
ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಬೀದರ್‌ನಲ್ಲಿ ಏ.11 ಮತ್ತು 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.ಗುರುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್‌ನ ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಅಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮೇಳನ ಉದ್ಘಾಟಿಸುವರು. ವಸ್ತು ಪ್ರದರ್ಶನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಚಾಲನೆ ನೀಡುವರು ಎಂದರು.
ಬಸವಕಲ್ಯಾಣದ ಹಾರಕೂಡ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಪತ್ರಕರ್ತ ವಿಶ್ವೇಶ್ವರ ಭಟ್ ಪ್ರಧಾನ ಭಾಷಣ ಮಾಡುವರು. ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಅದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ವೇದಿಕೆವರೆಗೂ ಕಲಾ ತಂಡಗಳೊಂದಿಗೆ ಸಮ್ಮೇಳನದ ಮೆರವಣಿಗೆ ನಡೆಸಲಾಗುವುದು ಎಂದು ವಿವರಿಸಿದರು.

ಸಮ್ಮೇಳನದಲ್ಲಿ ಪತ್ರಕರ್ತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗುತ್ತಿದೆ. ಈ ಬಾರಿಯೂ ಸಮ್ಮೇಳನದಲ್ಲಿ ಅನೇಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನದ ಮೊದಲ ದಿನ ಮಧ್ಯಾಹ್ನ 2 ಗಂಟೆಗೆ ಗಾಂಧಿ-ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸುವರು. ಸಂಜೆ 3.30ಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ಕುರಿತು 2ನೇ ಗೋಷ್ಠಿ ನಡೆಯಲಿದ್ದು, ಪತ್ರಕರ್ತ ರವೀಂದ್ರ ಭಟ್ ಉದ್ಘಾಟಿಸುವರು. ಸಂಜೆ 5ಕ್ಕೆ ಗಡಿ ಸಮಸ್ಯೆಗಳು ಕುರಿತು ಸಂವಾದ ಮತ್ತು ಸಂಜೆ 5.30ಕ್ಕೆ ಮಾಧ್ಯಮ ಮತ್ತು ಉದ್ಯಮ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

ಏ.12ರಂದು ಬೆಳಿಗ್ಗೆ 9.45ಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಪ್ರತಿನಿಧಿಗಳ ಸಮಾವೇಶ ಮತ್ತು ಸರ್ವ ಸದಸ್ಯರ ಸಭೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮಾಹಿತಿ ಹಕ್ಕು ಮತ್ತು ಪತ್ರಕರ್ತರು ಕುರಿತು 3ನೇ ವಿಚಾರಗೋಷ್ಠಿ ನಡೆಯಲಿದೆ. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಉದ್ಘಾಟಿಸುವರು. ಮತ್ತೋರ್ವ ಆಯುಕ್ತ ಬದ್ರುದ್ದೀನ್ ವಿಷಯ ಪ್ರಸ್ತಾವನೆ ಮಾಡುವರು. ಆಯೋಗದ ಕಲಬುರಗಿ ವಿಭಾಗದ ಆಯುಕ್ತ ಬಿ.ವೆಂಕಟಸಿಂಗ್ ಅವರು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12ಕ್ಕೆ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್, ಡಿಜಟಲೀಕರಣ ಪ್ರಭಾವ ಕುರಿತು ಗೋಷ್ಠಿ ನಡೆಯಲಿದೆ. ಪತ್ರಕರ್ತ ರವಿ ಹೆಗಡೆ ಉದ್ಘಾಟಿಸುವರು ಎಂದರು.ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಇದ್ದರು.

ಸಮ್ಮೇಳನದಲ್ಲಿ ನೂರಕ್ಕೂ ಅಧಿಕ ಪತ್ರಕರ್ತರು ಭಾಗಿ.
“ಸಮ್ಮೇಳನಕ್ಕೆ ಜಿಲ್ಲೆಯಿಂದ ಸುಮಾರು 100ಕ್ಕೂ ಅಧಿಕ ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯ ಪತ್ರಕರ್ತರಾದ ಮಲ್ಲಯ್ಯ ಪೋಲಂಪಲ್ಲಿ, ಸಂಜೀವ ರಾವ್ ಕುಲಕರ್ಣಿ, ಅಮರೇಶ ಹಿರೇಮಠ, ಬಸವರಾಜ ಕಟ್ಟಿಮನಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿಗೆ ಪ್ರದಾನ ಮಾಡಲಾಗುತ್ತಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕೀನ್ ತಿಳಿಸಿದರು.