ಸೇವಾ ಅವಧಿಯ ನ್ಯಾಯದಾನವೇ ನ್ಯಾಯಾಧೀಶರ ಗುರುತು : ನ್ಯಾ. ಬಸವರಾಜ ಪೂಜಾರ

ಶಹಾಪುರ:
 
ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಾಧೀಶರ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಸೇವಾ ಅವಧಿಯಲ್ಲಿ ನೀಡಿದ ನ್ಯಾಯದಾನವೇ ಮುಖ್ಯವಾಗಿರುತ್ತದೆ ಎಂದು ತಾಲೂಕಿನ ಕಿರಿಯ ಶ್ರೇಣಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಬಸವರಾಜ ಪೂಜಾರ ಹೇಳಿದರು.
ನಗರದ ವಕೀಲರ ಸಂಘದ ಕಾರ್ಯಾಲಯದಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಸೇವೆಸಲ್ಲಿಸಿ ಗದಗ ಜಿಲ್ಲೆಯ ಮುಂಡರಗಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಹಿನ್ನೆಲೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯಾಧೀಶನಾಗಿ ಪ್ರಥಮ ಬಾರಿಗೆ ಸೇವೆ ಸಲ್ಲಿಸಲು ಇಲ್ಲಿಗೆ ಬಂದಾಗ ವಕೀಲರು ಹಾಗೂ ಸಾರ್ವಜನಿಕರಿಂದ ದೊರೆತ ಸಹಕಾರ ಮರೆಯಲಾಗದು. ನ್ಯಾಯದಾನದ ಕರ್ಮಭೂಮಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಭಾವುಕರಾಗಿ ನುಡಿದರು.
ಬಾರ್ ಮತ್ತು ಬೆಂಚ್ ನಡುವೆ ಉತ್ತಮ ಸಮನ್ವಯ ಇದ್ದರೆ ಕಕ್ಷಿದಾರರಿಗೆ ತ್ವರಿತ ನ್ಯಾಯದಾನ ಒದಗಿಸಲು ಅನುಕೂಲವಾಗುತ್ತದೆ. ನ್ಯಾಯಾಧೀಶರು ಕಾನೂನು ಚೌಕಟ್ಟಿನೊಳಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ವಕೀಲರಾದ ಕೆ. ನಯ್ಯಿಂ ಅಹ್ಮದ ತಿಮ್ಮಾಪುರ, ಎಸ್. ಶೇಖರ, ಆರ್. ಚೆನ್ನಬಸ್ಸು ವನದುರ್ಗ, ನಬಿಸಾಬ ಹತ್ತಿಗೂಡೂರ ಮಾತನಾಡಿದರು.ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ, ಉಪಾಧ್ಯಕ್ಷ ವಾಸುದೇವ ಕಟ್ಟಿಮನಿ, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಎಪಿಪಿ ಮರೆಪ್ಪ ಹೊಸಮನಿ, ಸತ್ಯಮ್ಮ ಹೊಸಮನಿ, ಮಲ್ಲಿಕಾರ್ಜುನ ಹಯ್ಯಾಳಕರ್, ನಾಗರಾಜ ಅರಳಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *