ಜು.7ರಂದು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ/ಶಹಾಪುರ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಜುಲೈ 7ರಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗುತ್ತಿದ್ದು, ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಬಾಕಿ ಉಳಿದಿರುವ ವಿಷಯಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ಸಂಬಂಧಪಟ್ಟ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. ಆದರೆ, ಈ ಭಾಗಕ್ಕೆ ಸಂಬಂಧಿಸದ ಇತರೆ ಸಚಿವರು ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಇದಕ್ಕೂ ಮುನ್ನ ಮುಖ್ಯಮಂತ್ರಿ ಜುಲೈ 6ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಭೇಟಿ ನೀಡಲಿದ್ದು, ಬಳಿಕ ಜಿಲ್ಲೆಯ ಕಾಂಗ್ರೆಸ್ ಕಚೇರಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಜುಲೈ 7ರಂದು ಕಲಬುರಗಿಯಲ್ಲೇ ವಾಸ್ತವ್ಯ ಹೂಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಗೃಹ ಕಚೇರಿ ವಲಯದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *