ಕನಕ ವಿಚಾರ ಮಂಥನ
೧೬
ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ಯುದ್ಧದ ವಿಧ್ವಂಸಕ,ಅನರ್ಥಕಾರಿ ಕೃತ್ಯದ ಮೇಲೆ ಬೆಳಕು ಚೆಲ್ಲಿ ಶಾಂತಿ ಸಾಮರಸ್ಯದ ಅಗತ್ಯವನ್ನು ಪ್ರತಿಪಾದಿಸುವ ಕನಕದಾಸರು ಚಿತ್ರಿಸಿದ ‘ರತಿಯಪ್ರಲಾಪ’ ಪ್ರಸಂಗ
ಮುಕ್ಕಣ್ಣ ಕರಿಗಾರ

ಕನಕದಾಸರು ಹರಿದಾಸ ಪರಂಪರೆಯ ಕಟ್ಟಿಗೆ ಸಿಲುಕಿಯೂ ತಮ್ಮ ವ್ಯಕ್ತಿತ್ವಪ್ರಭೆ ಮಸುಕಾಗದಂತೆ ಕಾಪಿಟ್ಟು,ಕಾಯ್ದುಕೊಂಡ ಪ್ರತಿಭಾವಂತ ಕವಿಗಳು,ಕಟ್ಟುಗಳ ಸಿಲ್ಕಿಗೆ ಸಿಗದ ಸ್ವಾತ್ಮಾಭಿವ್ಯಕ್ತಿಯ ಸಮಾಜ ಸುಧಾರಕರು. ಇತರ ದಾಸರಂತೆ ಕನಕದಾಸರು ಸಂಪ್ರದಾಯಕ್ಕೆ ಶರಣಾಗುವುದಿಲ್ಲ,ಅಲ್ಲದ ಆಚರಣೆಗಳಿಗೆ ಅಂಗೀಕಾರದ ಮುದ್ರೆಯನ್ನೊತ್ತುವುದಿಲ್ಲ.ಮತಕ್ಕಿಂತ ‘ಮತಿ’ ಗೆ ಪ್ರಾಧಾನ್ಯವಿತ್ತ ವಿಚಾರವಂತರವರು.ದೇವತೆಗಳ ಪಕ್ಷವಹಿಸಿ ಮಾತನಾಡುವ ಹರಿದಾಸರ ನಡುವೆ ಕನಕದಾಸರು ಸಮಯ ಸಿಕ್ಕಾಗಲೆಲ್ಲ ತಮ್ಮ ಕಾವ್ಯ ಕೀರ್ತನೆಗಳಲ್ಲಿ ಇಂದ್ರನಾದಿ ದೇವತೆಗಳ ಸ್ವಾರ್ಥಬುದ್ಧಿಯನ್ನು ಖಂಡಿಸಿದ್ದಾರೆ. ಶೃಂಗಾರ ಕಾವ್ಯ ‘ಮೋಹನತರಂಗಿಣಿ’ ಯಲ್ಲಿ ದೇವತೆಗಳನ್ನು ‘ಪಾಪಸ್ಥರು’ ಎಂದು ಸಂಬೋಧಿಸುವ ಮೂಲಕ ಕನದಾಸರು ಪಟ್ಟಭದ್ರರು,ಉಳ್ಳವರ ಕಾಪಟ್ಯಗುಣವನ್ನು ಹೊರಗೆಡಹಿದ್ದಾರೆ.
ಶಿವನನ್ನು ತಪೋವಿಮುಖನನ್ನಾಗಿಸಹೊರಟ ಮನ್ಮಥನು ಶಿವನ ಹಣೆಗಣ್ಣಬೆಂಕಿಗೆ ಸಿಕ್ಕು ಸುಟ್ಟುಬೂದಿಯಾದಾಗ ಗಂಡನನ್ನು ಕಳೆದುಕೊಂಡ ರತಿ ಪ್ರಲಾಪಿಸುವುದು ;
ಪಾಪಕ್ಷಯಕೆಂದು ಗಂಗೆಯೊಳ್ಮಿಂದರೆ
ಪಾಪಿಯ ಮೊಸಳೆ ತಿಂದಂತೆ
ಪಾಪಸ್ಥ ಸುರರಿಂಗೆ ಹಿತಗೈಯ ಬಂದ ಪ್ರಾ
ಣೋಪನನರುಹಿದೆ ನೀನು
ಇಲ್ಲಿ ಉಪಮೆಯ ನಾವಿನ್ಯತೆಯನ್ನು ಗಮನಿಸಬೇಕು.ಪಾಪನಾಶವಾಗಲಿ ಎಂದು ಪಾಪಿಯಾದವನು ಗಂಗಾಸ್ನಾನಕ್ಕೆಂದು ಗಂಗಾನದಿಯಲ್ಲಿ ಮುಳುಗಿದಾಗ ಒಂದು ಮೊಸಳೆ ಅವನನ್ನು ತಿಂದಿತಂತೆ ! ಅಂತೆ ನೀನು ಪಾಪಸ್ಥರಾದ ದೇವತೆಗಳಿಗೆ ಹಿತವನ್ನುಂಟುಮಾಡ ಬಂದು ನಿನ್ನ ಪ್ರಾಣವನ್ನು ಕಳೆದುಕೊಂಡೆಯಲ್ಲ ಅಂದು ಅಳುವ ರತಿಯ ದುಃಖದಲ್ಲಿ ಗಂಡನನ್ನು ಕಳೆದುಕೊಂಡ ನೋವು ಇರುವಂತೆ ತನ್ನ ಗಂಡನ ಸಾವಿಗೆ ಕಾರಣರಾದ ದೇವತೆಗಳ ಬಗ್ಗೆ ರೋಷ,ಆಕ್ರೋಶವಿದೆಯಾದ್ದರಿಂದ ರತಿಯು ದೇವತೆಗಳನ್ನು ‘ ಪಾಪಸ್ಥರು’ ಎಂದು ನಿಂದಿಸುತ್ತಾಳೆ.ಪ್ರಚೋದಿಸಿ,ತನ್ನ ಗಂಡನನ್ನು ಕೊಂದ ಪಾಪಿಗಳು ಎಂದು ದೇವತೆಗಳನ್ನು ಬಯ್ಯುತ್ತಾಳೆ.ರತಿಯ ಬಾಯಿಂದ ಕನಕದಾಸರು ದೇವತೆಗಳು ‘ಪಾಪಸ್ಥರು’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿಯೇ ಆಡಿಸಿದ್ದಾರೆ.ದೇವತೆಗಳ ನೀಚಕೃತ್ಯದ ಬಗ್ಗೆ ಕನಕದಾಸರಲ್ಲಿ ಬೇಸರವಿದೆ.
ಸೃಷ್ಟಿಕರ್ತನಾದ ಬ್ರಹ್ಮನು ಸತ್ತ್ವ, ರಜ ಮತ್ತು ತಮೋಗುಣಗಳ ಪ್ರತಿನಿಧಿಗಳನ್ನಾಗಿ ದೇವತೆಗಳು,ಮನುಷ್ಯರು ಮತ್ತು ರಾಕ್ಷಸರನ್ನು ಸೃಷ್ಟಿಸಿದನು ಎನ್ನುವುದು ಭಾರತೀಯ ಪುರಾಣಗಳ ನಂಬಿಕೆ.ದೇವತೆಗಳು ಸತ್ತ್ವಗುಣಶೀಲರು,ಮನುಷ್ಯರು ಚಂಚಲಮನಸ್ಕರಾದ ರಜೋಸ್ವಭಾವದವರು ಮತ್ತು ರಾಕ್ಷಸರು ಕೆಟ್ಟಗುಣಗಳ ಅಸುರೀಪ್ರವೃತ್ತಿಯವರು ಎನ್ನುವುದು ಜನರ ನಂಬಿಕೆ.ಆದರೆ ದೇವತೆಗಳು ಸತ್ತ್ವಗುಣಶೀಲರಲ್ಲದ ಅವಗುಣಿಗಳು,ಸ್ವಾರ್ಥಿಗಳು ಮತ್ತು ಲಂಪಟರು ಎನ್ನುವುದು ಹಲವು ಸಂದರ್ಭಗಳಲ್ಲಿ ದೃಢಪಟ್ಟಿದೆ.ಇಂದ್ರನು ಋಷಿಪತ್ನಿಯಾದ ಅಹಲ್ಯೆಯನ್ನು ಮೋಹಿಸಿ ಶಾಪಗ್ರಸ್ತನಾದ.ಚಂದ್ರನು ತನ್ನ ಮಡದಿಯರಾದ ಇಪ್ಪತ್ತೇಳು ಜನದಕ್ಷಸುತೆಯರನ್ನು ಸಮಾನವಾಗಿ ಕಾಣದೆ ಅತಿಶಯರೂಪವತಿಯಾದ ರೋಹಿಣಿಯಲ್ಲೇ ಆಸಕ್ತನಾಗಿ ದಕ್ಷನಿಂದ ಶಪಿಸಲ್ಪಟ್ಟನು ಮಾತ್ರವಲ್ಲ ,ಗುರುಪತ್ನಿಯನ್ನು ಮೋಹಿಸಿ ಮಾಡಬಾರದ ಕೆಲಸ ಮಾಡಿದ.ಸೂರ್ಯನು ತನ್ನ ಮೊದಲಮಗ ಯಮನ ಪಕ್ಷವಹಿಸಿ ಶನಿಗೆ ಒದ್ದು ಶನಿಯು ಅಂಗವಿಕಲನಾಗಲು ಕಾರಣನಾದ,ವಾಯುದೇವನು ಅಂಜನೆಯ ಸೌಂದರ್ಯಕ್ಕೆ ಮನಸೋತು ಅವಳನ್ನು ಭೋಗಿಸಿದ್ದರಿಂದ ಮಾರುತಿಯ ಜನನವಾಯಿತು. ಕಡುಲೋಭಿ ಕುಬೇರನು ಬಡವರತ್ತ ಕಣ್ಣೆತ್ತಿ ನೋಡದ ನಿಷ್ಕರುಣಿ.ಹೀಗೆ ಸದ್ಗುಣವಂತರು ಎಂದು ಕೊಂಡಾಡಲ್ಪಡುವ ದೇವತೆಗಳ ದುರ್ಗುಣಗಳ ಪಟ್ಟಿ ಮಾಡಬಹುದು. ಇಂದ್ರನಾದಿ ದೇವತೆಗಳ ಸ್ವರ್ಗವು ಸುಖೋಪಭೋಗಗಳ ಲೋಕ.ಸದಾ ಸುಖದಿಂದ ಇರಬಯಸುವ ಇಂದ್ರನು ಮತ್ತೆ ಯಾರಾದರೂ ತನ್ನ ಪದವಿಯನ್ನು ಕಸಿದುಕೊಳ್ಳಬಹುದು ಎಂದು ಬ್ರಹ್ಮ,ವಿಷ್ಣು ಇಲ್ಲವೆ ಶಿವನ ಧ್ಯಾನ ಮಾಡುವ ರಾಕ್ಷಸರನ್ನು, ಋಷಿಗಳನ್ನು ಕಾಡಿ,ಅವರ ತಪೋಭಂಗವನ್ನುಂಟು ಮಾಡಲು ಪ್ರಯತ್ನಿಸಿದ್ದಾನೆ.ಅಂದರೆ ಸ್ವರ್ಗಸುಖವು ತನ್ನೊಬ್ಬನಿಗೇ ಮೀಸಲಿರಬೇಕು ಎನ್ನುವ ಸ್ವಾರ್ಥ,ಸಂಕುಚಿತ ಬುದ್ಧಿ ಇಂದ್ರನದು.ಇಂದ್ರನ ಇಚ್ಛಾನುವರ್ತಿಗಳಾಗಿ ವರ್ತಿಸಿದ್ದಾರೆ ದೇವತೆಗಳು. ಈ ಎಲ್ಲ ಸಂಗತಿಗಳನ್ನು ಬಲ್ಲ ರತಿಯು ಈಗ ತನ್ನ ಗಂಡನ ಸಾವಿಗೆ ಕಾರಣರಾಗುವ ಮೂಲಕ ದೇವತೆಗಳ ಪಾಪ ನೂರ್ಮಡಿಸಿದೆ ಎನ್ನುವಳು.
‘ಪಾಪ’ ಎಂದರೆ ಸುಲಭವಾಗಿ ತೊಡೆದುಕೊಳ್ಳದ ದೋಷಪರಂಪರೆ,ಅವಗುಣರಾಶಿ.ತಿಳಿಯದೆ ಮಾಡಿದ ಪಾಪಕ್ಕೆ ಪರಿಹಾರವುಂಟು,ಪ್ರಾಯಶ್ಚಿತ್ತ ಉಂಟು.ಆದರೆ ತಿಳಿದೂ ಮಾಡುವ ಪಾಪಕ್ಕೆ ಪ್ರಾಯಶ್ಚಿತ್ತವಿಲ್ಲ,ಪರಿಹಾರವಿಲ್ಲ.ದೇವತೆಗಳು ಮನ್ಮಥನ ಸಾವಿಗೆ ಕಾರಣರಾದದ್ದು ಅವರು ತಿಳಿದು ಮಾಡಿದ ಪಾಪ,ಉದ್ದೇಶಪೂರ್ವಕ ಕುಕೃತ್ಯ.ತಾರಕಾಸುರನ ವಧೆಯು ಶಿವಪುತ್ರನಿಂದ ಮಾತ್ರಸಾಧ್ಯ ಎಂದ ಬ್ರಹ್ಮೋಪದೇಶವನ್ನು ಆಲಿಸಿದ ಇಂದ್ರಾದಿ ದೇವತೆಗಳಿಗೆ ಹಿಮಾಲಯದಲ್ಲಿ ತಪೋನಿರತನಾಗಿದ್ದ ವೈರಾಗ್ಯ ಮೂರ್ತಿ ಶಿವನ ಮುಂಗೋಪದಪ್ರಕೋಪಾಗ್ನಿಯ ಪ್ರಭಾವ ತಿಳಿಯದ್ದೇನಲ್ಲ.ಶಿವನು ಸಿಟ್ಟಿನಿಂದ ಮೂರನೇ ಕಣ್ಣನ್ನು ತೆರೆದರೆ ಜಗತ್ತೇ ಸುಟ್ಟುಹೋಗುತ್ತದೆ ಎನ್ನುವ ಅರಿವು ಇದ್ದೂ ದೇವತೆಗಳು ಶಿವನ ತಪೋಭಂಗಕ್ಕೆ ಮನ್ಮಥನನ್ನು ಪುಸಲಾಯಿಸುತ್ತಾರೆ,ಪ್ರೇರೇಪಿಸುತ್ತಾರೆ.ಇದು ಅನರ್ಥಕಾರಿ ಕಾರ್ಯ, ಅಪಾಯಕಾರಿಯಾದ ಕೆಲಸ ಎಂದು ನಿರಾಕರಿಸುವ ಮನ್ಮಥನನ್ನು ‘ದೇವತಾಕಾರ್ಯದಲ್ಲಿ ಲೋಕಕ್ಷೇಮವಡಗಿದೆ.ಲೋಕಕ್ಷೇಮಕ್ಕಿಂತ ಮಿಗಿಲಾದ ಸಾರ್ಥಕವಾದ ಕಾರ್ಯ ನಿನಗೇನಿದೆ? ದೇವತೆಗಳ ಹಿತಕಾಯುವುದರಿಂದ ನೀನು ಕೀರ್ತಿಶಾಲಿಯಾಗುತ್ತಿ.ನಿನಗಲ್ಲದೆ ಶಿವನನ್ನು ತಪೋವಿಮುಖನನ್ನಾಗಿಸುವ ಸಾಮರ್ಥ್ಯ ಬೇರಾರಿಗೂ ಇಲ್ಲ.ಅಂತಹ ವಿಶೇಷ ಸಾಮರ್ಥಪಡೆದ ನೀನೀಗ ದೇವತೆಗಳ ಹಿತಕಾಯಬೇಕು’ ಎಂಬಿತ್ಯಾದಿ ಮಾತುಗಳಿಂದ ಹೊಗಳಿ ಮನ್ಮಥನನ್ನು ಉಬ್ಬುವಂತೆ,ಕೊಬ್ಬುವಂತೆ ಮಾಡಿದರು ಇಂದ್ರನ ಮುಂದಾಳ್ತನದ ದೇವತೆಗಳು. ಮನ್ಮಥನು ತನ್ನ ಹೆಂಡತಿ ರತಿಯೆದುರು ವಿಷಯ ಪ್ರಸ್ತಾಪಿಸಿದಾಗ ಆಕೆಯು’ ಈ ದುಸ್ಸಾಹಸಕ್ಕೆ ಕೈ ಹಾಕಬೇಡ’ ಎಂದು ಹೇಳಿದ ಬುದ್ಧಿಮಾತುಗಳನ್ನು ಕೇಳದೆ ಇದ್ದುದರ ಪರಿಣಾಮ ಶಿವನ ಮೂರನೇ ಕಣ್ಣಿಗೆ ಸಿಕ್ಕು ಸುಟ್ಟು ಬೂದಿಯಾಗಿದ್ದಾನೆ ಮನ್ಮಥನು.
‘ ದೇವತೆಗಳ ಹಿತ ಕಾಪಾಡಲು ಹೋಗಿ ನೀನು ಪ್ರಾಣ ಕಳೆದುಕೊಂಡೆ’ ಎಂದು ಪ್ರಲಾಪಿಸುವ ರತಿಯ ದುಃಖದಲ್ಲಿ ಪಟ್ಟಭದ್ರರ,ಪ್ರಭುಗಳ ಹಿತಕ್ಕೆ ಬಲಿಯಾಗುವ ಪ್ರಭುಸೇವಕರ,ಸೈನಿಕರ ಪತ್ನಿಯರ ಅಸಹಾಯಕ ನೋವು ಇದೆ.ವಿಜಯನಗರದ ಅರಸರ ಡಣ್ಣಾಯಕರಾಗಿದ್ದ ಕನಕದಾಸರು ಹಲವು ಯುದ್ಧಗಳಲ್ಲಿ ಪಾಲ್ಗೊಂಡು ವೀರಾವೇಶದಿಂದ ಹೋರಾಡಿದ ಕಲಿಗಳು.ಯುದ್ಧದಲ್ಲಿ ಮೃತಸೈನಿಕರ ಮಡದಿ ಮಕ್ಕಳು ಅಳುವ ದೃಶ್ಯಗಳನ್ನು ಕಂಡು,ಕನಿಕರಗೊಂಡಿರಬೇಕು ಅವರ ಹೃದಯ. ಅಸಹಾಯಕ ಮಹಿಳೆಯರ ಮಡುಗಟ್ಟಿದ ದುಃಖವನ್ನು ಇಲ್ಲಿ ಕನಕದಾಸರು ರತಿಯ ಪ್ರಲಾಪದ ಮೂಲಕ ಚಿತ್ರಿಸಿದ್ದಾರೆ. ಈಗ ಪಶ್ಚಿಮದ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಇರಾನ್ ದೇಶದ ಸೈನಿಕರು ದೇಶರಕ್ಷಣೆಯ ಹೆಸರಿನಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿರುವ ವಿಡಿಯೋಗಳನ್ನು ನೋಡಿದಾಗ ಈ ಪ್ರಪಂಚದಲ್ಲಿ ಮನುಷ್ಯತ್ವಕ್ಕೆ ಅರ್ಥ ಇಲ್ಲ ಎನ್ನುವ ಭಾವನೆ ಬರುತ್ತಿದೆಯಲ್ಲದೆ ದೊಡ್ಡವರ ಸ್ವಾರ್ಥಕ್ಕೆ ಸಣ್ಣಜೀವಗಳು ಬಲಿಯಾಗುವ ಕ್ರೌರ್ಯದ ಬಗ್ಗೆ ಆಕ್ರೋಶ ಉಂಟಾಗುತ್ತದೆ. ಇಸ್ರೇಲ್ ನ ಹಿತಕಾಪಾಡಲು ಅಮೇರಿಕದ ಸೈನಿಕರು ಇರಾನ್ ಸೈನಿಕರನ್ನು ಕೊಲ್ಲುತ್ತಿರುವ ,ಇರಾನಿನ ಸೈನಿಕರು ಹೆಣಗಳ ರಾಶಿಯಾಗುತ್ತಿರುವ ದೃಶ್ಯಗಳನ್ನು ಕಂಡಾಗ ಅಮೇರಿಕಾದ ರಾಕ್ಷಸೀ ಕೃತ್ಯದ ಬಗ್ಗೆ ಎಂಥವರಲ್ಲೂ ಆಕ್ರೋಶ ಉಂಟಾಗುತ್ತದೆ. ಅಮೇರಿಕಾ ಇರಾನ್ ಯುದ್ಧಕ್ಕೆ ಇಸ್ರೇಲ್ ಕಾರಣ.ಇಸ್ರೇಲ್ ನ ಹಿತಾಸಕ್ತಿ ಪೊರೆಯಲೆಂದೇ ಅಮೇರಿಕಾ ಇರಾನ್ ನೊಂದಿಗೆ ಯುದ್ಧಕ್ಕೆ ಇಳಿದಿದೆ.ಇಸ್ರೇಲ್ ‘ಇಂದ್ರ’ನಾದರೆ ಅಮೇರಿಕಾವು ಇಂದ್ರನ ಭ್ರಾಂತಕೋಟೆಯನ್ನು ರಕ್ಷಿಸುವ ದೇವತೆಗಳ ಪಡೆಯ ಪ್ರತೀಕ.ಇರಾನ್ ನಲ್ಲಿ ಸಾಯುವ ಸಾವಿರಾರು ಸೈನಿಕರ ಹೆಂಡಿರು ಮಕ್ಕಳ ಗತಿ ಏನು? ಅವರ ರಕ್ಷಣೆ ಯಾರು ಮಾಡುತ್ತಾರೆ? ದೇಶಾಭಿಮಾನದ ಹೆಸರಿನಲ್ಲಿ ಕೊಲ್ಲಲ್ಪಟ್ಟ ಸೈನಿಕರ ಕುಟುಂಬಗಳ ಆಕ್ರಂದನಕ್ಕೆ ಸಾಂತ್ವನಹೇಳಬಲ್ಲರೆ ಸ್ವಾರ್ಥಿ,ದುರಂಕಾರ ಪೀಡಿತ ಇರಾನ್ ನಾಯಕರುಗಳು ಮತ್ತು ಸೇನಾಮುಖ್ಯಸ್ಥರುಗಳು ? ಮನಕಲಕುವ ಬೀಭತ್ಸ,ಭಯಾನಕ ದೃಶ್ಯಗಳನ್ನು ಕಂಡಾಗ ಯುದ್ಧದ ವಿಕರಾಳ ಮುಖದರ್ಶನವಾಗುತ್ತದೆ.ಕನಕದಾಸರು ಇಂತಹ ಯುದ್ಧದ ಮಾರಿಮುಖದರ್ಶನದಿಂದ ದುಃಖಿತರಾಗಿ ಯುದ್ಧಸಲ್ಲದು ಎನ್ನುವ ಸಂದೇಶ ಸಾರುವ ದೃಷ್ಟಿಯಿಂದ ರತಿಯ ಪಾತ್ರವನ್ನು ಬಳಸಿಕೊಂಡು ಮನುಕುಲಕ್ಕೆ ಶಾಂತಿಯ ಮಹತ್ವವನ್ನು ಸಾರಿದ್ದಾರೆ.
೦೮.೦೪.೨೦೨೬