ಶಹಪುರ,
ಶಹಾಪುರ ನಗರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ರವಿವಾರದಂದು ಶಾರದಹಳ್ಳಿ ಗ್ರಾಮದ 13 ವರ್ಷ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ರಸ್ತೆಯ ಬದಿಯಲ್ಲಿ ಎಸೆದು ಹೋದ ಘಟನೆಗೆ ಸಂಬಂಧಿಸಿದಂತೆ ಇಂದು ತಾಲೂಕು ಕುರುಬ ಸಮಾಜದ ವತಿಯಿಂದ ಆರೋಪಿಗಳನ್ನು ಬೇಗನೆ ಬಂಧಿಸುವಂತೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರನ್ನು ಪೊಲೀಸ್ ಇಲಾಖೆಯವರು ಇದುವರೆಗೆ ಬಂಧಿಸಿಲ್ಲ. ನಾಳೆಯೊಳಗೆ ಬಂಧಿಸದಿದ್ದರೆ ಸಮಾಜದ ವತಿಯಿಂದ ತಾಲೂಕಿನಾದ್ಯಂತ ಪ್ರತಿಭಟನೆಗಿಳಿಯಲಾಗುವುದು. ಕಾಡಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಕುರಿಗಾಯಿಗಳ ಮೇಲೆ ಈ ರೀತಿಯ ದೌರ್ಜನ್ಯಗಳು ಜಿಲ್ಲೆಯಾದ್ಯಂತ ಪದೇಪದೇ ನಡೆಯುತ್ತಿವೆ. ಸರಕಾರ ಕುರಿಗಾರರ ದೌರ್ಜನ್ಯ ಕಾಯ್ದೆ ಜಾರಿಗೆ ತಂದಿದ್ದು ಅದರಡಿ ಕೇಸ್ ದಾಖಲಿಸಿ ಅತ್ಯಾಚಾರಕ್ಕೆ ಯತ್ನಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಸಮಾಜದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಯಲ್ಲಪ್ಪ ನರಿ, ಶರಭಣ್ಣ ರಸ್ತಾಪುರ, ಮಾಳಿಂಗರಾಯ ಮಂಡಗಳ್ಳಿ, ಧರ್ಮಣ್ಣ ಜಂಗಳಿ, ಕುರಿ ಮಹಾಮಂಡಳಿ ರಾಜ್ಯ ನಿರ್ದೇಶಕ ಶಾಂತಗೌಡ ನಾಗನಟಗಿ, ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಯಪ್ಪ ಚಲುವಾದಿ, ರವಿ ರಾಜಪುರ,ಮಹೇಶ ರಸ್ತಾಪುರ, ಮಲ್ಲನಗೌಡ ತಿಪ್ಪನಹಳ್ಳಿ, ಬಲಭೀಮ ಮಡ್ನಾಳ,ಸೀನುನಾಸಿ, ಭೀಮರಾಯ ಭಂಡಾರಿ, ಬಸ್ಸು ಹಳಿಸಗರ, ಗೋಪಿ ಹುಲ್ಕಲ್, ಮುನಿಯಪ್ಪಗೌಡ ನಾಗನಟಗಿ, ಜಗ್ಗು ವಗ್ಗನ್ನವರ, ನಿಂಗಣ್ಣ ನಾಗನಟಗಿ, ಬೀರಲಿಂಗ ಪೂಜಾರಿ ಸೇರಿದಂತೆ ಶಾರದಳ್ಳಿ ಗ್ರಾಮದ ಮಹಿಳೆಯರು ಗ್ರಾಮಸ್ಥರು ಇದ್ದರು.
ಕುರುಬರು ಅಸಹಯಕರಲ್ಲ. ಸಮಾಜದವರ ಮೇಲೆ ಈ ರೀತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನೆ ಇರುವುದಿಲ್ಲ. ಕಾನೂನಾತ್ಮಕವಾಗಿ ಯಾವುದೇ ರಾಜಕೀಯ ಹೆದರಿಕೆ ಇಲ್ಲದೆ ಪೊಲೀಸರು ತನಿಖೆ ಕೈಗೊಂಡು ಅತ್ಯಾಚಾರ ಯತ್ನಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಯಲ್ಲಪ್ಪ ನರಿ ಆಗ್ರಹಿಸಿದರು.