ಬಸವರಾಜ ಕರೇಗಾರ.
ಶಹಾಪುರ/ವಡಗೇರಾ,,
ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೆಲ ಬೂತ್ ಮಟ್ಟದ ಅಧಿಕಾರಿಗಳ (BLO) ನಿರ್ಲಕ್ಷ್ಯದಿಂದ ಮತದಾರರಲ್ಲಿಆತಂಕ ಮೂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಹಲವು ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದ್ದರೂ, ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ಕೆಲವು ಬಿಎಲ್‌ಒಗಳು ತಮ್ಮ ನಿಯೋಜಿತ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಂಶಯವೂ ವ್ಯಕ್ತವಾಗಿದೆ.
ಮತದಾರರ ಮನೆಗಳಿಗೆ ತಲುಪಬೇಕಾದ SIR ಅರ್ಜಿಗಳು (ಫಾರ್ಮ್‌ಗಳು) ಇನ್ನೂ ಅನೇಕ ಕಡೆ ವಿತರಣೆ ಆಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದರಿಂದ ಮತದಾರರ ಪಟ್ಟಿಯ ಪರಿಷ್ಕರಣೆಯ SIR ಅರ್ಜಿಗಳು ಶೇ. 50ರಷ್ಟೂತಲುಪಿಲ್ಲ ಎನ್ನಲಾಗಿದೆ.
ಬಿಎಲ್‌ಒಗಳ ಕಾರ್ಯವೈಖರಿಯ ಮೇಲೆ ಹಿರಿಯ ಚುನಾವಣಾ ಅಧಿಕಾರಿಗಳು ಸಮರ್ಪಕ ಮೇಲ್ವಿಚಾರಣೆ ನಡೆಸುತ್ತಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಕೆಲ ಬಿಎಲ್‌ಒಗಳು ವಿವಿಧ ಕಾರಣಗಳನ್ನು ನೀಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.
ಈ ನಿರ್ಲಕ್ಷ್ಯ ಮುಂದುವರಿದರೆ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಒಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಬ್ಬ ಮತದಾರರಿಗೂ ಫಾರ್ಮ್ ತಲುಪಿಸಿ, ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅವರ ನೇರ ಹೊಣೆಗಾರಿಕೆಯಾಗಿದೆ.
ಆದ್ದರಿಂದ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ತಕ್ಷಣ ಪರಿಸ್ಥಿತಿಯನ್ನು ಪರಿಶೀಲಿಸಿ, ನಿರ್ಲಕ್ಷ್ಯ ತೋರಿದ ಬಿಎಲ್‌ಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪ್ರತಿಯೊಬ್ಬ ಅರ್ಹ ಮತದಾರರಿಗೂ ಯಾವುದೇ ತೊಂದರೆಯಾಗದಂತೆ SIR ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು.ಮನೆ-ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಅರ್ಹ ಮತದಾರರಿಗೂ ಅಗತ್ಯ ಮಾಹಿತಿ ತಲುಪಿಸುವುದು ಅವರ ಕರ್ತವ್ಯವಾಗಿದೆ. ಯಾವುದೇ ರೀತಿಯ ನಿರ್ಲಕ್ಷ್ಯದಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಸಂಬಂಧಪಟ್ಟ ಅಧಿಕಾರಿಗಳು ಕಾರ್ಯವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸಿ,ನಿರ್ಲಕ್ಷ್ಯ ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
ಬಸವರಾಜ ಬಸವಂತಪುರ