ಕುರಿಗಾರರಿಗೆ ಅನ್ಯಾಯ | ಸಹಾಯಧನ ಕಾರ್ಯಕರ್ತರ ಪಾಲು

ಬಸವರಾಜ ಕರೇಗಾರ

ಶಹಾಪೂರ,,

2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಕುರಿಗಾರರಿಗೆ ಸಹಾಯ ಧನ ನೀಡುವುದಕ್ಕಾಗಿ ಯಾದಗಿರಿ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿಗಳನ್ನು ಕರೆಯಲಾಗಿತ್ತು. ಪ್ರತಿ ಸಾರಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿತ ಕುರಿ ಸಹಕಾರಿ ಸಂಘಗಳ ಫಲಾನುಭವಿಗಳಿಗೆ ಸಹಾಯ ಧನ ನೀಡಲಾಗುತ್ತಿತ್ತು.

2025-26 ನೇ ಸಾಲಿನಲ್ಲಿ ಕೆಲವು ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಶಾಸಕರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಸರಕಾರ ಆದೇಶಿಸಿರುವುದರಿಂದ ಪ್ರಸ್ತುತ ವರ್ಷದಲ್ಲಿ ನಿಜವಾದ ಕುರಿಗಾರರಿಗೆ ಸಹಾಯಧನ ಸಿಗದೇ ಕಾಂಗ್ರೆಸ್ ಕಾರ್ಯಕರ್ತರ ಪಾಲಾಗಿವೆ. ಈ ಹಿಂದೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದರು. ಪ್ರಸ್ತುತ ವರ್ಷದಲ್ಲಿ ರಾಜಕೀಯ ಸೇರಿಕೊಂಡು ನಿಜವಾದ ಕುರಿಗಾರರಿಗೆ ಸಹಾಯಧನ ಸಿಗದಂತಾಗಿದೆ.

ಸದಾ ಕುರಿಗಾರರ ಪರವಿದ್ದೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಪ್ರಸ್ತುತ ವರ್ಷದಲ್ಲಿ ಕುರಿಗಾರರಿಗೆ ಅನ್ಯಾಯ ಎಸಗಿದ್ದಾರೆ.ಕುರಿಗಾಹಿಗಳ ದೌರ್ಜನ್ಯಗಳು ಕೂಡ ಹಲವು ಪ್ರದೇಶಗಳಲ್ಲಿ ನಡೆಯುತ್ತಿದ್ದು, ದೌರ್ಜನ್ಯ ಕಾಯ್ದೆ ಕೂಡ ಕಾಗದ ರೂಪದಲ್ಲಿದೆಯೆ ಹೊರತು ಜಾರಿಗೆ ಬಾರದೆ ಇರುವುದು ದುರದೃಷ್ಟಕರ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿಸಲ್ಪಟ್ಟ ಸಹಕಾರಿ ಕುರಿ ಸಹಕಾರಿ ಸಂಘಗಳು ಏಕೆ ಬೇಕು? ಎಲ್ಲವನ್ನು ಸರಕಾರ ಶಾಸಕರ ಅಧೀನದಲ್ಲಿ ಕೊಡುತ್ತಿರುವಾಗ ಸಂಘಗಳು ಏಕೆ ಬೇಕು?. ರಾಜ್ಯ ನಿಗಮದ ಅಧ್ಯಕ್ಷರು ಅಧಿಕಾರರೇತರರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಶಾಸಕರಿಗೆ ಆಯ್ಕೆ ಅಧಿಕಾರ ಕೊಟ್ಟಾಗ ತಮ್ಮ ಬೆಂಬಲಿಗರಿಗೆ ಹಂಚಿ ಕೊಡುತ್ತಾರೆ. ಇನ್ನು ಕುರಿಗಾಹಿಗಳಿಗೆ ಯಾವುದೇ ಸೌಲಭ್ಯಗಳು ಸಿಗದೇ ಇರಬಹುದು ಎನ್ನುವ ಅನುಮಾನ ಕಾಡುತ್ತಿದೆ.

ಮೌನ ವಹಿಸಿದ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ

ಕುರಿಗಾರರ ಹಿತ ಕಾಪಾಡಲೆಂದು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಯನ್ನು ರಚಿಸಲಾಯಿತು. ಮುಖ್ಯಮಂತ್ರಿಗಳ ಕನಸಾಗಿದ್ದ ಈ ಮಹಾಮಂಡಳಿಯ ಅಧ್ಯಕ್ಷರು ಮತ್ತು ನಿರ್ದೇಶಕರು ಮೌನ ವಹಿಸಿದ್ದಾರೆ. ಶಾಸಕರಿಗೆ ಆಯ್ಕೆ ಅಧಿಕಾರ ಕೊಟ್ಟಿರುವುದನ್ನು ಪ್ರತಿಭಟಿಸದೆ ಇರುವುದು ಕಳವಳಕಾರಿ ವಿಷಯ. ಮಾಜಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಹಾಮಂಡಳಿ ಅಧ್ಯಕ್ಷ ಪಂಡಿತರಾವ್ ಚಿದ್ರಿ ಹಾಗೂ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ನಿರ್ದೇಶಕರಾದ ಶಾಂತಗೌಡ ನಾಗನಟಗಿ, ಶ್ರೀನಿವಾಸ ಏಗನೂರು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಮಹಾಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ರಾಜ್ಯದ ಇತರ ನಿರ್ದೇಶಕರು ಮೌನ ವಹಿಸಿದ್ದಾರೆ. ಕುರಿಗಾರರ ಹಿತ ಕಾಪಾಡುವುದಕ್ಕಾಗಿ ನಿರ್ಮಾಣವಾದ ಮಹಾಮಂಡಳ ಶಾಸಕರ ಆಯ್ಕೆಗೆ ಸಮ್ಮತಿಸಿದಂತೆ ಕಾಣುತ್ತಿದೆ. ಇದರಿಂದಾಗಿ ಕುರಿಗಾರರ ಹಿತ ಕಾಪಾಡುವವರು ಯಾರು ಎನ್ನುವ ಪ್ರಶ್ನೆ ರಾಜ್ಯದಲ್ಲಿ ಉದ್ಭವವಾಗಿದೆ ?.