ಶಹಾಪುರ : ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಕಾರ್ಯ ರಾಜ್ಯಾದ್ಯಂತ ನಡೆಯುತ್ತಿದ್ದು, ಶಹಾಪುರ ಹಾಗೂ ವಡಿಗೇರಿ ತಾಲೂಕುಗಳಲ್ಲಿ ಕಾಂಗ್ರೆಸ್ ಶಿಫಾರಸಿನ ಮೇರೆಗೆ ನೇಮಕಗೊಂಡಿರುವ ಕೆಲ ಬೂತ್ ಮಟ್ಟದ ಅಧಿಕಾರಿಗಳ (BAL) ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮನೆ-ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುವುದು, ಅಗತ್ಯ ದಾಖಲೆಗಳ ಪರಿಶೀಲನೆ ನಡೆಸುವುದು ಹಾಗೂ ನಿಗದಿತ ಅವಧಿಯಲ್ಲಿ ಫಾರ್ಮ್‌ಗಳನ್ನು ಸಂಗ್ರಹಿಸುವುದು BAL ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಹಲವು ಕಡೆಗಳಲ್ಲಿ ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಕೆಲವರು ದೂರವಾಣಿ ಕರೆಗಳಿಗೂ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳೂ ಇವೆ.
ಎಸ್ಐಆರ್ ಪ್ರಕ್ರಿಯೆಗೆ ಉಳಿದಿರುವ ಅವಧಿ ಕೇವಲ ಒಂದು ತಿಂಗಳು ಮಾತ್ರ. 2028ರ ವಿಧಾನಸಭೆ ಚುನಾವಣೆಗೆ ಇದೇ ಮತದಾರರ ಪಟ್ಟಿ ಆಧಾರವಾಗುವ ಕಾರಣ, ಈ ಪ್ರಕ್ರಿಯೆಯ ಯಶಸ್ಸು ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ. ಈಗಿನ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಪಕ್ಷದ ಕೆಲ ಕಾರ್ಯಕರ್ತರಲ್ಲಿಯೇ ವ್ಯಕ್ತವಾಗುತ್ತಿದೆ.
ಪಕ್ಷದ ಹಿರಿಯ ನಾಯಕರು ಸಭೆಗಳಲ್ಲಿ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದರೂ, ಕ್ಷೇತ್ರ ಮಟ್ಟದಲ್ಲಿ ನಿರ್ಲಕ್ಷ್ಯ ತೋರುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಕಾರ್ಯನಿರ್ವಹಿಸದ BAL ಗಳ ಬದಲಿಗೆ ಜವಾಬ್ದಾರಿಯುತ ವ್ಯಕ್ತಿಗಳನ್ನು ನೇಮಿಸುವಂತೆ ಪಕ್ಷದೊಳಗೇ ಒತ್ತಾಯ ಕೇಳಿಬರುತ್ತಿದೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ಚುನಾವಣಾ ಆಯೋಗದ ದೃಢೀಕರಣ ಲಭ್ಯವಾಗಿಲ್ಲ. ಆದ್ದರಿಂದ ಮತದಾರರು ವದಂತಿಗಳಿಗೆ ಕಿವಿಗೊಡದೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.
ಇನ್ನೂ ಉಳಿದಿರುವ ಒಂದು ತಿಂಗಳು ಅತ್ಯಂತ ನಿರ್ಣಾಯಕವಾಗಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ BALಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಪ್ರತಿಯೊಬ್ಬ ಅರ್ಹ ಮತದಾರರಿಗೂ ನ್ಯಾಯ ಒದಗಿಸಲು ಸಾಧ್ಯ. ಇಲ್ಲವಾದರೆ ಅದರ ರಾಜಕೀಯ ಪರಿಣಾಮ 2028ರ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.