ಕನಕ ವಿಚಾರ ಮಂಥನ  ೧೯ : ಕನಕದಾಸರು ಚಿತ್ರಿಸಿದ ಜನಪದರ ದೈವ ಹೆಮ್ಮೈಯ್ಯ ಗಣಪತಿ

ಕನಕ ವಿಚಾರ ಮಂಥನ  ೧೯ : ಕನಕದಾಸರು ಚಿತ್ರಿಸಿದ ಜನಪದರ ದೈವ ಹೆಮ್ಮೈಯ್ಯ ಗಣಪತಿ

 ಮುಕ್ಕಣ್ಣ ಕರಿಗಾರ

     ಶಿವಪುತ್ರನಾದ ಗಣಪತಿಯು ದ್ರಾವಿಡರ ದೇವತೆ,ನೆಲಮೂಲ ಸಂಸ್ಕೃತಿಯ ದೇವರು.ರೈತರಿಂದ ಪೂಜೆಗೊಳ್ಳುತ್ತಿದ್ದ ಮಣ್ಣಿನಮಗನವನು.ಶೂದ್ರ ಕುರುಬ ಸಮುದಾಯದಿಂದ ಬಂದ ಕನಕದಾಸರು ಗಣಪತಿಯನ್ನು ಶೂದ್ರರ,ಜನಪದರ ದೈವವನ್ನಾಗಿ ಚಿತ್ರಿಸಿದ್ದಾರೆ ‘ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ’ ಕೀರ್ತನೆಯಲ್ಲಿ.

ಈ ಕೀರ್ತನೆಯಲ್ಲಿ ಕನಕದಾಸರು ಗಣಪತಿಯನ್ನು ಬಣ್ಣಿಸುವುದು — ಹೆಮ್ಮೈಯ್ಯ,ಮೋರೆಕಪ್ಪಿನ,ಮೊರದಗಲ ಕಿವಿಯುಳ್ಳ,ಮುರಿದಿಟ್ಟ ಚಂದ್ರನ,ಉಟ್ಟದಟ್ಟಿಯು,ಬಿಗಿದುಟ್ಟ ಚಲ್ಲಣದ,ಹೊಟ್ಟೆಯಗಣನಾಥ,ಭಾಷಿಗ ಎನ್ನುವ ಜನಪದಮೂಲದ ಕನ್ನಡ ಸಂಸ್ಕೃತಿಯ ಗುಣವಿಶೇಷಣಗಳಿಂದ.ಸಂಸ್ಕೃತ ಭಾಷೆಯನ್ನು ಕನ್ನಡೀಕರಿಸಿದ್ದಲ್ಲದೆ ಸಂಸ್ಕೃತ ನುಡಿಯನ್ನಾಡುವ ಜನರ ಸಂಸ್ಕೃತಿಯೇ ಶ್ರೇಷ್ಠ ಎನ್ನುವವರ ಪ್ರತಿಷ್ಠೆಗೆ ಸೆಡ್ಡುಹೊಡೆದು ಕನ್ನಡಿಗರ,ಕನ್ನಡಗಣಪನನ್ನು ಚಿತ್ರಿಸಿದ್ದಾರೆ ಕನಕದಾಸರು.

‘ ಹೆಮ್ಮೈಯ್ಯ’ ಎಂದರೆ ಹಿರಿದಾದ ಮೈಯುಳ್ಳವನು ಎಂದರ್ಥ.ಸಂಸ್ಕೃತದಲ್ಲಿ ಗಣಪತಿಯನ್ನು’ ಲಂಬೋದರ’ ಅಂದರೆ ದೊಡ್ಡಹೊಟ್ಟೆಯವನು ಎಂದು ಕರೆಯಲಾಗುತ್ತದೆ. ಸಂಸ್ಕೃತದ ಲಂಬೋದರನೇ ಕನಕದಾಸರು ಚಿತ್ರಿಸಿದ ಕನ್ನಡದ ಹೆಮ್ಮೈಯ್ಯ ಗಣನಾಥನು.ಗಣಪತಿಯು ಬ್ರಹ್ಮಾಂಡವನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡ ವಿರಾಟ್ ಪುರುಷ ಎನ್ನುವ ಕಾರಣದಿಂದ ‘ ಲಂಬೋದರ,ಮಹೋದರ ಎಂದು ಬಣ್ಣಿಸಲ್ಪಟ್ಟ ಗಣಪತಿಯ ಸತ್ತ್ವ-ತತ್ತ್ವದೊಂದಿಗೆ ‘ಹೆಮ್ಮೈಯ್ಯಗಣನಾಥ’ ನನ್ನಾಗಿ ಕನ್ನಡೀಕರಣಗೊಳಿಸಿದ್ದಾರೆ ಕನಕದಾಸರು.

ಕನಕದಾಸರು ಗಣಪತಿಯನ್ನು ‘ ಮೋರೆಕಪ್ಪಿನಭಾವ’ ಎಂದು ಕರೆದಿರುವುದು ವಿಶೇಷವಾದುದು.ದ್ರಾವಿಡರು,ಶೂದ್ರರು ಸಹಜವಾಗಿ ಕಪ್ಪುಬಣ್ಣದವರು.ಪರಿಶ್ರಮ ಜೀವಿಗಳು ಕಷ್ಟಪಟ್ಟು ದುಡಿಯುವ ಕಾಯಕಜೀವಿಗಳಾಗಿದ್ದುದರಿಂದ ಮತ್ತು ಕಾಯಕದಲ್ಲಿಯೇ ಅವರು ಸುಖ,ಸಂತೃಪ್ತಿಯನ್ನು ಕಾಣುವವರಾದುದರಿಂದ ದೇಹದ ಚೆಲ್ವು,ಸೌಂದರ್ಯರಕ್ಷಣೆಯತ್ತ ಗಮನಿಸುವುದಿಲ್ಲವಾಗಿ ಅವರ ಮೈಬಣ್ಣ ಕಪ್ಪು ಇರುವುದು ಸಹಜ.ಗಣಪತಿಯು ‘ಕಪ್ಪುಮುಖದವನು’ ಎಂದು ಬಣ್ಣಿಸುವ ಮೂಲಕ ಕನಕದಾಸರು ಗಣಪತಿಯನ್ನು ನೆಲಮೂಲ ಸಂಸ್ಕೃತಿಯ, ಶೂದ್ರರ,ಜನಪದರ ದೇವರನ್ನಾಗಿ ಚಿತ್ರಿಸಿದ್ದಾರೆ.’ ಶೂರ್ಪಕರ್ಣ’ ನಾದ ಗಣಪತಿಯನ್ನು ಕನಕದಾಸರು ‘ಮೊರದಗಲಕಿವಿಯುಳ್ಳವನು’ ಎಂದು ಬಣ್ಣಿಸಿ ದೇಸಿ ಸಂಸ್ಕೃತಿಯ ಸಹಜತೆಯನ್ನು ಎತ್ತಿಹಿಡಿದಿದ್ದಾರೆ.ಜೋಳ,ಅಕ್ಕಿಗಳನ್ನು ತೂರುವ ಮೊರವು ಅಗಲವಾಗಿರುತ್ತದೆ. ಅಂತಹ ಅಗಲವಾದ ,ವಿಸ್ತಾರವಾದ ಕಿವಿಯುಳ್ಳವನಾದ್ದರಿಂದ ಗಣಪತಿಯು ಮೊರದಂತಹ ಕಿವಿಯವನು.ಕನಕದಾಸರು ಗಣಪತಿಯನ್ನು ‘ಮೊರದಂಥಕಿವಿಯವನು’ ಎಂದು ವರ್ಣಿಸುವ ಮೂಲಕ ಗಣಪತಿಯ ವಿಶೇಷಗುಣದತ್ತ ನಮ್ಮ ಗಮನಸೆಳೆದಿದ್ದಾರೆ.ಮೊರವು ಜೋಳ ಅಕ್ಕಿ ಸೇರಿದಂತೆ ದವಸ ಧಾನ್ಯಗಳಲ್ಲಿ ಸೇರಿಕೊಂಡ ಕಸ ಕಡ್ಡಿ ಹೊಲಸನ್ನು ತೂರಿ ಹಸನು ಮಾಡುತ್ತದೆ,ದವಸ ಧಾನ್ಯಗಳನ್ನು ಸ್ವಚ್ಛಗೊಳಿಸುತ್ತದೆ.ಮೊರದಗಲ ಕಿವಿಯುಳ್ಳ ಗಣಪತಿಯು ಒಳ್ಳೆಯ ಶಬ್ದಗಳನ್ನು ಮಾತ್ರ ಕೇಳುತ್ತಾನೆಯೇ ಹೊರತು ಕೆಟ್ಟನುಡಿಗಳನ್ನು ಕೇಳಲಾರನು.ಅಂದರೆ ದುಷ್ಕೃತ್ಯಗಳಿಗೆ ಗಣಪತಿಯ ಬೆಂಬಲವಿಲ್ಲ ಎನ್ನುವುದು ಈ ಬಣ್ಣನೆಯ ತಾತ್ಪರ್ಯ.ಸಣ್ಣಕಿವಿಗಳು ತೀರಸನಿಹದ,ಹತ್ತಿರದ ಶಬ್ದವನ್ನು ಮಾತ್ರ ಗ್ರಹಿಸಬಲ್ಲವು.ದೊಡ್ಡಕಿವಿಗಳು ದೂರದ ಶಬ್ದವನ್ನು ಸಹ ಕೇಳಬಲ್ಲವು.ಗಣಪತಿಯು ಮೊರದಂಥ ಕಿವಿಗಳನ್ನು ಉಳ್ಳವನಾದ್ದರಿಂದ ತನ್ನ ಭಕ್ತರು ಎಷ್ಟೇ ದೂರದಲ್ಲಿ ಇರಲಿ ಅವರ ಮೊರೆಯನ್ನು ಕೇಳಬಲ್ಲವನು ಎನ್ನುವ ಅರ್ಥದಲ್ಲಿ ಗಣಪತಿಯು ‘ ಮೊರದಗಲ ಕಿವಿಯುಳ್ಳ’ ವನು.

‘ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ’ ಎಂದು ಗಣಪತಿಯನ್ನು ಬಣ್ಣಿಸುವ ಕನಕದಾಸರು ಶಿವಸುತನಾದ ಗಣಪತಿಯು ಚಂದ್ರನ ಅಹಂಕಾರವನ್ನು ಭಂಗಮಾಡಿದ ಪ್ರಸಂಗವನ್ನು ನೆನಪಿಸಿದ್ದಾರೆ.’ತ್ರಯಂಬಕಪುತ್ರ’ ನೇ ಇಲ್ಲಿ’ ಮೂರು ಕಣ್ಣನ ಸುತ’ ಅಂದರೆ ‘ಮುಕ್ಕಣ್ಣಶಿವ’ ನ ಮಗನಾಗಿದ್ದಾನೆ.ಶಿವನು ಸೂರ್ಯ,ಚಂದ್ರ ಮತ್ತು ಅಗ್ನಿಯರನ್ನು ತನ್ನ ಮೂರು ಕಣ್ಣುಗಳನ್ನಾಗಿ ಉಳ್ಳವನಾದ್ದರಿಂದ ಅವನು ತ್ರಯಂಬಕ. ಗಣಪತಿಯು ಭಕ್ತರ ಮನೆಗಳಲ್ಲಿ ಹೊಟ್ಟೆತುಂಬ ಉಂಡು ಬರುತ್ತಿದ್ದಾಗ ತುಂಬಿದ ಹೊಟ್ಟೆಯ ಗಣಪನ ಭಾರವನ್ನು ಹೊರಲಾರದೆ ತತ್ತರಿಸುತ್ತಿದ್ದ ಅವನ ವಾಹನ ಇಲಿಯು ಮಾರ್ಗದಲ್ಲಿ ಸರ್ಪವು ಎದುರಾಗಿ ಬರಲು ಹೆದರಿ,ಓಡಿ ಹೋಗುತ್ತದೆ.ಇದರಿಂದ ಗಣಪತಿಯು ಆಯತಪ್ಪಿ ನೆಲಕ್ಕೆ ಬೀಳುವನು.ಗಣಪತಿಯು ಬಿದ್ದುದನ್ನು ಕಂಡ ಚಂದ್ರನು ನಗುವನು.’ ಬಿದ್ದಪೆಟ್ಟಿಗಿಂತಲೂ ನಕ್ಕ ಪೆಟ್ಟು ಹೆಚ್ಚಿನದಲ್ಲವೆ?’. ತಾನು ಬಿದ್ದುದನ್ನು ನೋಡಿ ನಕ್ಕ ಚಂದ್ರನನ್ನು ಗಣಪತಿಯು ಕ್ಷಯರೋಗಿಯಾಗು ಎಂದು ಶಪಿಸುವನು.ತಪ್ಪಿನ ಅರಿವಾದ ಚಂದ್ರನು ಗಣಪತಿಯ ಬಳಿ ಸಾರಿ ವಿನಯದಿಂದ ಕೈಮುಗಿದು ಶಾಪಪರಿಹಾರ ಕೇಳಲಾಗಿ ಪ್ರಸನ್ನನಾದ ಗಣಪತಿಯು ‘ ನನ್ನ ಶಾಪವನ್ನು ಶಿವನು ಮಾತ್ರ ಪರಿಹರಿಸಬಲ್ಲನಾದ್ದರಿಂದ ನೀನು ಪ್ರಭಾಸಕ್ಷೇತ್ರಕ್ಕೆ ಹೋಗಿ ಶಿವನನ್ನು ಕುರಿತು ತಪಸ್ಸು ಮಾಡು.ಶಿವನು ಪ್ರಸನ್ನನಾಗಿ ಪ್ರತ್ಯಕ್ಷನಾಗಿ ನಿನ್ನನ್ನು ಶಾಪಮುಕ್ತನನ್ನಾಗಿಸುವನು’ ಎಂದು ವಿಶಾಪನುಡಿಯನ್ನಾಡುವನು.ಗಣಪತಿಯ ಆದೇಶದಂತೆ ಚಂದ್ರನು ಪ್ರಭಾಸಕ್ಷೇತ್ರದಲ್ಲಿ ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸಿ ಪ್ರತ್ಯಕ್ಷನಾದ ಶಿವನಿಂದ ಶಾಪವಿಮೋಚನೆ ಪಡೆಯುವನು.ಚಂದ್ರನು ಶಿವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿದ ಪ್ರಭಾಸಕ್ಷೇತ್ರವೇ ಸೋಮನಾಥಪುರವಾಗಿದ್ದು ಚಂದ್ರನಿಂದ ಪೂಜೆಗಾಗಿ ಪ್ರತಿಷ್ಠಾಪಿಸಲ್ಪಟ್ಟ ಲಿಂಗವೇ ಸೋಮನಾಥ ಜ್ಯೋತಿರ್ಲಿಂಗವು.ಚೌತಿಯ ದಿನ ಚಂದ್ರನ ದರ್ಶನ ಮಾಡಿ,ಚಂದ್ರನ ಶಾಪಕ್ಕೊಳಗಾಗುವವರು ಸೋಮನಾಥ ಜ್ಯೋತಿರ್ಲಿಂಗ ದರ್ಶನ ಪಡೆಯಬೇಕು ಎನ್ನುವ ನಂಬಿಕೆಯುಂಟು.ಚಂದ್ರನ ‘ಅಹಂಕಾರಭಂಗ’ , ‘ ಗರ್ವನಿರಸನ’ ಮಾಡಿದ ಕ್ರಿಯೆಯೇ ‘ ಮುರಿದಿಟ್ಟ ಚಂದ್ರನ’ ಎನ್ನುವ ಗಣಪತಿಯ ನಿಗ್ರಹಾನುಗ್ರಹ ಸಾಮರ್ಥ್ಯವು.

ಕನಕದಾಸರು ಗಣಪತಿಯು ‘ ದಟ್ಟಿಯನ್ನು ಉಟ್ಟಿದ್ದಾನೆ’ ಮತ್ತು ಚಲ್ಲಣವನ್ನು ಬಿಗಿದು ಕಟ್ಟಿದ್ದಾನೆ’ ಎಂದು ಬಣ್ಣಿಸುತ್ತಾರೆ.ಇದು ದೇಸೀಯ ಉಡುಗೆ ತೊಡುಗೆಗಳ ಬಣ್ಣನೆ.ದಟ್ಟಿಯು ಸೊಂಟವಸ್ತ್ರವಾದರೆ ಚಲ್ಲಣವು ಒಳಗೆ ಧರಿಸುವ ಚಡ್ಡಿಯು.ಇದು ಕೂಡ ಜನಪದ ಸಂಸ್ಕೃತಿಯ ಜನಜೀವನದ ಬಣ್ಣನೆಯೇ.ಶ್ರಮಜೀವಿಗಳು ಪಾದದವರೆಗೆ ಇಳಿಬೀಳುವ ಶುಭ್ರಬಟ್ಟೆಗಳನ್ನು ಉಡಲಾರರು.ಸೊಂಟಮುಚ್ಚುವಷ್ಟು ಬಟ್ಟೆಯಾದರೆ ಸಾಕು ಅವರಿಗೆ.ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಉಟ್ಟದಟ್ಟಿಯು ಕಳಚಿಬೀಳಬಹುದು ಎನ್ನುವ ಕಾರಣದಿಂದ ಒಳಗೆ ಬಿಗಿದುಟ್ಟ ಚಲ್ಲಣವನ್ನು ಧರಿಸುತ್ತಾರೆ.ಹಿಂದೆ ಒಳ ಉಡುಪು ಆದ ಸಡಿಲಬಟ್ಟೆಯ ಚಡ್ಡಿಗೆ ಲಾಡಿ ಅಂತ ದಾರದ ಪಟ್ಟಿಯನ್ನು ಪೋಣಿಸಿ ಹೊಲೆಯುತ್ತಿದ್ದರು.ಲಾಡಿಯನ್ನು ಎಳೆದು ಬಿಗಿಯಾಗಿ ಸೊಂಟಕ್ಕೆ ಕಟ್ಟುತ್ತಿದ್ದುದರಿಂದ ಅದು ಕಳಚಿಬೀಳುತ್ತಿರಲಿಲ್ಲ.ಕನಕದಾಸರು ಸ್ವಯಂ ಶೂದ್ರಸಂಸ್ಕೃತಿಯಿಂದ ಎದ್ದು ಬಂದ ಸಂತರಾದ್ದರಿಂದ ಅವರು ಬಾಲ್ಯ,ಯೌವ್ವನದ ಕಾಲದಲ್ಲಿ ತಾವು ಉಟ್ಟು ತೊಟ್ಟ ಉಡುಗೆ ತೊಡುಗೆಗಳನ್ನು ಗಣಪತಿಗೆ ಉಡಿಸುವ,ತೊಡಿಸುವ ಮೂಲಕ ಅವನನ್ನು ಜನಪದರದೈವವನ್ನಾಗಿಸಿದ್ದಾರೆ.’ ಹೊಟ್ಟೆಯ ಗಣಪತಿ’ ಎನ್ನುವುದು ಗಣಪತಿಯು ರೈತರ,ಬಡವರ ಜೀವನಾಧಾರ ದೇವತೆಯಾದ್ದರಿಂದ ಎಲ್ಲರಿಗೆ ಅನ್ನವನ್ನಿತ್ತು ಸಲಹುವ ದೇವನಾದ್ದರಿಂದ ‘ಉದರ’ ವನ್ನು ಹೊತ್ತ’ ಒಡಲುಳ್ಳಜೀವರು’ ಗಳನ್ನು ಪೊರೆಯುವವನಾದ್ದರಿಂದ ಅವನು ಹೊಟ್ಟೆಯ ಗಣನಾಥನು.

‌ ಕನಕದಾಸರು ಗಣಪತಿಯನ್ನು ‘ ಭಾಷಿಗ’ ಎಂದು ಬಣ್ಣಿಸಿದ್ದಾರೆ. ‘ಭಾಷಿಗ ‘ಎಂದರೆ ಸಕಲ ಶಾಸ್ತ್ರಗಳನ್ನು ಬಲ್ಲವನ್ನು ಎಂಬುದು ಶಾಬ್ದಿಕ ಅರ್ಥವಾದರೆ ಇಲ್ಲಿ ಗಣಪತಿಯು ಜನಪದಸಂಸ್ಕೃತಿಯ ಗುಣಸ್ವಭಾವ ವಿಶೇಷವನ್ನು ಪ್ರತಿನಿಧಿಸುತ್ತಿದ್ದಾನೆ.ಶೂದ್ರರು,ದ್ರಾವಿಡರು,ಜನಪದರು ಕೊಟ್ಟಭಾಷೆಗೆ ತಪ್ಪಿನಡೆಯದ ವಚನವ್ರತಿಗಳು.ಎರಡನ್ನೆಣಿಸದೆ ಕೊಟ್ಟಭಾಷೆಯಂತೆ ನಡೆದುಕೊಳ್ಳುತ್ತಾರೆ ತಳಸಮುದಾಯಗಳ ಜನರು.ಇಲ್ಲಿ ಭಾಷಿಗ ಎಂದರೆ ಭಾಷೆಯನ್ನು ಬಲ್ಲವನು,ಕೊಟ್ಟಭಾಷೆಯನ್ನು ಪಾಲಿಸುವವನು ಎಂದರ್ಥ.ಜನಪದರು ಭಾವನೆಗಳ ಸೂಕ್ಷ್ಮವನ್ನು ಗ್ರಹಿಸಬಲ್ಲರು.ತಮ್ಮೊಡನೆ ಸಂವಾದಿಸುವ ವ್ಯಕ್ತಿ ತಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾನೆ ಎನ್ನುವುದನ್ನು ಸುಲಭವಾಗಿ ಗ್ರಹಿಸಬಲ್ಲವರಾದ್ದರಿಂದ,ಮತ್ತೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲವರಾದ್ದರಿಂದ ಅವರು ‘ ಭಾಷಿಗರು’. ಹಾಗೆಯೇ ಕೊಟ್ಟಭಾಷೆಗೆ ತಪ್ಪದಂತೆ ನಡೆದುಕೊಳ್ಳುವ ವಚನನಿಷ್ಠರಾದ್ದರಿಂದ ಜನಪದರು ‘ ಭಾಷಿಗರು’.

ಇಂತಹ ಗುಣವಿಶೇಷಗಳ ಮೂಲಕ ಗಣಪತಿಯನ್ನು ಬಣ್ಣಿಸುವ ಕನಕದಾಸರು ಗಣಪತಿಯನ್ನು ನೆಲಮೂಲದದೈವನನ್ನಾಗಿ,ಜನಪದರ ದೈವವನ್ನಾಗಿ ಚಿತ್ರಿಸಿ ಶೂದ್ರಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದಿದ್ದಾರೆ.

 

      ಕನಕದಾಸರು ಚಿತ್ರಿಸಿದ ನೆಲಮೂಲಸಂಸ್ಕೃತಿಯ ಪ್ರತಿನಿಧಿಯಾದ ಗಣಪತಿಯನ್ನು ಕುರಿತ ಕೀರ್ತನೆ ;

ನಮ್ಮಮ್ಮ ಶಾರದೆ ಉಮಾಮಹೇಶ್ವರಿ/

ನಿಮ್ಮೊಳಗಿಹನ್ಯಾರಮ್ಮ //ಪ//

ಕಮ್ಮಗೋಲನ ವೈರಿಸುತನಾದ ಸೊಂಡಿಲ /

ಹೆಮ್ಮೈಯ್ಯ ಗಣನಾಥನೆ ಅಮ್ಮಯ್ಯ. //ಅ.ಪ //

ಮೋರೆ ಕಪ್ಪಿನ ಭಾವ ಮೊರದಗಲ ಕಿವಿಯುಳ್ಳ /

ಕೋರೆ ದಾಡೆಯವನ್ಯಾರಮ್ಮ //

ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ /

ಧೀರ ತಾ ಗಣನಾಥನೆ ಅಮ್ಮಯ್ಯ. //೧//

ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದ /

ದಿಟ್ಟ ತಾನಿವನ್ಯಾರಮ್ಮ //

ಪಟ್ಟದರಾಣಿ ಪಾರ್ವತಿಯ ಕುಮಾರ /

ಹೊಟ್ಟೆಯ ಗಣನಾಥನೆ ಅಮ್ಮಯ್ಯ //೨//

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ/

ಭಾಷಿಗನಿವನ್ಯಾರಮ್ಮ//

ಲೇಸಾಗಿ ಸುಜನರ ಸಲಹುವ ನೆಲೆಯಾದಿ /

ಕೇಶವನ ದಾಸ ಕಾಣೆ ಅಮ್ಮಯ್ಯ. //೩//

 

              ೧೧.೦೪.೨೦೨೬