ಆರ್‌ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭಾರೀ ಅಕ್ರಮ ! ಪಾರದರ್ಶಕತೆ ಇಲ್ಲದೆ ಫಲಿತಾಂಶ ಪ್ರಕಟಣೆ, ಮರು ಪರೀಕ್ಷೆಗೆ ಆಗ್ರಹ 

ರಾಯಚೂರು,,

ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಆರ್ಡಿಸಿಸಿ) ನಲ್ಲಿ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬರುತ್ತಿವೆ.ದಿ.21-11-2025ರಂದು  ಪ್ರಕಟಣೆ ಹೊರಡಿಸಿ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನಂತರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಬರೆದ ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪರೀಕ್ಷೆ ಬರೆದ ಕೆಲವು ದಿನಗಳ ನಂತರ ಕೀ-ಆನ್ಸರ್ ಬಿಡುಗಡೆ ಮಾಡಿದ್ದು ಬಳಿಕ ಲೆಕ್ಕ ಹಾಕಿದ ಅಂಕಗಳು ಮತ್ತು ಅಂತಿಮ ಫಲಿತಾಂಶದಲ್ಲಿ ಪ್ರಕಟವಾದ ಅಂಕಗಳು ಹೊಂದಿಕೆಯಾಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ಅಂಕಪಟ್ಟಿ (ಮಾರ್ಕ್ಸ್ ಲಿಸ್ಟ್) ಪ್ರಕಟಿಸದೇ, ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸದಿರುವುದು ನೇಮಕಾತಿ ಪಾರದರ್ಶಕತೆಗೆ ಧಕ್ಕೆ ತಂದಿದೆ.

ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 18ರ ಪ್ರಕಾರ, ಲಿಖಿತ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ನೀಡಬೇಕಾಗಿದ್ದರೂ, ಅದನ್ನು ಪಾಲನೆಯಾಗಿಲ್ಲ ಎನ್ನಲಾಗಿದೆ. ಇನ್ನೂ, 1:5 ಅನುಪಾತದಲ್ಲಿ ತಾತ್ಕಾಲಿಕ ಅಂಕಗಳನ್ನು ಪ್ರಕಟಿಸಿರುವುದರಲ್ಲಿ ಕೂಡ ಅಕ್ರಮ ಕಂಡುಬಂದಿದ್ದು, ಆಯ್ಕೆ ಪ್ರಕ್ರಿಯೆ ಸರಿಯಾಗಿ ಅನುಸರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೌಲ್ಯಮಾಪನ ವಿಧಾನ ಸ್ಪಷ್ಟವಾಗದೇ, ಫಲಿತಾಂಶ ಪ್ರಕಟಣೆ ಅಪೂರ್ಣವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯ ಸಮಗ್ರ ತನಿಖೆ ನಡೆಸಿ, ದಾಖಲೆಗಳನ್ನು ಮರು ಮೌಲ್ಯಮಾಪನ ನಡೆಸಬೇಕು. ಇಲ್ಲದಿದ್ದರೆ ಸಂಪೂರ್ಣ ನೇಮಕಾತಿಯನ್ನು ರದ್ದುಪಡಿಸಿ ಪರಿಶೀಲಿಸಬೇಕು.ಮರುಪರೀಕ್ಷೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಎಸ್.ಎಂ. ಹಿರೇಮಠ ಆಗ್ರಹಿಸಿದ್ದಾರೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ (ಆಗಸ್ಟ್ 2025) ಪ್ರಕಾರ, ಸಹಕಾರಿ ಬ್ಯಾಂಕುಗಳಲ್ಲಿ ನಿರ್ದೇಶಕರ ಗರಿಷ್ಠ ಅವಧಿ 10 ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈ ನಿಯಮ 1 ಆಗಸ್ಟ್ 2025ರಿಂದ ಜಾರಿಯಲ್ಲಿದೆ. ಮಹಾರಾಷ್ಟ್ರ ಗುಜರಾತ್ ಸೇರಿದಂತೆ ಇತರ ರಾಜ್ಯಗಳು ಈ ನಿಯಮವನ್ನು ಅಳವಡಿಸಿಕೊಂಡಿವೆ. ಆದರೆ ಕರ್ನಾಟಕದಲ್ಲಿ ಕೆಲವೇ ಜನರ ಕಪಿಮುಷ್ಠಿಯಲ್ಲಿರುವ ಡಿಸಿಸಿ ಬ್ಯಾಂಕುಗಳು ಕೇಂದ್ರದ ಆರ್‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ. ಈ ನಿಯಮವನ್ನು ಆರ್ಡಿಸಿಸಿ ಬ್ಯಾಂಕ್‌ನಲ್ಲಿ ಅದನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಈ ಸಂಬಂಧ ಸುತ್ತೋಲೆ ಜಾರಿಯಾಗಿದ್ದರೂ, ಅದನ್ನು ಲೆಕ್ಕಿಸದೆ ನವೆಂಬರ್‌ನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಟೆಂಡರ್ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಅಸಂಬದ್ಧವಾಗಿದೆ ಎಂದು ಆರೋಪಿಸಲಾಗಿದೆ. ಈಗಾಗಲೇ 10, 11, 12 ರಂದು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 1:5  ರಂತೆ ದಾಖಲಾತಿ ಪರಿಶೀಲನೆಗಾಗಿ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಏಪ್ರಿಲ್ 22, 23, 24ರಂದು ಸಂದರ್ಶನ ದಿನಾಂಕ ನಿಗದಿಪಡಿಸಲಾಗಿದೆ ಎನ್ನಲಾಗಿದ್ದು, ಬೇಗ ಕಾತಿ ಪ್ರಕ್ರಿಯೆಯಲ್ಲಿ ಕಾಂಚನದ ಸದ್ದು ಕೇಳಿ ಬರುತ್ತಿದೆ ಎಂದು ಸಂಶಯ ವ್ಯಕ್ತವಾಗುತ್ತಿದೆ.
ಇದು ಕೇಂದ್ರ ಸರ್ಕಾರದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದಂತಾಗುತ್ತದೆ. ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಕಾಯ್ದೆಯನ್ನು ರಾಜ್ಯ ಸಹಕಾರಿ ಇಲಾಖೆ ಪಾಲಿಸದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

***********
ಆರ್‌ಬಿಐ ನಿಯಮ ಉಲ್ಲಂಘಿಸಿದ ಆಡಳಿತ ಮಂಡಳಿ..
ಪ್ರಸ್ತುತ ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ತೋರಣದಿನ್ನಿ ಸೇರಿದಂತೆ ಕೆಲವು ನಿರ್ದೇಶಕರು 10 ವರ್ಷಕ್ಕಿಂತ ಹೆಚ್ಚು ಅವಧಿಗೆ ಕಾರ್ಯ ನಿರ್ವಹಿಸಿರುವುದಾಗಿ ಆರೋಪಿಸಲಾಗಿದೆ. 2025 ರಲ್ಲಿ ಹೊರಡಿಸಲಾದ ಆರ್‌ಬಿಐ  ನಿಯಮ ಪ್ರಕಾರ ಅನರ್ಹರಾಗಬೇಕಿದ್ದರೂ, ಅವರು ಆರ್ ಡಿ ಸಿ ಸಿ ಬ್ಯಾಂಕಿನಲ್ಲಿ ಆಡಳಿತ ಮುಂದುವರೆಸಿ ನೇಮಕಾತಿ ನಡೆಸಿರುವುದು ಕಾನೂನು ಉಲ್ಲಂಘನೆಯಾಗುತ್ತದೆ ಎನ್ನಲಾಗುತ್ತಿದೆ. ಇದರಿಂದ ನೇಮಕಾತಿಯ ವಿಶ್ವಾಸಾರ್ಹತೆ ಮೇಲೆಯೂ ಗಂಭೀರ ಅನುಮಾನಗಳು ಮೂಡಿವೆ ಹಾಗಾಗಿ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಸ್. ಎಂ. ಹಿರೇಮಠ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *