ಬಸವರಾಜ ಕರೇಗಾರ
ಶಹಾಪುರ,,
ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳು ಕೆಲವೆ ಸಮುದಾಯಗಳ ಕಪಿಮುಷ್ಠಿಯಲ್ಲಿವೆ. ಉತ್ತರ ಕರ್ನಾಟಕದಲ್ಲಿ ಒಂದು ಸಮುದಾಯ, ದಕ್ಷಿಣ ಕರ್ನಾಟಕದಲ್ಲಿ ಇನ್ನೊಂದು ಸಮುದಾಯ, ಬೆಳಗಾವಿ ವಿಭಾಗದಲ್ಲಿ ಇನ್ನೊಂದು ಸಮುದಾಯ ಹೀಗೆ ಕೆಲವೇ ಸಮುದಾಯಗಳ ಕಪಿ ಮುಷ್ಟಿಯಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಸಾಮಾಜಿಕ ನ್ಯಾಯವಿಲ್ಲದೆ ಬ್ಯಾಂಕುಗಳ ನಿರ್ದೇಶಕರ ಆಯ್ಕೆಯಲ್ಲಿ ಮೀಸಲಾತಿ ಇಲ್ಲದೆ ಕೆಲವು ಪ್ರಭಾವಶಾಲಿ ಸಮುದಾಯಗಳು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದಾರೆ.ಅದೇ ರೀತಿಯಾಗಿ ಅವಾವ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಹಾಗೂ ರಾಜ್ಯ ಅಧ್ಯಕ್ಷರ ಆಯ್ಕೆಯಲ್ಲಿಯೂ ಯಾವ ಮೀಸಲಾತಿ ಇಲ್ಲದೆ ಕೆಲವೊಂದು ಸಮುದಾಯಗಳು ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ವಿಪರ್ಯಾಸ. ಇಂತಹ ವಿಷಯಗಳನ್ನು ಸಾಮಾಜಿಕ ಅಸಮತೋಲನ ಎಂದು ಹೋರಾಡುತ್ತಿರುವ ಸಂಘಟನೆಗಳು ಇದುವರೆಗೆ ಪ್ರತಿಭಟಸದೆ ಇರುವುದು ದುರದೃಷ್ಟಕರ. ಸಣ್ಣಪಟ್ಟ ವಿಷಯಗಳಿಗೆ ಪ್ರತಿಭಟನೆ ಮಾಡುವ ಸಂಘಟನೆಗಳು ಇಂತಹ ಗಂಭೀರ ವಿಷಯಗಳ ಬಗ್ಗೆ ಯಾರು ಪ್ರತಿಭಟಿಸುತ್ತಿಲ್ಲ.

ಸಹಕಾರಿ ಬ್ಯಾಂಕುಗಳ ನಿರ್ದೇಶಕರಲ್ಲಿ ಸಹಕಾರ ಇಲಾಖೆ ಮಾಜಿ ಸಚಿವ ರಾಜಣ್ಣನವರು ಇತ್ತೀಚೆಗೆ ಕೆಲವು ದಿನಗಳ ಹಿಂದೆ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಆಯ್ಕೆಯಲ್ಲಿ ಮೀಸಲಾತಿ ಅನಿವಾರ್ಯ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಅಹಿಂಧವರ್ಗದ ಯಾವ ಸಮುದಾಯದ ನಾಯಕರು ಕೂಡ ಧ್ವನಿಯೆತ್ತಲಿಲ್ಲ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬಹುದಿತ್ತು. ಕೆಲವು ಜಿಲ್ಲೆಗಳಲ್ಲಂತೂ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಆಯ್ಕೆಗಳಲ್ಲಿ ಮೀಸಲಾತಿಯ ಬಗ್ಗೆ ಚರ್ಚೆ ವಿಷಯ ಚರ್ಚೆಗೆ ಬಂದಾಗ ರಾಜ್ಯ ಅಧ್ಯಕ್ಷರಾಗಿದ್ದ ಜಿ ಟಿ ದೇವೇಗೌಡ ಅವರು ಈಗಾಗಲೇ ಪಿಎಲ್‌ಡಿ ಬ್ಯಾಂಕುಗಳಲ್ಲಿ ಮೀಸಲಾತಿ ಜಾರಿಗೆ ತರಲಾಗಿದೆ. ಅಧ್ಯಕ್ಷರ ಆಯ್ಕೆಯಲ್ಲಿ ಮೀಸಲಾತಿ ಏಕೆ ಬೇಕು ಎಂದು ರಾಜಾರೋಷವಾಗಿ ಹೌಹಾರಿ ಭಯಂಕರ ಭಾಷಣ ಮಾಡಿದ್ದರು.ಪ್ರತ್ಯುತ್ತರ ಯಾರು ಕೊಡಲಿಲ್ಲ. ಆದರೆ ಸರ್ಕಾರ ಮಾತ್ರ ಸಹಕಾರಿ ಇಲಾಖೆಗಳ ನಿರ್ದೇಶಕರ ಆಯ್ಕೆಯಲ್ಲಿ ಮೀಸಲಾತಿ ಜಾರಿಗೆ ತರಲೇ ಇಲ್ಲ. ರಾಜಣ್ಣನವರ ಕನಸು ನನಸಾಗಿ ಉಳಿಯಿತು. ಕೆಳ ಸಮುದಾಯದ ಜನರು ಅಧಿಕಾರ ಅನುಭವಿಸಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಿದ್ಧಾಂತ. ಆದರೆ ಸಹಕಾರಿ ಇಲಾಖೆಯಲ್ಲಿ ಮೀಸಲಾತಿ ಏಕೆ ಜಾರಿಗೆ ತರುತ್ತಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ.

ಕಲಬುರ್ಗಿ ಯಾದಗಿರಿ ಸಹಕಾರಿ ಬ್ಯಾಂಕ್ ಸೇರಿದಂತೆ ರಾಜ್ಯಾದ್ಯಂತ ಒಂದೇ ಸಮುದಾಯದ ನಾಯಕರು 20 ವರ್ಷಕ್ಕಿಂತಲೂ ಹೆಚ್ಚು ಅವಧಿಯವರೆಗೆ ನಿರ್ದೇಶಕರಾಗಿ ಆಯ್ಕೆಯಾಗುತ್ತಾ ಬಂದಿರುವುದು ದುರಂತ. ರಾಜ್ಯದ ಇಡೀ ಸಹಕಾರಿ ಇಲಾಖೆ ಕೆಲವೇ ಜನರ ಕಪಿಮುಷ್ಟಿಯಲ್ಲಿದೆ ಎನ್ನಬಹುದು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಸಹಕಾರಿ ಇಲಾಖೆಯಲ್ಲಿ ಮಾತ್ರ ಸ್ಥಳ ಸಮುದಾಯದ ನಾಯಕರು ಅಧಿಕಾರ ಅನುಭವಿಸದೇ ಇರುವುದು ಬೇಸರದ ಸಂಗತಿ. ಈ ವಿಷಯದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಆರ್ ಬಿ ಐ ಕಾಯ್ದೆ ಜಾರಿಗೆ ತರದ ರಾಜ್ಯ ಸರ್ಕಾರ.
ಇತ್ತೀಚೆಗೆ ಕೇಂದ್ರ ಆರ್ ಬಿ ಐ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (2025 ಆಗಸ್ಟ್) ಜಾರಿಗೆ ತಂದಿದೆ. ಸಹಕಾರಿ ಬ್ಯಾಂಕುಗಳಲ್ಲಿ ನಿರ್ದೇಶಕರ ಗರಿಷ್ಠ ಅವಧಿ 10 ವರ್ಷಗಳಿಗೆ ಮಿತಿಗೊಳಿಸಲಾಗಿದೆ.ಈ ನಿಯಮ 1 ಆಗಸ್ಟ್ 2025ರಿಂದ ಜಾರಿಯಲ್ಲಿದ್ದು ದೇಶದ ಎಲ್ಲಾ ರಾಜ್ಯಗಳಿಗೆ ಪತ್ರ ರವಾನಿಸಲಾಗಿದೆ. ಮಹಾರಾಷ್ಟ್ರ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದ ಆರ್ ಬಿ ಐ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿವೆ.ಆದರೆ ಕರ್ನಾಟಕ ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ 10 ವರ್ಷ ಬ್ಯಾಂಕ್ ನಿರ್ದೇಶಕರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದು ಇದು ಆರ್ ಬಿ ಐ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (2025 ಆಗಸ್ಟ್)ಯ ಉಲ್ಲಂಘನೆಯಾದಂತಾಗುತ್ತದೆ. ರಾಜ್ಯ ಸರ್ಕಾರ ಈ ನಿಯಮವನ್ನು ಜಾರಿಗೆ ತರದೇ ಇರುವುದು ದುರದೃಷ್ಟಕರ. ಈ ನಿಯಮ ರಾಜ್ಯದಲ್ಲಿ ಜಾರಿಯಾದರೆ ಒಬ್ಬ ವ್ಯಕ್ತಿ 10 ವರ್ಷ ನಿರ್ದೇಶಕರಾಗಿ ಆಯ್ಕೆಯಾದ ಮೇಲೆ ಮತ್ತೊಂದು ಅವಧಿಗೆ ನಿರ್ದೇಶಕರಾಗಲು ಬರುವುದಿಲ್ಲ. ಈಗಾಗಲೇ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ನಿರ್ದೇಶಕರಾದರೆ ಅವರ ಸದಸ್ಯತ್ವ ರದ್ದಾಗುತ್ತದೆ. ಸರ್ಕಾರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಸಹಕಾರಿ ಬ್ಯಾಂಕುಗಳಲ್ಲಿ ಮೀಸಲಾತಿ ಜಾರಿಗೊಳಿಸಿ ಕೇಂದ್ರ ಆರ್‌ಬಿಐ (2025) ತಿದ್ದುಪಡಿ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಸಿದರೆ ಸಮುದಾಯದವರಿಗೆ ಅಧಿಕಾರ ಸಿಕ್ಕಂತಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.