಬಂಗಾರದ ಮನುಷ್ಯ’ ಎನ್ನುವುದು ಜನರ ಗೌರವದ ಹಿಂದಣ ಆಶಯ.
ತಿಮ್ಮಪ್ಪ ದಣ್ಣಾಯಕರಿಗೆ ಏಳುಕೊಪ್ಪರಿಗೆ ಹೊನ್ನುಸಿಕ್ಕ ಸಂಗತಿ ಮತ್ತು ಅದನ್ನು ಅವರು ಸಮಾಜೋಪಯೋಗಿ ಕೆಲಸ ಕಾರ್ಯಗಳಿಗೆ ಬಳಸಿದ ಸುದ್ದಿ ವಿಜಯನಗರದ ಅರಸರಿಗೆ ತಲುಪುತ್ತದೆ. ಸಂಪತ್ತು ಆಗ ಪ್ರಭುತ್ವದ ಸ್ವತ್ತು.ಭೂಮಿಯಲ್ಲಿ ಸಿಕ್ಕನಿಧಿಯು ಆಳರಸರ ಆಸ್ತಿ. ಯಾರದೆ ಹೊಲ ಮನೆಗಳಲ್ಲಿ ಸಿಕ್ಕ ನಿಧಿಯನ್ನು ಅರಸರಿಗೆ ಒಪ್ಪಿಸಿ ಅವರು ಕೊಟ್ಟ ಒಂದಿಷ್ಟು ನಿಧಿ,ಪಾರಿತೋಷಕ,ಉಂಬಳಿಯಿಂದ ನಿಧಿಸಿಕ್ಕವರು ಸಂತೋಷಿಸಬೇಕಿತ್ತು.ಆದರೆ ತಿಮ್ಮಪ್ಪ ದಣ್ಣಾಯಕರು ವಿಜಯನಗರದ ಅರಸರ ಸೇವೆಯಲ್ಲಿದ್ದೂ ತಮಗೆ ದೊರೆತ ನಿಧಿಯನ್ನು ರಾಜಬೊಕ್ಕಸಕ್ಕೆ ಸಲ್ಲಿಸದೆ ಸದ್ವಿನಿಯೋಗಿಸಿದ್ದು ಅರಸರಿಗೆ ಸರಿ ಕಾಣಲಿಲ್ಲ. ಅದಾಗಲೇ ಅವರ ದಾಯಾದಿಗಳು ದಣ್ಣಾಯಕರ ಪದವಿಯನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿದ್ದರು.ನಿಧಿಯ ಪ್ರಸಂಗ ತಿಮ್ಮಪ್ಪ ದಣ್ಣಾಯಕರ ವಿರೋಧಿಗಳಿಗೆ ಸಿಕ್ಕ ದೊಡ್ಡ ಅಸ್ತ್ರವಾಗಿತ್ತು.ವಿಜಯನಗರದ ಅರಸರಿಗೆ ಇಲ್ಲಸಲ್ಲದ ದೂರು ಹೇಳಲಾಯಿತು.ಕೃಷ್ಣದೇವರಾಯ ಕಿರಿಯಪ್ರಾಯದವನಾಗಿದ್ದರಿಂದ ಅವನ ಪರವಾಗಿ ಆಡಳಿತ ನಡೆಸುತ್ತಿದ್ದವರ ಸಮ್ಮುಖದಲ್ಲಿ ತಿಮ್ಮಪ್ಪ ದಣ್ಣಾಯಕರ ವಿಚಾರಣೆ ನಡೆಯುತ್ತದೆ. ಪ್ರಭುತ್ವಕ್ಕೆ ನಿಧಿಯನ್ನು ಒಪ್ಪಿಸದ ತಿಮ್ಮಪ್ಪ ದಣ್ಣಾಯಕರ ನಡೆಯನ್ನು ತೀವ್ರವಾಗಿ ಆಕ್ಷೇಪಿಸಲಾಗುತ್ತದೆ.’ತಾವು ಮಾಡಿದ್ದು ಸರಿ’ ಎಂದು ಸಮರ್ಥಿಸಿಕೊಂಡ ಕನಕನಾಯಕರು ದಣ್ಣಾಯಕ ಪದವಿಯ ತ್ಯಾಗಕ್ಕೆ ಸಿದ್ಧರಾಗುತ್ತಾರೆ.’ ಆರಿಗಂಜುವನಲ್ಲ ನಾನು’ ಎಂದು ಎದೆಯುಬ್ಬಿಸಿ ನುಡಿದ ತಿಮ್ಮಪ್ಪ ದಣ್ಣಾಯಕರು ‘ ಸಾಕು ಸಾಕು ಮನುಜ ಸೇವೆಯು’ ಎಂದು ಹಾಡುತ್ತ ವಿಜಯನಗರದ ಅರಸರ ಅರಮನೆಯಿಂದ ಹೊರಬರುತ್ತಾರೆ.ಪಿಸುಣರ ಹಗೆನುಡಿಗಳಿಗೆ ಕಣ್ಣಿದ್ದೂ ಕುರುಡರಾಗಿದ್ದ ,ಕಿವಿಯಿದ್ದೂ ಕಿವುಡರಾಗಿದ್ದ ವಿಜಯನಗರದ ಅರಸರ ಪ್ರತಿನಿಧಿಗಳು ತಿಮ್ಮಪ್ಪನವರಿಂದ ದಣ್ಣಾಯಕರ ಪದವಿಯನ್ನು ಕಸಿದುಕೊಂಡು ಅವರ ದಾಯಾದಿಗಳಿಗೆ ಅದನ್ನು ದಯಪಾಲಿಸುತ್ತಾರೆ.ಇದೇ ಸಂದರ್ಭದಲ್ಲಿ ಬಂದೊದಗಿದ ಯುದ್ಧ ಒಂದರಲ್ಲಿ ಕನಕನಾಯಕರು ವಿಜಯನಗರದ ಅರಸರ ಪರವಾಗಿ ವೀರಾವೇಶದಿಂದ ಹೋರಾಡಿ ಮೃತ್ಯುಮುಖದಲ್ಲಿದ್ದು ಹರಿಯ ಕರುಣೆಯಿಂದ ಬದುಕುಳಿಯುತ್ತಾರೆ; ಬದುಕು ಬದಲಾಗುತ್ತದೆ.ಆಳರಸರಾಗಿದ್ದವರು ಕಂಡವರ ಮನೆಗಳಲ್ಲಿ ಕೇಳಿ ತಿನ್ನುವ ತಿರುಪೆಯ ಹರಿದಾಸಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಹರಿ ಇತ್ತ ಸಂಪತ್ತನ್ನು ‘ಪೊರೆವಗುಣವುಳ್ಳ’ ಹರಿಯ ಪ್ರತಿನಿಧಿಯಾಗಿ ಸಮಾಜಕ್ಕೆ ಸಮರ್ಪಿಸುವ ಕನಕದಾಸರು ಆಳರಸರಿಗೆ ಮಾತ್ರವಲ್ಲ, ಜಗತ್ತಿನ ಉಳ್ಳವರು, ಶ್ರೀಮಂತರಿಗೆ ಸಾರ್ವಕಾಲಿಕ ಆದರ್ಶ.ಉತ್ತಮ ಪ್ರಜಾಪ್ರತಿನಿಧಿಗಳು ‘ಧರ್ಮದರ್ಶಿಗಳಾಗಿರಬೇಕು’ ,ಸಂಪತ್ತನ್ನು ವೈಯಕ್ತಿಕ ಉಪಯೋಗಕ್ಕಾಗಿ ಸಂಗ್ರಹಿಸದೆ ಸಮಾಜ,ರಾಷ್ಟ್ರದ ಹಿತಕ್ಕಾಗಿ ಬಳಸಬೇಕು ಎನ್ನುವ ಮಹಾತ್ಮ ಗಾಂಧೀಜಿಯವರ ‘ ಧರ್ಮದರ್ಶಿತ್ವ ‘ ( trusteeships) ತತ್ತ್ವದ ಸ್ಫೂರ್ತಿಯಾಗಿದ್ದಾರೆ ಸಂತ ಕನಕದಾಸರು.
ಕನಕದಾಸರ ಮಹೋನ್ನತ ಆದರ್ಶ ಉಳ್ಳವರ ಆದರ್ಶವಾಗಬೇಕು,ಆಳುವವರ ರಾಜ್ಯಾಡಳಿತ ನೀತಿಯಾಗಬೇಕು.ಪ್ರಜೆಗಳಿಂದ ಸಂಗ್ರಹಿಸುವ ತೆರಿಗೆಯ ಲಾಭ ಪ್ರಜೆಗಳಿಗೇ ತಲುಪಬೇಕು.ಸಾರ್ವಜನಿಕ ಸ್ವತ್ತು,ಆಸ್ತಿಗಳು ಸಾರ್ವಜನಿಕರಿಗಾಗಿಯೇ ಮೀಸಲಿರಬೇಕು.ಸಾರ್ವಜನಿಕರ ಆಸ್ತಿಯನ್ನು ಬಳಸಿಕೊಂಡು ಕುಬೇರರಾಗುವ,ಇಂದ್ರನಂತೆ ಮೆರೆಯುವ ಪ್ರವೃತ್ತಿ ಸಲ್ಲದು.ಸಿಕ್ಕ ಏಳುಕೋಟಿ ಸಂಪತ್ತನ್ನು ಬಡಬಗ್ಗರಿಗೆ ದಾನಮಾಡಿ ತಾವು ಭಿಕ್ಷೆಬೇಡಿ ತಿರಿದುಣ್ಣುವ ಬದುಕನ್ನು ಆಯ್ಕೆಮಾಡಿಕೊಂಡ ಕನಕದಾಸರು ಸಮಾಜಮುಖಿಯಾದ ಸಂತರಲ್ಲಿ ಶಿಖರಪ್ರಾಯರು; ವೈರಾಗ್ಯದ ಸೂಚಕವಾದ ‘ ವಿರಕ್ತಿ’ ತತ್ತ್ವದ ಪರಮಾದರ್ಶರು.ಸದಾಚಾರ,ಸದ್ವಿವೇಕಗಳ ಸಮಾಜೋದ್ಧಾರಬದ್ಧತೆಯ ನಡೆಯಿಂದ ಕನಕದಾಸರು ಇತರ ಶರಣರು,ಸಂತರುಗಳಿಂದ ಭಿನ್ನರಾಗಿದ್ದಾರೆ,ಅನನ್ಯರಾಗಿದ್ದಾರೆ..